ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ರೈತರ ವಿರೋಧಕ್ಕೆ ಕಾರಣವಾದ ಕೃಷಿ ಕಾನೂನಿನ ವಿರುದ್ಧ ಮಹಾ ಪ್ರತಿಭಟನೆಗೆ ಬೆಂಬಲ ಸೂಚಿಸಿ ಗುಜರಾತ್ ಮತ್ತು ರಾಜಸ್ಥಾನದ ರೈತರು ಒಟ್ಟು ಸೇರಿದ್ದಾರೆ. ದಿಲ್ಲಿ-ಹರಿಯಾಣ ಗಡಿಯ ಸಿಂಘುವಿನಲ್ಲಿ ಪ್ರತಿಭಟನೆಯಲ್ಲಿ ಇವರೂ ಭಾಗವಹಿಸಲಿದ್ದಾರೆ. ಅಸ್ಸಾಂ, ಮಧ್ಯಪ್ರದೇಶ ರಾಜ್ಯಗಳಿಂದ ರೈತರು ಪ್ರತಿಭಟನೆಯಲ್ಲಿ ಸೇರಿಕೊಳ್ಳಲಿದ್ದಾರೆ ಎಂದು ಘೋಷಿಸಿದ್ದಾರೆ. ಈಗ ಪ್ರತಿಭಟನೆಗೆ ಪಂಜಾಬ್, ಹರಿಯಾಣದ ರೈತರು ನೇತೃತ್ವ ನೀಡುತ್ತಿದ್ದಾರೆ.
ರಾಜಸ್ಥಾನದಿಂದ 500 ಮಂದಿಯ ರೈತರ ಗುಂಪು ಮೊದಲು ಸಿಂಘು ಗಡಿಗೆ ಬಂದಿದೆ. ಅಸ್ಸಾಮ್‍ನ ವಿವಿಧ ಭಾಗಗಳಲ್ಲಿ ಕಳೆದ ದಿವಸ ಪ್ರತಿಭಟನೆ ಆಯೋಜಿಸಲಾಗಿತ್ತು. ಇಂದಿನ ಚರ್ಚೆಯವರೆಗೆ ಕಾಯುವ ಮತ್ತು ತಮ್ಮ ಬೇಡಿಕೆ ಅಂಗೀಕರಿಸಲ್ಪಡದಿದ್ದರೆ ದಿಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಅಸ್ಸಾಂನ ರೈತರು ಘೋಷಿಸಿದ್ದಾರೆ.
ಈಗಾಗಲೇ ದಿಲ್ಲಿಯ ಹಲವು ರಸ್ತೆಗಳಲ್ಲಿ ರೈತರು ತಡೆಯೊಡ್ಡಿದ್ದಾರೆ. ಇಂದಿನ ಚರ್ಚೆಯಲ್ಲಿ ತೀರ್ಮಾನ ಆಗದಿದ್ದರೆ ರೈತರು ದೇಶವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ರೈತರು ಮತ್ತು ಕೇಂದ್ರ ಸರಕಾರದ ನಡುವೆ ಮೂರನೆಯ ಚರ್ಚೆ ಇಂದು ನಡೆಯಲಿದೆ. ಈ ಹಿಂದೆ ಎರಡು ಸಲ ಚರ್ಚೆ ನಡೆದು ವಿಫಲವಾಗಿತ್ತು.












