ಉತ್ತರ ಪ್ರದೇಶದಲ್ಲಿ ಆರು ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ: ಮಂತ್ರವಾದಕ್ಕಾಗಿ ಶ್ವಾಸಕೋಶವನ್ನು ಹೊರತೆಗೆದರು

0
471

ಸನ್ಮಾರ್ಗ ವಾರ್ತೆ

ಕಾನ್ಪುರ,ನ.17: ಉತ್ತರಪ್ರದಶದ ಕಾನ್ಪುರದಲ್ಲಿ ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾದ ಆರು ವರ್ಷದ ಬಾಲಕಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿದ ಬಳಿಕ ಬಾಲಕಿಯ ಶ್ವಾಸಕೋಶವನ್ನು ಹೊರಗೆ ತೆಗೆಯಲಾಗಿತ್ತು. ಮಕ್ಕಳಾಗಲು ಮಂತ್ರವಾದಕ್ಕಾಗಿ ಬಾಲಕಿಯ ಶ್ವಾಸಕೋಶವನ್ನು ಹೊರಗೆ ತೆಗೆಯಲಾಗಿತ್ತು ಎಂಬುದಾಗಿ ಪೊಲೀಸರು ಹೇಳಿದ್ದಾರೆ.

ಶನಿವಾರ ದೀಪಾವಳಿ ಪಟಾಕಿ ಖರೀದಿಸಲು ಹೋದ ಬಾಲಕಿ ಗೌತಂ ಪುರ ಎಂಬಲ್ಲಿಂದ ಕಾಣೆಯಾಗಿದ್ದಳು. ಮಗುವನ್ನು ಮನೆಯವರು ಕಾಡಿನಲ್ಲಿಯೂ ಹುಡುಕಿದರೂ ಪತ್ತೆಯಾಗಿರಲಿಲ್ಲ.ಆದರೆ ರವಿವಾರ ಬೆಳಗ್ಗೆ ಮಗುವಿನ ಮೃತದೇಹ ಕಾಡಿನಲ್ಲಿ ಊರವರಿಗೆ ಕಂಡು ಬಂದಿತ್ತು. ಸಮೀಪದ ಮರದ ಬುಡದಲ್ಲಿ ಮಗುವಿನ ಆಭರಣ, ವಸ್ತ್ರ, ಚಪ್ಪಲ್ಲಿಯೂ ಇತ್ತು.

ನಂತರ ಆರೋಪಿಗಳಾದ 20 ವರ್ಷದ ಅಂಕುಲ್ ಕುರಿಲ್, 31 ವರ್ಷದ ಬಿರಾನ್‍ರನ್ನು ಪೊಲೀಸರು ರವಿವಾರ ಬಂಧಿಸಿದ್ದರು. ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಎಸಗಿದ ಬಳಿಕ ಬಾಲಕಿಯ ಶ್ವಾಸಕೋಶವನ್ನು ಹೊರ ತೆಗೆದು ಮುಖ್ಯ ಸೂತ್ರಧಾರ ಪರಶುರಾಂ ಕುರಿಲ್‍ಗೆ ಮಂತ್ರವಾದಕ್ಕಾಗಿ ಕೊಟ್ಟಿದ್ದರು ಎಂದು ಉನ್ನತ ಪೊಲೀಸ ಅಧಿಕಾರಿ ಬ್ರಜೇಶ್ ಶ್ರೀವಾಸ್ತವ ತಿಳಿಸಿದ್ದಾರೆ.

ಪರಶುರಾಮನನ್ನು ಬಂಧಿಸಲಾಗಿದ್ದು, ಘಟನೆಯ ಕುರಿತು ಅರಿತಿದ್ದ ಈತನ ಪತ್ನಿಯನ್ನು ಕಸ್ಟಡಿಗೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 1999ರಲ್ಲಿ ಮದುವೆಯಾಗಿದ್ದ ಪರಶುರಾಮನ ಪತ್ನಿಗೆ ಈ ವರೆಗೂ ಮಗು ಜನಿಸಿಲ್ಲ. ನಂತರ ದುರ್‍ಮಂತ್ರವಾದಕ್ಕಾಗಿ ಸಂಬಂಧಿಕ ಅಂಕುಲ್ ಮತ್ತು ಆತನ ಗೆಳೆಯ ಬಿರಾನನೊಡನೆ ಮಗುವನ್ನು ಅಪಹರಿಸಿ ಶ್ವಾಸಕೋಶ ತರಲು ಹೇಳಿದ್ದ. ನಂತರ ಮದ್ಯದ ಅಮಲಿನಲ್ಲಿದ್ದ ಅಂಕುಲ್ ಮತ್ತು ಬಿರಾನ್ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಕ್ರೂರವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿ ಶ್ವಾಸಕೋಶ ಹೊರತೆಗೆದರೆಂದು ಪೊಲೀಸರು ತಿಳಿಸಿದ್ದಾರೆ.