ದೇಶದ್ರೋಹ ಆರೋಪಿಸಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ: ಪಿಎಂ ಮೋದಿ ವಿರುದ್ಧ ಶಿವಸೇನೆ ವಾಗ್ದಾಳಿ

0
480

ಸನ್ಮಾರ್ಗ ವಾರ್ತೆ

ಮುಂಬೈ: ಕೇಂದ್ರ ಸರಕಾರ ಕೃಷಿ ಕಾನೂನು ವಿರುದ್ಧ ಪ್ರತಿಭಟನೆ ಮುಂದುವರಿಯುತ್ತಿರುವ ವೇಳೆ ಶಿವಸೇನೆಯ ಮುಖವಾಣಿ ಸಾಮ್ನಾ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದೆ. ಜೊತೆಗೆ ರೈತ ಕಾನೂನು ಚರ್ಚಿಸಲು ಸುಪ್ರೀಂಕೋರ್ಟು ನೇಮಕಗೊಳಿಸಿದ ನಾಲ್ವರ ಸಮಿತಿಯನ್ನು ಅದು ಟೀಕಿಸಿದೆ.

“ನಿನ್ನೆಯ ತನಕ ನಾಲ್ವರೂ ಸದಸ್ಯರು ಕೃಷಿ ಕಾನೂನನ್ನು ಬೆಂಬಲಿಸಿ ವಾದಿಸಿದವರು. ಆದ್ದರಿಂದಲೇ ರೈತ ಸಂಘಟನೆಗಳು ಸಮಿತಿಯನ್ನು ಒಪ್ಪಿಕೊಂಡಿಲ್ಲ. ಖಾಲಿಸ್ಥಾನ್ ಬೆಂಬಲಿಗರು ರೈತ ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ಹೇಳಿದೆ. ಸರಕಾರದ ಈ ಹೇಳಿಕೆ ದಿಗ್ಭ್ರಮೆ ಸೃಷ್ಟಿಸಿದೆ ಎಂದು ಸಂಪಾದಕೀಯ ಬರೆದಿದೆ.

ಸುಪ್ರೀಂ ಕೋರ್ಟು ನೇಮಿಸಿದ ನಾಲ್ವರ ಸಮಿತಿಯೊಂದಿಗೆ ಸಹಕರಿಸುವುದಿಲ್ಲ ಎಂದು ರೈತರು ಹೇಳಿದ್ದಾರೆ. ಸಮಿತಿ ರೂಪೀಕರಣದಲ್ಲಿ ಕೇಂದ್ರ ಸರಕಾರ ಕೋರ್ಟನ್ನು ತಪ್ಪಾಗುವಂತೆ ಮಾಡಿದೆ. ಮೂರು ಕೃಷಿ ಕಾನೂನನ್ನು ಬೆಂಬಲಿಸಿ ಅದಕ್ಕಾಗಿ ವಾದಿಸುವವರು ಸಮಿತಿಯ ಸದಸ್ಯರು ಎಂದು ರೈತ ಸಂಘಟನೆಗಳು ಹೇಳಿದೆ. ಖಾಲಿಸ್ತಾನ್ ಬೆಂಬಲಿಗರು ಪ್ರತಿಭಟನೆಯಲ್ಲಿ ಸೇರಿದ್ದಾರೆ ಎಂದು ಹೇಳಿದ್ದೇ ಕೇಂದ್ರ ಸರಕಾರದ ವೈಫಲ್ಯ. ಸರಕಾರಕ್ಕೆ ಈ ಪ್ರತಿಭಟನೆಯನ್ನು ಕೊನೆಗೊಳಿಸಬೇಕೆಂದಿಲ್ಲ. ದೇಶದ್ರೋಹಿಗಳೆಂದು ಆರೋಪಿಸಿ ರಾಜಕೀಯ ಲಾಭ ಪಡೆಯುವ ಉದ್ದೇಶವಿದು ಎಂಬುದಾಗಿ ಶಿವಸೇನೆ ಹೇಳಿದೆ.

ಸ್ವಾತಂತ್ರ್ಯದ ನಂತರ ದೇಶದಲ್ಲಿ ಮೊದಲ ಬಾರಿ ಈ ರೀತಿಯ ಶಿಸ್ತು ಬದ್ಧ, ದೃಢ ನಿಶ್ಚಯದ ಹೋರಾಟ ನಡೆಯುತ್ತಿದೆ. ರೈತರ ಧೈರ್ಯ, ದೃಢ ನಿಶ್ಚಯವನ್ನು ಪ್ರಧಾನಿ ಸ್ವಾಗತಿಸಬೇಕು. ಅವರನ್ನು ಗೌರವಿಸಿ ಕೃಷಿ ಕಾನೂನು ಹಿಂಪಡೆಯಬೇಕು. ಆಗ ಪ್ರಧಾನಿ ದೊಡ್ಡವರಾಗಿ ಬಿಡುವರು ಎಂದು ಸಾಮ್ನಾ ಬರೆದಿದೆ.