ಸನ್ಮಾರ್ಗ ವಾರ್ತೆ
ಮಂಗಳೂರು: ವಿಶ್ವ ಮೀನುಗಾರಿಕಾ ದಿನಾಚರಣೆಯ ಪ್ರಯುಕ್ತ ನವೆಂಬರ್ 22ರಂದು ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಬೆಂಗ್ರೆ ಘಟಕ ಹಾಗೂ ಮಹಿಳಾ ಸಮಾಜದ ಜಂಟಿ ಆಶ್ರಯದಲ್ಲಿ ‘ವರ್ಲ್ಡ್ ಫಿಶ್ಶರೀಸ್ ಡೇ 2020, ಸೆಲೆಬ್ರೇಟಿಂಗ್ ಅವರ್ ಪ್ರೈಡ್’ ಎಂಬ ಆಶಯದೊಂದಿಗೆ ತೋಟ ಬೆಂಗ್ರೆಯ ಮಹಿಳಾ ಸಮಾಜ ಹಾಲ್‌ನಲ್ಲಿ ಮಹಿಳಾ ಮೀನುಗಾರರಿಗೆ ಅಭಿನಂದನಾ ಕಾರ್ಯಕ್ರಮವು ನೆರವೇರಿತು.
ಈ ಸಂದರ್ಭದಲ್ಲಿ ಅತಿಥಿಗಳಾದ ಶ್ರೀಮತಿ ವಂದನಾರವರು (ಸಹಾಯಕ ಪ್ರಾಧ್ಯಾಪಕಿ, ಮೀನುಗಾರಿಕಾ ಕಾಲೇಜು) ಮೀನುಗಾರಿಕಾ ಮಹಿಳೆಯರಿಗೆ ಸರಕಾರದಿಂದ ದೊರಕುವ ಸಾಲ ಸೌಲಭ್ಯಗಳು, ಗುಡಿ ಕೈಗಾರಿಕೆ, ಸಾಂಕ್ರಾಮಿಕ ರೋಗದ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ಇನ್ನೋರ್ವ ಅತಿಥಿ ಶ್ರೀಮತಿ ಸ್ವಾತಿ (ಸಹಾಯಕ ಪ್ರಾಧ್ಯಾಪಕಿ ಮೀನುಗಾರಿಕಾ ಕಾಲೇಜು) ಮೀನುಗಾರರನ್ನು ಅಭಿನಂದಿಸುತ್ತಾ ಕರಾವಳಿಯ ಶುಚಿತ್ವಕ್ಕೆ ಒತ್ತು ಕೊಡುತ್ತಾ, ಸಮಾಜದ ಬದಲಾವಣೆಯಲ್ಲಿ ಮಹಿಳೆಯರ ಪಾತ್ರ ಮುಖ್ಯವೆಂದು ಪ್ರೋತ್ಸಾಹದ ಮಾತುಗಳನ್ನಾಡಿದರು.
ಹಲವು ವರ್ಷಗಳ ಪರಿಶ್ರಮಕ್ಕಾಗಿ ಅತಿಥಿಗಳ ಸಮ್ಮುಖದಲ್ಲಿ 11 ಮಂದಿ ಮಹಿಳಾ ಮೀನುಗಾರರನ್ನು ಸನ್ಮಾನಿಸಲಾಯಿತು.
ಸಮಾರೋಪ ಮಾತುಗಳನ್ನಾಡಿದ ಜಿಐಓ ಜಿಲ್ಲಾಧ್ಯಕ್ಷೆ ತಬಸ್ಸುಮ್‌ರವರು ಮಹಿಳಾ ಮೀನುಗಾರರನ್ನು ಅಭಿನಂದಿಸುತ್ತಾ ಜಿಐಓ ನ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾಜಿ ಕಾರ್ಪೊರೇಟರ್‌ಗಳಾದ ಶ್ರೀಮತಿ ಮೀರಾ ಕರ್ಕೇರ ಹಾಗೂ ಶ್ರೀಮತಿ ಶಕುಂತಲಾ ಕರ್ಕೇರಾರವರು ಭಾಗಿಯಾದರು. ಅತಿಥಿಗಳಿಗೆ ನೆನಪಿನ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ 80 ಕ್ಕಿಂತ ಹೆಚ್ಚು ಸ್ಥಳೀಯ ಮಹಿಳೆಯರು ಭಾಗವಹಿಸಿದ್ದರು. ಎಲ್ಲಾ ಮೀನುಗಾರ ಮಹಿಳೆಯರಿಗೆ ಪ್ರೀತಿ ಪೂರ್ವಕವಾಗಿ ಹ್ಯಾಂಡ್ ಮೇಡ್ ಬ್ಯಾಡ್ಜ್ ಹಾಗೂ ಉಪಹಾರವನ್ನು ನೀಡಲಾಯಿತು. ಅಸ್ಮೀನಾರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.












