ಅಹ್ಮದಾಬಾದ್, ಜೂ.17: ಗುಜರಾತಿನ ಗ್ರಾಮಗಳಲ್ಲಿ ದಲಿತರ ಕೂದಲು ಕತ್ತರಿಸಲು ನಿರಾಕರಿಸಲಾಗುತ್ತಿದೆ. ಸಲೂನ್ಗಳಲ್ಲಿ ಜಾತಿ ತಾರತಮ್ಯ, ಅಸ್ಪೃಶ್ಯತೆ ದಟ್ಟವಾಗಿದ್ದು ದಲಿತರಿಗೆ ಮನುಷ್ಯರಂತೆ ಬದುಕಲು ಸಾಧ್ಯವಾಗದ ಪರಿಸ್ಥಿತಿ ಕಳೆದ ಹತ್ತು ವರ್ಷಗಳಿಂದ ಮುಂದುವರಿದಿದೆ ಎಂದು ವರದಿ ತಿಳಿಸಿದೆ.
ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರಿಗೆ ಈ ಅಸ್ಪೃಶ್ಯತಾಚರಣೆ ತಿಳಿದಿದೆ. ಕಾನೂನು ಮೂಲಕ ನಿಷೇಧಿಸಿ ಮೂವತ್ತು ವರ್ಷಗಳೂ ಕಳೆದಿದ್ದರೂ ಗುಜರಾತಿನ ಗ್ರಾಮಗಳಲ್ಲಿ ದಲಿತರು ಈ ಕೆಟ್ಟ ಅವಸ್ಥೆಯಲ್ಲಿ ಅಸಹಾಯಕರಾಗಿ ಬದುಕುತ್ತಿದ್ದಾರೆ. ಈ ಅವಸ್ಥೆಯಲ್ಲಿ ಬದುಕುತ್ತಿದ್ದರೂ ಕೆಳಜಾತಿಯವರು ಸಮಾಜದ ಮುಂದೆ ಈ ತಾರತಮ್ಯವನ್ನು ಎತ್ತಿ ತೋರಿಸಿಲ್ಲ. ಕಳೆದ ವರ್ಷ ಕೆಲವು ಯುವಕರು ಇದನ್ನು ಬಹಿರಂಗ ಪಡಿಸಿದ ನಂತರ ಗುಜರಾತಿನಲ್ಲಿ ನಡೆಯುವ ಕೆಟ್ಟ ಆಚರಣೆ ಹೊರಜಗತ್ತಿಗೆ ತಿಳಿದು ಬಂದಿತು. ಅಹ್ಮದಾಬಾದ್ ಜಿಲ್ಲೆಯ ಟ್ರಂಡ್ ಗ್ರಾಮದ ಶಿಕ್ಷಿತ ಯುವಕರು ಕೂದಲು ಕತ್ತರಿಸಲು ನಿರಾಕರಿಸುವ ಕುರಿತು ಬ್ಲಾಕ್ ಪಂಚಾಯತ್ಗೆ ದೂರು ನೀಡಲು ತೀರ್ಮಾನಿಸಿದರು. ಆದರೆ ದಲಿತ ಯುವಕರ ಕೂದಲು ಕತ್ತರಿಸಲು ಕ್ಷೌರಿಕರು ನಿರಾಕರಿಸಿದ್ದಾರೆ. ಮಾತ್ರವಲ್ಲ ತಮ್ಮ ಅಂಗಡಿಯನ್ನು ಮುಚ್ಚಿದರು. ಆದ್ದರಿಂದ ದಲಿತರು ಗ್ರಾಮದಿಂದ ಹೊರಗೆ ಹೋಗಿ ನಗರದಲ್ಲಿ ಕೂದಲು ಕತ್ತರಿಸಿಕೊಳ್ಳಬೇಕಾಯಿತು.ಮೇಲ್ವರ್ಗದವರ ಕೂದಲನ್ನು ಕ್ಷೌರಿಕರು ಅವರದೇ ಮನೆಗೆ ಹೋಗಿ ಕತ್ತರಿಸತೊಡಗಿದರು. 2010ರಲ್ಲಿ ನವ್ಸರ್ಜನ್ ಟ್ರಸ್ಟ್ ಅಧ್ಯಯನದಲ್ಲಿ ಗುಜರಾತಿನ ಗ್ರಾಮಗಳಲ್ಲಿ ವಿವಿಧ ರೀತಿಯಲ್ಲಿ ಅಸ್ಪೃಶ್ಯತೆ ಇರುವುದು ಬಹಿರಂಗವಾಗಿದೆ. ಕೂದಲು ಕತ್ತರಿಸಲು ನಿರಾಕರಿಸುವುದು ಇವುಗಳಲ್ಲಿ ಒಂದು. 13,633 ಗ್ರಾಮಗಳಲ್ಲಿ ಇದು ಈಗಲೂ ಮುಂದುವರಿಯುತ್ತಿದೆ.












