ಹಥ್ರಾಸ್ ದಲಿತ ಯುವತಿಯ ಬರ್ಬರ ಅತ್ಯಾಚಾರವನ್ನು ಖಂಡಿಸಿ ಎಸ್.ಐ.ಓ ಹಾಗೂ ಜಿ.ಐ.ಓ ಕುದ್ರೋಳಿ ಘಟಕದಿಂದ ಪ್ರತಿಭಟನೆ

0
647

ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ- ಜಿ.ಐ.ಓ ರಾಜ್ಯಾಧ್ಯಕ್ಷೆ ಉಮೈರಾ ಬಾನು ಆಗ್ರಹ

ಮಂಗಳೂರು,ಅ.6(ಸನ್ಮಾರ್ಗ ವಾರ್ತೆ): ಉತ್ತರಪ್ರದೇಶದಲ್ಲಿ ದಲಿತ ಯುವತಿಯ ಮೇಲೆ ನಡೆದ ಬರ್ಬರ ಕೃತ್ಯದಲ್ಲಿ ಯುಪಿ ಸರಕಾರ ನಡೆದುಕೊಂಡ ರೀತಿಯು ಅತ್ಯಾಚಾರದ ಮೇಲೆ ಅತ್ಯಾಚಾರವಾಗಿದೆ. ಇದು ಸಾವಲ್ಲ, ಸರಕಾರಿ ಕೊಲೆಯಾಗಿದೆ. ಮಾಧ್ಯಮಗಳಲ್ಲಿ ಹರಡುತ್ತಿರುವ ಅಶ್ಲೀಲ ಸಂದೇಶಗಳು ಹಾಗೂ ಮಹಿಳೆಯರಿಗೆ ನೀಡುತ್ತಿರುವ ಅಗೌರವವಾಗಿದೆ ದಿನದಿಂದ ದಿನಕ್ಕೆ ಅತ್ಯಾಚಾರಗಳು ಹೆಚ್ಚುತ್ತಿರಲು ಮುಖ್ಯ ಕಾರಣ. ಇಂದು ನ್ಯಾಯ ವಿತರಣಾ ಸಂಸ್ಥೆಗಳು ನ್ಯಾಯದ ಮುಂದೆ ಅಪರಾಧಿಗಳಾಗಿ ನಿಂತುಕೊಂಡಿದೆ. ನಾವೆಲ್ಲರೂ ಅನ್ಯಾಯದ ವಿರುದ್ಧ ಧ್ವನಿಯೆತ್ತಬೇಕು. ಮಹಿಳೆಗೆ ಗೌರವ ನೀಡುವುದನ್ನು ರೂಡಿಸಿಕೊಳ್ಳಬೇಕು. ಈ ಬರ್ಬರ ಕೃತ್ಯವನ್ನೆಸಗಿದವರನ್ನು ಗಲ್ಲಿಗೇರಿಸಲಿ ಎಂಬುದಾಗಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ರಾಜ್ಯಾಧ್ಯಕ್ಷೆ ಉಮೈರಾ ಬಾನು ಆಗ್ರಹಿಸಿದರು.

ನಮಗೆ ಭಾರತದ ಕಾನೂನಿನ ಮೇಲೆ ನಂಬಿಕೆ, ಗೌರವವಿದೆ ಅದನ್ನು ಯುಪಿ ಹಾಗೂ ಕೇಂದ್ರ ಸರಕಾರ ಉಳಿಸಿಕೊಳ್ಳಬೇಕು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ನೀಡಿದಂತಹ ತೀರ್ಪುಗಳು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿರುವುದರಿಂದ ಕಾನೂನಿನ ಮೇಲೆ ಜನರು ನಂಬಿಕೆ ಕಳೆದುಕೊಳ್ಳುವಂತಾಗಿದೆ. ಜಾತಿ ಧರ್ಮ ನೋಡದೆ ಇಂತಹ ಘೋರ ಕೃತ್ಯ ನಡೆಸಿದವರಿಗೆ ಸೂಕ್ತ ಶಿಕ್ಷೆಯಾಗಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದು ವಾರ್ಡ್ ಕಾರ್ಪೊರೇಟರ್ ಶಂಸುದ್ದೀನ್ ಆಗ್ರಹಿಸಿದರು.

ಜ್ಯಾತತೀತ ದೇಶದಲ್ಲಿ ತಾಂಡವಾಡುತ್ತಿರುವ ಎರಡು ಮುಖ್ಯ ಪಿಡುಗುಗಳಾದ ಜಾತಿ ವ್ಯವಸ್ಥೆ ಮತ್ತು ಪುರುಷ ಪ್ರಧಾನ ಸಮಾಜವು ಕೊನೆಗೊಳ್ಳಬೇಕು. ಸಂತ್ರಸ್ತೆಯ ಕುಟುಂಬದವರನ್ನು ಭೇಟಿಯಾಗಲು ಹೋದ ವಿಪಕ್ಷ ನಾಯಕರ ಮೇಲಿನ ಪೋಲೀಸರ ದೌರ್ಜನ್ಯವು ಖಂಡನೀಯ ಎಂದು ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯ ಕೇಂದ್ರ, ಮಲ್ಲಪುರಂ ಕಾನೂನು ವಿದ್ಯಾರ್ಥಿ ನಿಹಾಲ್ ಮುಹಮ್ಮದ್ ಹೇಳಿದರು.
ವಾರ್ಡ್ ಕಾರ್ಪೊರೇಟರ್ ಶಂಸುದ್ದೀನ್, HRSನ ಅಮೀರ್ ಕುದ್ರೋಳಿ, ಎಸ್ ಐ ಓ, ಜಿ ಐ ಓ ಹಾಗೂ JIH ಮಹಿಳಾ ವಿಭಾಗದ ಕಾರ್ಯಕರ್ತರು ಉಪಸ್ಥಿತರಿದ್ದರು.