✍️ ಶಾಝಿಲ್ ಉಸ್ಮಾನ್
ಈಗ ಕಳೆದ ವಾರ ನಡೆದ ಮಹತ್ವದ ಬೆಳವಣಿಗೆಯೆಂದರೆ ಕತರ್ ಮೇಲೆ ಇಸ್ರೇಲ್ ಬಾಂಬು ಹಾಕಿದ್ದು. ಇಸ್ರೇಲಿನ ಕ್ಷಿಪಣಿ ದಾಳಿ ಜಗತ್ತನ್ನೂ ವಿಶೇಷವಾಗಿ ಅರಬ್ಲೀಗ್, ಒಐಸಿ ಮತ್ತು ಜಿಸಿಸಿ ದೇಶಗಳನ್ನು ಬೆಚ್ಚಿ ಬೀಳುವಂತೆ ಮಾಡಿದ್ದು ಹೌದು. ಅರಬರು ದಿಕ್ಕೆಟ್ಟವರಂತೆ ಕತರ್ನ ದೋಹದಲ್ಲಿ ಒಂದು ಶೃಂಗ ಸಭೆ ಮಾಡಿದರು. ಸೆಪ್ಟಂಬರ್ 9ರ ಇಸ್ರೇಲಿನ ಕ್ಷಿಪಣಿ ದಾಳಿಯನ್ನು ಖಂಡಿಸಿದರು. ಹಮಾಸ್ ನಾಯಕರ ಜೊತೆ ಗಾಝದಲ್ಲಿ ಕದನ ವಿರಾಮದ ಮಾತುಕತೆ ನಡೆಯುತ್ತಿದ್ದ ಈ ಸಂದರ್ಭವನ್ನು ನೋಡಿಯೇ ಇಸ್ರೇಲ್ ಬಾಂಬು ಹಾಕಿದ್ದು. ಇದು ಚರ್ಚೆಯನ್ನು ಹಾಳುಗೆಡಹುವುದಕ್ಕೂ ಹಮಾಸ್ ನಾಯಕರನ್ನು ಹತ್ಯೆ ಮಾಡುವುದಕ್ಕೂ ಆಗಿತ್ತು.
ಖಾಲಿದ್ ಮಿಶೆಲ್ ಸಹಿತ ಹಮಾಸ್ ನಾಯಕರ ಹತ್ಯೆ ಮಾಡುವ ಇಸ್ರೇಲಿನ ಗುರಿ ತಪ್ಪಿತು. ಇಸ್ರೇಲ್ ಬಳಿ ಏನಿಲ್ಲ? ಬೇಹುಗಾರಿಕೆ ಡ್ರೋನಿದೆ. ಮೊಸಾದ್ ಗೂಢಚಾರರು ವಿಶ್ವಾದ್ಯಂತ ಹರಡಿಕೊಂಡಿದ್ದಾರೆ. ಹಾಗಿದ್ದೂ ಗುರಿತಪ್ಪಿದ್ದು ಹೇಗೆ ಎಂದು ಇಸ್ರೇಲ್ ಮತ್ತು ಡೊನಾಲ್ಡ್ ಟ್ರಂಪ್ ಬೆರಳು ಕಚ್ಚಿ ಕೊಂಡಿರಬಹುದು. ಆದರೆ ಜಗತ್ತಿನ ಎಲ್ಲ ನಿಯಮಾವಳಿಗಳನ್ನು ತೀರ್ಮಾ ನಿಸುವವರು ಇವರಲ್ಲ, ದೇವನಿದ್ದಾನೆ ಎಂಬುದು ಸೂಪರ್ಪವರ್ ಎಂದು ಘೋಷಿಸುವರಿಗೆ ಈಗ ಯಾಕೋ ಅರ್ಥವೇ ಆಗ್ತಿಲ್ಲ. ಮುಂದಕ್ಕೆ ಆಗಬಹುದು.
ಅಮೆರಿಕದ ಸ್ಟೇಟ್ ಸೆಕ್ರಟರಿ ಮಾರ್ಕೊ ರೊಬಿಯೊ ಕತರ್ಗೆ ಬಂದು ಕತರ್ನ ಪ್ರಧಾನಿ, ವಿದೇಶ ಸಚಿವರಾದ ಶೇಖ್ ಮುಹಮ್ಮದ್ ಬಿನ್ ಅಬ್ದರ್ರಹ್ಮಾನ್ ಬಿನ್ ಜಾಸಿಮ್ ಅಲ್ಥಾನಿಯವರನ್ನು ಭೇಟಿಯಾಗಿ ಮರಳಿ ಹೋಗಿದ್ದಾರೆ. ಕತರ್ ಮೇಲೆ ಬಾಂಬು ಬಿದ್ದದ್ದು ಇದೇ ರೋಬಿಯೊ ಇಸ್ರೇಲ್ಗೆ ಭೇಟಿ ನೀಡಿ ಅಮೆರಿಕಕ್ಕೆ ಮರಳಿದ ಬೆನ್ನಿಗೇ. ಏನಿದು ಆಟ? ಕತರ್ನ ಮೇಲೆ ಕ್ಷಿಪಣಿದಾಳಿ ಅಮೆರಿಕ-ಇಸ್ರೇಲಿನ ಜಂಟಿ ಸಂಚು. ಡೊನಾಲ್ಡ್ ಟ್ರಂಪ್ ಏನೂ ಗೊತ್ತಿಲ್ಲದಂತೆ ಹೇಳಿಕೆ ಯನ್ನು ನೀಡಿದ್ದಾರೆ.
ಹೋಗ್ಲಿ ಬಿಡಿ, ಈ ಅರಬ್ ಮುಸ್ಲಿಮರು ಎಷ್ಟು ದುರ್ಬಲರು ಗೊತ್ತಾ? ಒಂದು ಪ್ರತಿರೋಧ ಕೂಡ ಇಲ್ಲದಷ್ಟು ಈ ಅರಬ್ ಮುಸ್ಲಿಮರು ಇವತ್ತು ಆಧುನಿಕತೆ ಐಶಾರಾಮಿ ಲೋಕ ಪ್ರೀತಿಯಲ್ಲಿ ಮುಳುಗಿದ್ದಾರೆ. ಇವರ ವಿಶ್ವಾಸ ದುರ್ಬಲವಾಗಿದೆ. ಗಾಝ ಮತ್ತು ಇಸ್ರೇಲಿನ ಯುದ್ಧ ಕೊನೆಗೊಳಿಸಲು ಮಧ್ಯಸ್ಥಿಕೆಗೆ ಸಾಧ್ಯತೆಗಳಿರುವ ದೇಶ ಕತರ್ ಮಾತ್ರ ಆಗಿದೆ ಎಂದು ಕತರ್ನಿಂದ ಮಾರ್ಕೊ ರೊಬಿಯೋ ಹೋದದ್ದು. ಕತರ್ಗೆ ಹೆಮ್ಮೆ ಅನಿಸಬಹುದಾದ ಮತ್ತು ಅರಬರು ಖುಷಿ ಪಡಬಹುದಾದ ಮಾತುಗಳಿವು. ಅಮೆರಿಕ ತನ್ನ ಮಾತಿಗೆ ಪ್ರಾಮಾಣಿಕವಾಗಿದ್ದರೆ ಗಾಝದಲ್ಲಿ ಇಸ್ರೇಲಿನ ದಾಂಧಲೆಯನ್ನು ನಿಲ್ಲಿಸಬೇಕಿತ್ತಲ್ಲ. ಅಲ್ಲಿ ಈವರೆಗೆ ಅರುವತ್ತು ಸಾವಿರಕ್ಕೂ ಹೆಚ್ಚು ಜನರನ್ನು ಇಸ್ರೇಲ್ ಕೊಂದು ಹಾಕಿದೆ. ಟ್ರಂಪ್ ಇಸ್ರೇಲಿಗೆ ಗಾಝದ ನಾಗರಿಕರನ್ನು ಕೊಲ್ಲಲು ಮದ್ದುಗುಂಡು ಕೊಡ್ತಾ ಇದ್ದಾರೆ. ಅರಬರು ತಮ್ಮವರನ್ನೆ ಕೊಲ್ಲುವಾಗಲೂ ಕಣ್ಣೀರಿಳಿಸಿ ತಮ್ಮ ದಿನಚರಿಯಲ್ಲಿ ವ್ಯಸ್ತರಾಗುತ್ತಿದ್ದಾರೆ.
ಒಂದು ವೇಳೆ ಅರಬ್ ಮುಸ್ಲಿಮರು ಒಗ್ಗಟ್ಟಾಗಿರುತ್ತಿದ್ದರೆ ಈ ಪರಿಸ್ಥಿತಿ ಸೃಷ್ಟಿಯಾಗುವುದು ಸಾಧ್ಯವಿರಲಿಲ್ಲ. ಗಾಝದಲ್ಲಿ ಇಸ್ರೇಲ್ ಬಾಂಬು ಸುರಿಸಿ ಕೊಲ್ಲುವ ಕಾರ್ಯದಲ್ಲಿ ತೊಡಗುವ ಧೈರ್ಯ ಇಸ್ರೇಲಿಗಿರುತ್ತಿರಲಿಲ್ಲ. ಆದರೆ ಅರಬರು ಒಂದಾಗದಂತೆ ಅಮೆರಿಕ ಪ್ರೀಪ್ಲಾನ್ ಮಾಡುತ್ತಿದೆ. ಅರಬರ ವಿರುದ್ಧ ಇಸ್ರೇಲನ್ನು ಛೂ ಬಿಟ್ಟು ಅದರ ಕೈಯಲ್ಲಿ ಹೊಡೆಸುತ್ತಿದೆ. ಇಸ್ರೇಲ್ ಇಷ್ಟೆಲ್ಲ ನರಭಕ್ಷಕನಾದದ್ದು ಹೇಗೆ? ಅಮೆರಿಕದ ಬೆಂಬಲ ಇದ್ದುದರಿಂದ. ಅರಬರು ಇಷ್ಟೂ ದುರ್ಬಲರಾಗಿದ್ದು ಹೇಗೆ? ಅಮೆರಿಕವನ್ನು ನಂಬಿ ಕೂತದ್ದರಿಂದ.
ಹೀಗಾಗಿ ಅರಬರು ಅಥವಾ ಮುಸ್ಲಿಮರನ್ನು ಇಸ್ರೇಲಿನ ಝಿಯೊನಿಸಂ ಶತ್ರುಗಳೆಂದೇ ಈಗಲೂ ಪರಿಗಣಿಸುತ್ತಿದೆ. ಅರಬರ ಮೇಲೆ ಆದಿಪತ್ಯ ಅವರ ಅದಮ್ಯ ಕನಸ್ಸಾಗಿದೆ. ನೆತನ್ಯಾಹುರೊಂದಿಗೆ ಅರಬ್ ದೊರೆಗಳು ಒಳಗೊಳಗೆ ವ್ಯಾಪಾರ, ಫ್ರೆಂಡ್ಶಿಪ್ ಮಾಡಿದರೂ ಕೊನೆಗೆ ಇಡೀ ಅರಬನ್ನು ಗ್ರೇಟರ್ ಇಸ್ರೇಲ್ ತನ್ನ ತೆಕ್ಕೆಗೆ ತೆಗೆದುಕೊಳ್ಳದಂತೆ ಇವರಿಂದ ತಡೆಯಲು ಸಾಧ್ಯವಿಲ್ಲ. ಸ್ವಲ್ಪ ಪ್ರತಿರೋಧ ಇರಾನ್ ಮತ್ತು ಅದರ ಪ್ರಾಕ್ಸಿಗಳಿಂದ ಇಸ್ರೇಲ್ ಎದುರಿಸಬೇಕಾಗಿದೆ. ಅಮೆರಿಕದ ಮಡಿಲಲ್ಲಿ ಇತರ ಅರಬರಂತೆ ಅದು ಕೂತಿಲ್ಲ.
ಮತ್ತೆ ವಿಷಯಕ್ಕೆ ಬರೋಣ, ಕತರ್ ಮೇಲೆ ದಾಳಿ ನಡೆದದನ್ನು ನೋಡಿ ಅರಬ್ ಮುಸ್ಲಿಂ ದೇಶಗಳು ಸುಮ್ಮನೆ ಕೂರಲಿಲ್ಲ. ಈ ಹಿನ್ನೆಲೆಯಲ್ಲಿ 57 ದೇಶಗಳು ದೋಹದಲ್ಲಿ ಸೇರಿ ಅರಬ್ ಇಸ್ಲಾಮಿಕ್ ಶೃಂಗ ನಡೆಸಿದರು. ಅದರಲ್ಲಿ ಇಸ್ರೇಲನ್ನು ಕಟುವಾಗಿ ಖಂಡಿಸುವ ಕೆಲಸವನ್ನು ಬಹಳ ಒಗ್ಗಟ್ಟಿನಿಂದ ಮಾಡಿದರು. ವಿಶ್ವಸಂಸ್ಥೆಯ ಚಾರ್ಟರ್ ಪ್ರಕಾರ ಕತರ್ ತನ್ನ ದೇಶದ ಸುರಕ್ಷತೆಗೆ ತೆಗೆದುಕೊಳ್ಳುವ ಎಲ್ಲ ಕ್ರಮಗಳಿಗೂ ನಮ್ಮ ಬೆಂಬಲ ಇದೆ ಅಂತ ಹೇಳಿದರು. ಹೀಗೆ ಹೇಳುವಾಗ ಅವರಲ್ಲಿ ಸುನ್ನಿ ಶಿಯಾ ಭೇದ ಯಾವ ಕಾಲಂಗಳೂ ಇರಲಿಲ್ಲ ಮತ್ತು ಅರಬ್ ಮತ್ತು ಮುಸ್ಲಿಂ ದೇಶಗಳ ನಾಯಕರು ಕತರ್ಗೆ ಸಂಪೂರ್ಣ ಬೆಂಬಲ ಸೂಚಿಸಿದರು. ಆದರೆ ಇಷ್ಟರಿಂದ ಯಾವ ಸಂಚಲನವೂ ಆಗಿಲ್ಲ.
ಹೋಗ್ಲಿ ಬಿಡಿ, ದಾಳಿಯ ಪೆಟ್ಟು ತಿಂದ ಕತರ್ ಏನು ಮಾಡಿತು? ಒಂದು ಸಭೆ ಆಯೋಜಿಸಿತು. ಅಂದರೆ ಈ ಅರಬ್ ನಾಯಕರು ಏನೂ ಮಾಡುವವರಲ್ಲ. ಜಗತ್ತು ಇದನ್ನು ಎಂದೋ ನಿರ್ಧರಿಸಿದೆ. ಇಸ್ರೇಲ್ ಅನ್ನು ಕಟ್ಟಿಹಾಕುವುದಕ್ಕೆ ಅರಬರು ಏನಾದರೂ ಮಾಡುವುದಿದ್ದರೆ ಕತರ್ ಮೇಲೆ ದಾಳಿ ಮಾಡುವ ಮುಂಚೆಯೇ ಮಾಡಬಹುದಾಗಿತ್ತಲ್ಲ. ಅಲ್ಲ ಗಾಝದಲ್ಲಿ ಇಸ್ರೇಲ್ ಬಾಂಬು ಹಾಕಿ ಫೆಲೆಸ್ತೀನಿಯರನ್ನು ಕೊಲ್ಲುತ್ತಿದೆ. ಇದು ಸಾಕಿತ್ತು. ಇವರು ಕತರ್ಗಲ್ಲ ಸೌದಿಗೆ ಇಸ್ರೇಲ್ ಬಾಂಬು ಹಾಕಿದರೂ ಹೇಳಿಕೆ ನೀಡಿ ಯಾರೇ ಹೊರತು ಅತ್ತಿತ್ತ ಅಲ್ಲಾಡಲ್ಲ. ಜಗತ್ತಿನಲ್ಲಿಯೇ ಅದ್ದೂರಿಯಾದ ಒಂದು ಹೊಟೇಲಿನಲ್ಲಿ ಸಭೆ ನಡೆಸಬಹುದು.
ನಿಮಗೂ ಗೊತ್ತಿದೆ. ನಿಜಕ್ಕಾದರೆ ಹೂತಿ, ಹಿಝ್ಬುಲ್ಲ. ಇರಾನ್ಗಳನ್ನು ಬಿಟ್ಟು ಇಸ್ರೇಲನ್ನು ಕಟ್ಟಿಹಾಕುವ ಶಕ್ತಿ ಕತರ್ಗೂ ಇಲ್ಲ ಎಂಬುದು ಸದ್ಯ ಎದ್ದು ಕಾಣಿಸುತ್ತಿರುವ ವಿದ್ಯಮಾನವಾಗಿದೆ.
ದೋಹದ ಸಮ್ಮಿಟ್ನಲ್ಲಿ ಇಸ್ರೇಲ್ ವಿರುದ್ಧ ಪ್ರಾಯೋಗಿಕ ಕ್ರಮ ಕೈಗೊಳ್ಳಬೇಕೆಂದು ಒಮನ್ ಹೇಳಿದ್ದೂ ನಡೆದಿದೆ. ಇಸ್ರೇಲನ್ನು ಅರಬ್ ಜಗತ್ತು ಒಂದುಗೂಡಿ ಎದುರಿಸಬೇಕೆಂದಾಗಿತ್ತು ಒಮನ್ನ ಹೇಳಿದ್ದು. ಒಮನ್ ಉಪ ಪ್ರಧಾನಿ ಸಯ್ಯಿದ್ ಶಿಹಾಬ್ ಬಿನ್ ತಾರಿ ಅಲ್ ಸಈದ್ ಇಸ್ರೇಲಿಗೆ ಪ್ರಾಯೋಗಿಕವಾಗಿ ಬುದ್ಧಿ ಕಲಿಸ ಬೇಕೆಂದು ಹೇಳುವಾಗಲೂ ಇದು ಸಾಧ್ಯವಾಗುವುದಲ್ಲ ಎಂದು ಅವರಿಗೂ ಗೊತ್ತಿರುತ್ತದೆ ಎಂದು ತಿಳಿಯಬಹುದಾಗಿದೆ. ಇವರು ಸಭೆ ಸೇರಿ ಬೆಂಬಲ ಸೂಚಿಸಿದ ಮೇಲೆಯೂ ಕತರ್ ಏನೂ ಮಾಡ್ಲಿಲ್ಲ. ಕ್ರಮ ಜರಗಿಸುವುದಾದರೆ ಇಷ್ಟರಲ್ಲೆ ಕತರನಲ್ಲೇ ಇರುವ ಅಮೆರಿಕದ ಸೈನಿಕ ಅಡ್ಡೆಯನ್ನು ಮುಚ್ಚಿಸಬೇಕಿತ್ತು. ಅಮೆರಿಕ ಹಸ್ಟೇಚ್ ಸೆಕ್ರೆಟರಿ ಇಸ್ರೇಲಿಗೆ ಭೇಟಿ ನೀಡಿದ ನಂತರವೇ ಕತರ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ಮಾಡಿದ್ದು.
ದೋಹಕ್ಕೆ ಬಂದ ಮಾರ್ಕೊ ರೊಬಿಯೊ ಕತರ್ ಮತ್ತು ಅಮೆರಿಕಗಳ ನಡುವಿನ ಸಂಬಂಧ ಇನ್ನು ಯಥಾವತ್ತಾಗಿ ಮುಂದುವರಿಯುತ್ತದೆ ಎಂದೇ ಹೇಳಿ ಹೋದರು. ಮಾತ್ರ ಅಲ್ಲ ಕತರಿನ ಸಾರ್ವಭೌಮತೆಗೆ ಸುರಕ್ಷೆಗೆ ಅಮೆರಿಕ ಸಂಪೂರ್ಣ ಬೆಂಬಲ ನೀಡುವುದೆಂದು ಹೇಳಿ ಹೊರಟು ಹೋದರು.
ಹಾಗಿದ್ದರೆ ಇಸ್ರೇಲ್ ಕತರ್ ಮೇಲೆ ಈಗ ಏನು ಮಾಡಿದ್ದು? ಇಸ್ರೇಲ್ ದಾಳಿ ಕತರಿನ ಸಾರ್ವಭೌಮತೆಯ ಮೇಲೆಯ ಹಲ್ಲೆಯಲ್ವಾ? ರೋಬಿಯೊ ಮತ್ತು ಟ್ರಂಪ್ಗೆ ಇದನ್ನು ಮುಖಕ್ಕೆ ರಾಚಿದಂತೆ ಅರಬರು ಹೇಳಬೇಕಾಗಿತ್ತು. ಹೇಳಿಲ್ಲ. ಆ ಧೈರ್ಯ ಅವರಿಗಿಲ್ಲ. ಅಮೆರಿಕವನ್ನು ಕೆಣಕಿದರೆ ಅರಬರ ಬಿಸಿನೆಸ್ ಮುಳುಗಿ ಹೋಗಬಹುದು. ತೈಲದ ಕಡಿವಾಣ ಅಮೆರಿಕದ ಕೈಗೆ ಕೊಟ್ಟಿರುವ ಈ ಕೊಲ್ಲಿ ದೊರೆಗಳು ಚೇತರಿಸದಂತೆ ಅಮೆರಿಕ ಪೆಟ್ಟು ಕೊಡ ಬಹುದು. ಹಿಂದೆಲ್ಲ ಅಂದಿನ ಕಾಲದ ಅರಬರು ಜಿಹಾದ್ ಪ್ರಿಯರಾಗಿದ್ದರು.
ಕತರ್ ಮೇಲೆ ಇಸ್ರೇಲಿನ ದಾಳಿ ಅಮರಿಕದ ಅನುಮತಿಯಿಂದ ನಡೆದಿಲ್ಲ ಎಂದು ನೆತನ್ಯಾಹು ಮತ್ತು ಡೊನಾಲ್ಡ್ ಟ್ರಂಪ್ ಹೇಳುತ್ತಿದ್ದಾರೆ. ಅದನ್ನು ಜಗತ್ತು ನಂಬುವುದಿಲ್ಲ. ಕಾರಣವೂ ಇದೆ. ಒಂದನೆಯದಾಗಿ ದಾಳಿಗಿಂತ ಮುಂಚೆ ಇಸ್ರೇಲಿಗೆ ಹೋಗಿದ್ದು ಅಮೆರಿಕದ ಸ್ಟೇಟ್ ಸೆಕ್ರಟರಿ. ವಿಶ್ವಸಂಸ್ಥೆಯ ದ್ವಿರಾಷ್ಟ್ರ ಫಾರ್ಮೂಲ ಮಂಡಿಸಿದಾಗ ಅಮೆರಿಕ ಅದರ ವಿರುದ್ಧ ವೀಟೋ ಮಾಡಿದ್ದು ಎರಡನೆಯ ಕಾರಣವಾಗಿದೆ.
ಫೆಲಸ್ತೀನ್ ಸಮಸ್ಯೆಗೆ ದ್ವಿರಾಷ್ಟ್ರ ಪರಿಹಾರ ಎಂದು ಅರಬ್ ಶೃಂಗದಲ್ಲಿಯೂ ಅರಬರು ಪುನರುಚ್ಚರಿಸಿದ್ದಾರೆ. ಕತರ್ ಸಹಿತ ಅರಬರ ಈ ಅಭಿಪ್ರಾಯವನ್ನು ಕೂಡ ಅಮೆರಿಕ ಒಪ್ಪುವುದಿಲ್ಲ ಎಂದು ಅಮೆರಿಕ ವಿಶ್ವಸಂಸ್ಥೆಯಲ್ಲಿ ವೀಟೋ ಮೂಲಕ ತೋರಿಸಿಕೊಟ್ಟಿದೆ. ಈಗಾಗಲೇ ಇಸ್ರೇಲ್, ಸಿರಿಯ, ಲೆಬನಾನ್, ಯಮನ್, ಇರಾನ್ ಈಗ ಕತರ್ ಮೇಲೆ ಅದು ದಾಳಿ ಮಾಡಿದೆ. ಇದು ಅರಬರಿಗೆ ಬುದ್ಧಿ ಕಲಿಸಬೇಕಾಗಿದ್ದದಾಗಿದ್ದ ಪಾಠ ಆಗಿತ್ತು. ವಿನಾಶ ಕಾಲದಲ್ಲಿ ಅಕ್ಷರ ಕೂಡ ಓದಲು, ಓದಿದರೂ ಮನವರಿಕೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದಕ್ಕೆ ಅರಬ್ ಲೋಕದ ಕೈಲಾಗದ ಸ್ಥಿತಿ ಬಹಿರಂಗಪಡಿಸುತ್ತಿದೆ. ಹೌದು, ಇರಾನ್, ಯಮನ್ನ ಹೂತಿಗಳು ಬಿಟ್ಟರೆ ಇತರೆಲ್ಲ ಅರಬರು ಅಮೆರಿಕದ ಧೋತಿಯೊಳಗೆ ಹೋಗಿ ಈಗಲೂ ಐಶಾರಾಮದಿಂದ ದಿನ ದೂಡುತ್ತಿದ್ದಾರೆ.












