ಸರಕಾರಿ ಬಸ್ ನೌಕರರ ಬೇಡಿಕೆಗಳಿಗೆ ಸ್ಪಂದಿಸದೆ ಪ್ರತಿಭಟನೆ ಹತ್ತಿಕ್ಕಲು ಹೊರಟಿರುವ ಸರಕಾರದ ಕ್ರಮ ಖಂಡನೀಯ: ಸಾಲಿಡಾರಿಟಿ ರಾಜ್ಯಾಧ್ಯಕ್ಷ ಲಬೀದ್ ಶಾಫಿ

0
692

ಸನ್ಮಾರ್ಗ ವಾರ್ತೆ

ಬೆಂಗಳೂರು: ಆರನೇ ವೇತನ ಆಯೋಗ ಜಾರಿಗೊಳಿಸಲು ಒತ್ತಾಯಿಸಿ ಸರಕಾರಿ ಬಸ್ ನೌಕರರು ಇಂದಿನಿಂದ ಅನಿರ್ದಿಷ್ಟವಧಿ ಬಸ್ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಸರಕಾರ ಕಳೆದ ಹಲವು ವರ್ಷಗಳಿಂದ ಅವರ ಬೇಡಿಕೆ ಈಡೇರಿಸುವಲ್ಲಿ ಸೋತಿದೆ. ಇದೀಗ ಅಸಹಾಯಕರಾಗಿ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಆದರೆ ಬೇಡಿಕೆಗಳಿಗೆ ಕಿವಿಗೊಡಬೇಕಾಗಿದ್ದ ಸರಕಾರ ಇದೀಗ ನೌಕರರ ವಿರುದ್ಧ ಎಸ್ಮಾ ಜಾರಿ ಮಾಡಲು ಹೊರಟಿರುವುದು ಖಂಡನೀಯ ಎಂದು ಸಾಲಿಡಾರಿಟಿ ಯೂತ್ ಮೂವ್ಮೆಂಟ್ ನ ರಾಜ್ಯಾಧ್ಯಕ್ಷರಾದ ಲಬೀದ್ ಶಾಫಿ ಹೇಳಿದ್ದಾರೆ.

ಅರ್ಧ ವೇತನಕ್ಕೆ ಸಾರಿಗೆ ನೌಕರರು ದುಡಿಯುತ್ತಿದ್ದಾರೆ. ಅವರು ತಮ್ಮ ಕೆಲಸಕ್ಕೆ ತಕ್ಕ ವೇತನವನ್ನು ಆಗ್ರಹಿಸಿದ್ದಾರೆ. ಅವರ ಬೇಡಿಕೆಗಳಿಗೆ ಕಿವಿಗೊಡಬೇಡಿ, ಕೆಲಸಕ್ಕೆ ಹಾಜರಾಗದೆ ಇದ್ದರೆ ಕ್ರಮ ಕೈಗೊಳ್ಳಿ ಎಂಬ ಸರ್ವಾಧಿಕಾರದ ನಿಲುವನ್ನು ಖಂಡಿತ ಒಪ್ಪಲು ಸಾಧ್ಯವಿಲ್ಲ. ಸರಕಾರ ಕೂಡಲೇ‌ ತನ್ನ ನಿಲುವು ಬದಲಾಯಿಸಿ ಸಾರಿಗೆ ನೌಕರರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದವರು ಆಗ್ರಹಿಸಿದ್ದಾರೆ.

ಸರಕಾರ ಸಾರಿಗೆ ನೌಕರರ ಬೇಡಿಕೆಗಳಿಗೆ ಕಳೆದ ಹಲವು ಸಮಯದಿಂದ ಸೂಕ್ತವಾಗಿ ಸ್ಪಂದಿಸದ ಕಾರಣ ಇದೀಗ ಅವರು ಅನಿರ್ದಿಷ್ಟಾವಧಿ ಬಂದ್ ಗೆ ಕರೆ ನೀಡಿದ್ದಾರೆ. ಇದರಿಂದಾಗಿ ರಾಜ್ಯದ ಜನ ಪರದಾಡುವಂತಾಗಿದೆ. ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ರಾಜ್ಯ ಸರಕಾರ ನಿರಂತರವಾಗಿ ಸೋಲುತ್ತಿದೆ. ಆ ಕಾರಣಕ್ಕಾಗಿ ಪ್ರತಿ ಕ್ಷೇತ್ರದ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.

ಅಂಗನವಾಡಿ ನೌಕರರು, ರೈತರು, ಬ್ಯಾಂಕ್ ನೌಕರರು‌ ಸೇರಿದಂತೆ ಸಾಮಾನ್ಯ ಜನರು ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ವಿರೋಧಿಸಿ ಪ್ರತಿಭಟಿಸುತ್ತಿದ್ದಾರೆ. ಇದೀಗ ಸಾರಿಗೆ ನೌಕರರು ಕೂಡ ಬೀದಿಗಿಳಿದಿದ್ದಾರೆ. ಈ ಕುರಿತು ಸರಕಾರಗಳು ಕಠಿಣ ಕ್ರಮದಂತಹ ಬಾಲಿಶ ಹೇಳಿಕೆಗಳನ್ನು ಕೊಡುವುದು ಬಿಟ್ಟು ನೌಕರರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಿ ಅವರ ಬೇಡಿಕೆಗಳನ್ನು ಈಡೇರಿಸಲಿ ಎಂದು ಲಬೀದ್ ಶಾಫಿ ಆಗ್ರಹಿಸಿದ್ದಾರೆ.