ಗುಜರಾತ್ ಗಲಭೆ: ಮಾಜಿ ಡಿಜಿಪಿ ಆರ್‌.ಬಿ ಶ್ರೀಕುಮಾರ್‌ ಮೇಲಿನ ಆರೋಪ ಪುನರುಚ್ಚರಿಸಿದ ಪೊಲೀಸರು

0
406

ಸನ್ಮಾರ್ಗ ವಾರ್ತೆ

ಅಹ್ಮದಾಬಾದ್: ಗುಜರಾತ್ ಮಾಜಿ ಡಿಜಿಪಿ ಆರ್‌.ಬಿ ಶ್ರೀಕುಮಾರ್ ಅವರ ಮೇಲಿನ ಆರೋಪಗಳನ್ನು ಗುಜರಾತ್ ಪೊಲೀಸರು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಶ್ರೀಕುಮಾರ್ ಅಸಂತೃಪ್ತ ಅಧಿಕಾರಿಯಾಗಿದ್ದು, 2002 ಗುಜರಾತ್ ದಂಗೆಯಲ್ಲಿ ನಿರಪರಾಧಿಗಳನ್ನು ಆರೋಪಿಗಳನ್ನಾಗಿಸುವಲ್ಲಿ ದೊಡ್ಡ ಮಟ್ಟದ ಸಂಚಿನಲ್ಲಿ ಶಾಮೀಲಾಗಿದ್ದರು ಎಂದು ವಿಶೇಷ ತನಿಖಾ ತಂಡ ಎಸ್‍ಐಟಿ ಕೋರ್ಟಿನಲ್ಲಿ ಹೇಳಿದೆ.

ಕಳೆದ ತಿಂಗಳು ಎಸ್‍ಐಟಿ ಶ್ರೀಕುಮಾರ್ ಮತ್ತು ಟೀಸ್ಟಾ ಸೆಟಲ್ವಾಡ್‍ರನ್ನು ಬಂಧಿಸಿದೆ. ಹೆಚ್ಚುವರಿ ಪ್ರಿನ್ಸಿಪಲ್ ಜಡ್ಜ್ ಡಿಡಿ ಟಕ್ಕರ್ ಮುಂದೆ ಶ್ರೀಕುಮಾರ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಎಸ್‌ಐಟಿ ಸಲ್ಲಿಸಿದ ಸ್ಪಷ್ಟೀಕರಣದಿಂದಾಗಿ ನ್ಯಾಯಾಲಯವು ಆರೋಪಗಳನ್ನು ಮುಂದುವರಿಸಿದೆ.

ತಮ್ಮ ದುರುದ್ದೇಶಕ್ಕಾಗಿ ಗುಜರಾತಿನ ಜನಪ್ರತಿನಿಧಿಗಳು, ಆಡಳಿತ ವ್ಯವಸ್ಥೆ ಹಾಗೂ ಪೊಲೀಸರ ಮೇಲೆ ಕೆಟ್ಟ ಹೆಸರು ತರಲು ಶ್ರೀಕುಮಾರ್ ಶ್ರಮಿಸಿದ್ದರು ಎಂದು ಎಸ್‍ಐಟಿ ಆರೋಪಿಸಿದೆ.

2002 ಫೆಬ್ರುವರಿ 27ರ ನಂತರದ ದಿನಗಳಲ್ಲಿ ಶ್ರೀಕುಮಾರ್ ಸಂಚಿನಲ್ಲಿ ಭಾಗಿಯಾದರು ಎಂದು ಎಸ್‍ಐಟಿ ಹೇಳಿದೆ. ಸಾಕ್ಷಿಗಳಿಗೆ ಒತ್ತಡ ಹೇರಿದುದರಲ್ಲಿ ಶ್ರೀಕುಮಾರ್‌ರ ಪಾತ್ರವಿದೆ. ಇದಕ್ಕೆ ಸಾಕ್ಷ್ಯಗಳೂ ಇವೆ ಎಂದು ಎಸ್‍ಐಟಿ ಕೋರ್ಟಿನಲ್ಲಿ ಹೇಳಿದೆ.