ಸನ್ಮಾರ್ಗ ವಾರ್ತೆ
ರಾಮನಗರ: ಕಳೆದ ಆಗಸ್ಟ್ ತಿಂಗಳ 28ರ ರಾತ್ರಿಯಿಂದ ಧಾರಾಕಾರ ಸುರಿದ ವಿಪರೀತ ಮಳೆಯಿಂದಾಗಿ ರಾಮನಗರದ ವಸತಿ ಪ್ರದೇಶಗಳು ನೀರಿಂದ ಮುಳುಗಿದ್ದವು. ಜನ ಜೀವನ ಅಸ್ಥವ್ಯಸ್ತವಾಗಿತ್ತು. ಸಂಚಾರ ವ್ಯವಸ್ಥೆಯ ಅಡಚಣೆಯಿಂದಾಗಿ ಜನ ಸಂಪರ್ಕ ಕಡಿದುಕೊಂಡಿತ್ತು.
ಆದರೆ, ಆರಂಭದಿಂದಲೇ ಹೆಚ್.ಆರ್.ಎಸ್ ಹೊಣೆಗಾರರು ಅಲ್ಲಿಯ ಸ್ಥಳೀಯ ಜಮಾಅತಿನ ಹೊಣೆಗಾರರಾದ ಅಸ್ಲಮ್ ಪಾಶಾರವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪರಿಸ್ಥಿಯ ಅವಲೋಕನ ನಡೆಸಿದರು. ಅಲ್ಲದೇ, ಎಸ್.ಡಿ.ಆರ್.ಎಫ್ ತಂಡ ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಹೆಚ್.ಆರ್.ಎಸ್. ಝಮೀರ್ ಖಾನ್ರವರ ಮುಂದಾಳುತ್ವದಲ್ಲಿ ಮೈಸೂರು ರೋಡ್ ತಂಡವು ನೆರೆ ಚೆನ್ನಪಟ್ಟಣ ಪ್ರದೇಶದಲ್ಲಿ ಸಮೀಕ್ಷೆ ಆರಂಭಿಸಿತು. ಅದೇ ರೀತಿ ಮೈಸೂರು ತಂಡವು ಫಾರೂಕ್ ನಶ್ಚರ್ ಹಾಗೂ ಅಸಾದುಲ್ಲಾರವರ ಮುಂದಾಳುತ್ವದಲ್ಲಿ ರಾಮನಗರ ಪ್ರದೇಶದಲ್ಲಿ ಸಮೀಕ್ಷೆ ಆರಂಭಿಸಿತು. ತಂಡದಲ್ಲಿ ಸ್ಥಳೀಯರಾದ ವಕೀಲರಾದ ಬಶೀರ್ ಅಹ್ಮದ್ ಖಾನ್ ಹಾಗೂ ಖೈಝರ್ ಅಹ್ಮದ್ ಕುರೈಶಿ ಜೊತೆಗಿದ್ದರು.
ದಿನಬಳಕೆಯ ವಸ್ತುಗಳು, ಫ್ಯಾಕ್ಟರಿಗಳ ಮೆಷಿನ್ಗಳು, ಗ್ಯಾಸ್ ಸಿಲಿಂಡರ್ ಮುಂತಾದ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅನೇಕ ಮನೆಗಳು ನೆಲಸಮವಾಗಿದ್ದವು. ಕೆಲವು ಕುಟುಂಬಗಳು ತಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದರೆ, ಉಳಿದವರಿಗೆ ಶಾದಿ ಮಹಲ್ನಲ್ಲಿ ವ್ಯವಸ್ಥೆ ಮಾಡಲಾಯ್ತು. ರಾಮನಗರ ಅಕ್ಷರಶಃ ಕೆಸರು, ಕಸದಿಂದ ತುಂಬಿಕೊಂಡಿತ್ತು.
ಮೈಸೂರು ರೋಡು ತಂಡವು ಚೆನ್ನಪಟ್ಟಣದಲ್ಲಿ ಹಲವಾರು ಮನೆಗಳನ್ನು ಶುಚಿಗೊಳಿಸಿತು. ಅದೇ ರೀತಿ ರಾಮನಗರದಲ್ಲಿಯೂ ಸ್ವಯಂ ಸೇವಕರೂ ಅನೇಕ ಮನೆಗಳನ್ನು ಸುಚಿಗೊಳಿಸಿದರು. ಮಾತ್ರವಲ್ಲ ಕುಟುಂಬಸ್ತರಿಗೆ ಸಾತ್ವಾನ ಹಾಗೂ ಧೈರ್ಯ ತುಂಬಿದರು.
ಚಾಪೆ ಹೊದಿಕೆ ವಿತರಣೆ
ಹೊದಿಕೆ ಹಾಗೂ ಹಾಸುಗಳ ಅವಶ್ಯಕತೆಯನ್ನು ಅರಿತು ಕೂಡಲೆ 500 ಬ್ಲಾಂಕೆಟ್ ಹಾಗೂ 500 ಚಾಪೆಗಳನ್ನು ಖರೀದಿಸಲಾಯಿತು. ಅಲ್ಲದೇ ಝೇಬಾ ಫಂಕ್ಷನ್ ಸಭಾಂಗಣದಲ್ಲಿ ವಾಸ್ತವ್ಯ ವ್ಯವಸ್ಥೆಯನ್ನು ಕಲ್ಪಿಸಲಾಯಿತು.
ಕರ ಜೋಡಿಸಿದ ಹಲವು ಸಂಘಟನೆಗಳು
ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾ ಸಂಚಾಲಕರಾದ ಅಸ್ಲಮ್ ಪಾಶಾ, ಹೆಚ್.ಆರ್.ಎಸ್. ಕಾರ್ಯದರ್ಶಿಗಳು, ಎ.ಪಿ.ಸಿ.ಆರ್. ಬಶೀರ್ ಮೊದಲಾದವರು ಝೇಬಾ ಫಂಕಷನ್ ಸಭಾಂಗಣದಲ್ಲಿ ಪ್ರಾಜೆಕ್ಟ್ ಸ್ಮೈಲ್ ಸಂಘಟನೆಯವರೊಂದಿಗೆ ಸಭೆ ನಡೆಸಿದರು. ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ಪರಸ್ಪರ ಜೊತೆಗೂಡಿ ಸಹಕರಿಸಲು ತೀರ್ಮಾನಿಸಿದರು.
ಬಳಿಕ ಹೆಚ್.ಆರ್.ಎಸ್. ಸ್ವಯಂಸೇವಕರ ಸಭೆಯನ್ನು ನಡೆಸಲಾಯಿತು. ರಾಮನಗರ ರಿಲೀಫ್ ಸೆಲ್ ಸ್ಥಾಪಿಸುವ ಬಗ್ಗೆ ತೀರ್ಮಾನಿಸಲಾಯಿತು. ಅದಕ್ಕಾಗಿ ಸೂಕ್ತ ಸ್ಥಳವನ್ನು ನಿರ್ಧರಿಸುವ ಬಗ್ಗೆ ಪ್ರಯತ್ನಿಸಿ ಎಮ್.ಡಿ.ಆರ್. ಫಂಕ್ಷನ್ ಸಭಾಂಗಣವನ್ನು ಮಾಲಿಕರು ನೀಡುವುದಾಗಿ ಒಪ್ಪಿಕೊಂಡರು. ಅಲ್ಲಿ ಸ್ವಯಂ ಸೇವಕರ ವಾಸ, ಗಣ್ಯರ ಸಭೆ, ರೀಲೀಫ್ ವಸ್ತುಗಳ ಶೇಖರಣೆ ಮತ್ತು ಹಂಚುವಿಕೆ ಹಾಗೂ ಇನ್ನಿತರ ಸಭೆ ಕಾರ್ಯಗಳನ್ನು ನಡೆಸುವ ಕಾರ್ಯ ಮುಂದುವರಿಯಿತು.
ಸಭೆ ಹಾಗೂ ಸಂಸ್ಥೆಗಳ ನಡುವೆ ಕೆಲಸದ ಹಂಚಿಕೆ
ಮೈಸೂರು, ಯಶವಂತಪುರ, ಮೈಸೂರು ರೋಡು ಸ್ವಯಂ ಸೇವಕರು ಸುಮಾರು 25ಕ್ಕೂ ಹೆಚ್ಚು ಕಾರ್ಯಕರ್ತರು ಸರ್ವೇ ಮತ್ತು ಶುಚಿ ಕಾತ್ಯಾಚರಣೆಯಲ್ಲಿ ತೊಡಗಿಸಿಕೊಂಡರು. ಸಂಜೆ ಜಾಮಿಯತುಲ್ ಉಲೆಮಾ ಎ ಹಿಂದ್ ಸಂಸ್ಥೆಯವರೊಂದಿಗೆ ಮರ್ಕಝ್ನಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಖೈಝರ್ ಕುರೈಶಿ, ಮತ್ತು ಹೆಚ್.ಆರ್.ಎಸ್. ಹೊಣೆಗಾರರು ಭಾಗವಹಿಸಿದರು. ಪುನಾರಾವರ್ತನೆ ಆಗದಂತೆ ಕೆಲಸವನ್ನು ಹಂಚಿಕೊಂಡು ಮಾಡಬೇಕೆಂದು ಮಾರ್ಗದರ್ಶನ ಮಾಡಲಾಯಿತು. ಅಂದು ರಾತ್ರಿ ಇನ್ನೊಂದು ಸಭೆಯಲ್ಲಿ ಕೆಲವು ಸಂಸ್ಥೆಗಳು ಬಾಗವಹಿಸಿ ಕೆಲಸವನ್ನು ಹಂಚಲಾಯಿತು.
ಹೆಚ್.ಆರ್.ಎಸ್. ಸುಮಾರು 25೦೦ ರೇಶನ್ ಕಿಟ್, ಸರ್ವೆ ಹಾಗೂ ಶುಚಿತ್ವದ ಕೆಲಸವನ್ನು ವಹಿಸಬೇಕೆಂದಾಗ ಮುಂದೆ ತೀರ್ಮಾನಿಸಿ ಹೇಳುವುದಾಗಿ ತಿಳಿಸಲಾಯಿತು. ಮರ್ಸಿ ಮಿಶನ್ ಝುಹಾ ಟ್ರಸ್ಟ್, ಪ್ರೋಜೆಕ್ಟ್ ಸ್ಮೈಲ್ ಲೈಫ್ ಲೈನ್, ಇ.ಆರ್.ಟಿ. ಬೆಂಗಳೂರು, ಝಮ್ ಝಮ್ ಮುಂತಾದ ಸಂಘಟನೆಯವರು ಹೆಚ್.ಆರ್.ಎಸ್. ಜೊತೆಗೂಡಿ ಕಾರ್ಯಚರಿಸಲು ಬೆಂಗಳೂರಿನಿಂದ ಸುಮಾರು 500 ಕಾರ್ಯಕರ್ತರು ಆಗಮಿಸಿದ್ದರು.
ಹೆಚ್.ಆರ್.ಎಸ್. ರಿಲೀಫ್ ಸೆಂಟರಿನಲ್ಲಿ ಸಭೆಯನ್ನು ನಡೆಸಿ ಮಾರ್ಗದರ್ಶನ ನೀಡಲಾಯಿತು. ಶುಚಿತ್ವಕ್ಕೆ ಅಗತ್ಯವಿರುವ ಹಾರೆ, ಬುಟ್ಟಿ, ಗಂಬೂಟು, ಮುಂತಾದ ಎಲ್ಲಾ ಸಲಕರಣೆಯೊಂದಿಗೆ ಹಾಗೂ ಸಿದ್ಧತೆಯೊಂದಿಗೆ ಬಂದು ಕಾಲಿಡಲು ಅಸಾಧ್ಯವಾಗದಂತಹ ಕೆಸರು ತುಂಬಿದ ಮನೆಗಳೊಳಗೆ ನುಗ್ಗಿ ಶುಚಿಗೊಳಿಸಿದರು. ಮನೆಯವರ ದುಖಃ ಸಂಕಷ್ಟಗಳನ್ನು ಹಂಚಿಕೊಂಡರು. ಸಾಂತ್ವಾನದ ಮಾತುಗಳು ಮನೆಯವರ ಹೃದಯ ತುಂಬಿಬಂದವು. ಇನ್ನೂ ಅನೇಕ ಮನೆಗಳನ್ನು ಶುಚಿಗೊಳಿಸುವುದಕ್ಕಾಗಿ ‘ಇತರ ಸ್ವಯಂ ಸೇವಕರನ್ನು ಬೆಂಗಳೂರಿನಿಂದ ಪ್ರತೀ ದಿನ ಕಳಿಸುವೆವು’ ಎಂದು ತಿಳಿಸಿದರು. ಹೆಚ್ ಆರ್ ಎಸ್ ತಂಡವು ಕೂಡ ಸರ್ವೆ ಹಾಗೂ ಶುಚಿತ್ವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಹಬ್ಬದ ರಜೆಯು ಕಳೆದಿರುವುದರಿಂದ ಮುನಿಸಿಪಾಲಿಟಿಯ ಕಾರ್ಯಕರ್ತರು ಎಲ್ಲಾ ಮೊಹಲ್ಲಾಗಳಲ್ಲಿ ಟ್ರಾಕ್ಟರ್, ಶವಲ್ ಹಾಗೂ ಕಾರ್ಯಕರ್ತರನ್ನು ಶುಚಿತ್ವದ ಕಾರ್ಯದಲ್ಲಿ ತೊಡಗಿಸಿಕೊಂಡದ್ದನ್ನು ಕಂಡುಬರುತ್ತಿತ್ತು. ಎಸ್.ಪಿ. ತಹಶಿಲ್ದಾರ್, ಹಾಗೂ ಸಂಬಂದಪಟ್ಟ ಅಧಿಕಾರಿಗಳ ತಂಡವು ಸಂತ್ರಸ್ತರ ಅಹವಾಲುಗಳನ್ನು ಸ್ವೀಕರಿಸುವುದು ಹಾಗೂ ಪರಿಹಾರದ ಭರವಸೆ ನೀಡುವುದು ಕಂಡು ಬರುತ್ತಿತ್ತು. ಹೆಚ್.ಆರ್.ಎಸ್. ಮುಖಂಡರು ಅವರೊಂದಿಗೆ ಚರ್ಚಿಸಿ ಕೆಲವು ಸಲಹೆಗಳನ್ನು ನೀಡಿದರು.
ಮನೆಗಳಿಗೆ ಹಣ್ಣು ಹಾಗೂ ಬಿಸ್ಕಿಟುಗಳನ್ನು ವಿತರಿಸಲಾಯಿತು. ಬಳಿಕ ಹಲವು ಮನೆಗಳನ್ನು ಶಚಿಗೊಳಿಸಲಾಯಿತು. ಬೆಂಗಳೂರಿನಿಂದ ಆಗಮಿಸಿದ ಮರ್ಸಿ ಮಿಷನ್ನ ಕಾರ್ಯಕರ್ತರು ರಿಲೀಫ್ ಸೆಲ್ಗೆ ಬೇಟಿಕೊಟ್ಟು ಬಳಿಕ ಹೆಚ್.ಆರ್.ಎಸ್. ಕಾರ್ಯಕರ್ತರೊಂದಿಗೆ ಒಂದು ಸರಕಾರಿ ಶಾಲೆಯನ್ನು ಸುಚಿಗೊಳಿಸಿದರು. “ಸರಕಾರಿ ಸಿಬ್ಬಂದಿಗಳು 20% ಕೆಲಸ ಮಾಡಿದರೆ ನಿಮ್ಮ ಕಾರ್ಯಕರ್ತರು 80% ಕೆಲಸ ಮಾಡಿದ್ದರು ಆದರೆ ತಾವು ಪೂರ್ತಿ ಶುಚಿಗೊಳಿಸಿ ಸಹಕರಿಸಿದ್ದೀರಿ” ಎಂದು ಶ್ಲಾಘಿಸಿದರು. ಶಾಲಾ ಸಿಬ್ಬಂದಿಗಳು ತಂಡದ ಕಾರ್ಯವನ್ನು ಪ್ರಶಂಶಿಸಿದರು.
ಅಗತ್ಯ ವಸ್ತುಗಳ ವಿತರಣೆ
ಬೆಂಗಳೂರಿನಿಂದ ಆಗಮಿಸಿದ ರೋಟರಿ ಕ್ಲಬ್ನ ಸದಸ್ಯರಾದ ಪ್ರಸನ್ನ ಕುಮಾರಿಯ ತಂಡವು ರಿಲೀಫ್ ಸೆಲ್ಗೆ ಭೇಟಿ ಕೊಟ್ಟು ಸಂತ್ರಸ್ತರ ಮನೆಗಳಿಗೆ ನಮ್ಮ ಕಾರ್ಯಕರ್ತರೊಂದಿಗೆ ತೆರಳಿ ಸೀರೆ, ಬಟ್ಟೆ, ಹಾಲು ಮುಂತಾದ ಸಾಮಾನುಗಳನ್ನು ವಿತರಿಸಿದರು.
ಕನ್ನಡ ಪ್ರಭಾ, ವಿಜಯ ಕರ್ನಾಟಕ, ಸಾಲಾರ, ಸಹಾರ ಪತ್ರಿಕೆಯ ವರದಿಗಾರರು ರಿಲೀಫ್ ಸೆಲ್ಗೆ ಬೇಟಿ ನೀಡಿ ಹೆಚ್ಆರ್ಎಸ್ ಕಾರ್ಯಗಳ ವರದಿಗಳನ್ನು ಸಂಗ್ರಹಿಸಿದರು. ಲೈಫ್ ಲೈನ್ ಫೌಂಡೇಶನ್ನ ಕಾರ್ಯಕರ್ತರನ್ನು ರಿಲೀಫ್ ಸೆಲ್ಗೆ ಕರೆಸಿ ಪ್ರಸಕ್ತ ಪರಿಸ್ಥಿತಿಯ ಅಧ್ಯಯನ ನಡೆಸಿದಾಗ ನೀರಿನ ಅವಷ್ಯಕತೆ ಕಂಡುಬಂತು. ಲಾಯರ್ ಬಶೀರ್ರವರಿಗೆ ಫೋನ್ ಮಾಡಿ ಕೂಡಲೆ ವ್ಯವಸ್ಥೆ ಮಾಡುವುದಾಗಿ ತೀರ್ಮಾನಿಸಲಾಯಿತು. ಮೈಸೂರು ರೋಡ್ ಜ.ಇ.ಹಿಂ. ಸ್ಥಾನೀಯ ಅಧ್ಯಕ್ಷರು ಇಕ್ಬಾಲ್ ಗೋಡಿಹಾಳ್ ಹಾಗೂ ಮೆಟ್ರೋ ಕಾರ್ಯದರ್ಶಿ ಢಾ| ಫಕ್ರುದ್ದೀನ್ ಹೆಚ್ ಆರ್ ಎಸ್ ರಿಲೀಫ್ ಸೆಲ್ಗೆ ಭೇಟಿಕೊಟ್ಟಿರುವುದು ಸಂತೋಷದ ವಿಷಯ. ಸ್ವಯಂ ಸೇವಕರ ಊಟದ ವ್ಯವಸ್ಥೆಯು ಸರಿಯಾಗಿ ಸಮಯಕ್ಕೆ ತಲುಪದ ಸಮಸ್ಯೆಯನ್ನು ಮನಗಂಡು ಡಾ| ಫಕ್ರುದ್ದೀನ್ ಹಾಗೂ ಇಕ್ಬಾಲ್ ಗೋಡಿಹಾಳ್ ಮೈಸೂರು ರೋಡ್ರವರಿಂದ ಸಭಾಗಂಗಣದಲ್ಲಿಯೇ ಊಟವನ್ನು ತಯಾರಿಸಿ ವಿತರಿಸುವ ವ್ಯವಸ್ಥೆಯನ್ನು ವಹಿಸಿಕೊಂಡರು.
ಯಶವಂತಪುರದಿಂದ ಜಮಾಅತಿನ ಸದಸ್ಯರು ಕಾರ್ಯಕರ್ತರ ದೊಡ್ಡ ತಂಡವೇ ಆಗಮಿಸಿ ಸೇವೆ ಸಲ್ಲಿದರು.
ಜ.ಇ.ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಅರ್ಷದ್ ಬಾಬು, ಅಸ್ಲಮ್ ಪಾಶಾರವರು ಬೇಟಿ ನೀಡಿ ಸಲಹೆಗಳನ್ನು ಮಾರ್ಗದರ್ಶನವನ್ನು ನೀಡಿದರು. ಮರ್ಸಿ ಮಿಷನ್ ಕಾರ್ಯದರ್ಶಿ ಡಾ.ತಾಹಾ ಮತೀನ್ ಹಾಗೂ ಅವರ ತಂಡ ರಿಲೀಪ್ ಸೆಲ್ ಗೆ ಆಗಮಿಸಿದ್ದರು. ಎಲ್ಲಾ ಹೊಣೆಗಾರರೊಂದಿಗೆ ಸಭೆಯನ್ನು ನಡೆಸಲಾಯಿತು.
ಶಮಾ ಚಾರಿಟೇಬಲ್ ಟ್ರಸ್ಟ್ ಆರೋಗ್ಯ ಶಿಬಿರ
ಅರ್ಹ ಸಂತ್ರಸ್ತರಿಗೆ ಕೂಡಲೆ ಪರಿಹಾರವನ್ನು ಒದಗಿಸಬೇಕು ಎಂದು ಸಲಹೆ ನೀಡಿದರು. ಶಮಾ ಚಾರಿಟೆಬಲ್ ಟ್ರಸ್ಟ್ ಇದರ ವತಿಯಿಂದ ಆರೋಗ್ಯ ಶಿಭಿರವನ್ನು ಆಯೋಜಿಸಲಾಯಿತು. ರಾಮನಗರದ ಪೆಟ್ರೋಲ್ ಪಂಪ್ ಪಕ್ಕದಲ್ಲಿ ಸುಸಜ್ಜಿತ ವ್ಯವಸ್ಥೆಯೊಂದಿಗೆ ಆಯೋಜಿಸಿದ ಶಿಬಿರದಲ್ಲಿ 300ಕ್ಕೂ ಅಧಿಕ ಮಂದಿ ಪ್ರಯೋಜನವನ್ನು ಪಡೆದರು. ಹಾಗೂ ಶಾಲ ಮಕ್ಕಳಿಗೆ ಪುಸ್ತಕ ಬ್ಯಾಗುಗಳನ್ನು ವಿತರಿಸಲಾಯಿತು. ಸುಮಾರು 150 ಮನೆಗಳ ಶುಚಿತ್ವ ಹಾಗೂ 400 ಮನೆಗಳ ಸಮೀಕ್ಷೆಗಳನ್ನು ನಡೆಸಲಾಗಿದೆ.
ರೇಶ್ಮೆ ಕಾರ್ಖಾನೆಯ ಸುರೇಶ್, ನಾಗೇಂದ್ರ ಮತ್ತು ಸುಹೇಲ್ ಅವರನ್ನ ಬೇಟಿಯಾದಾಗ ಮೋಟಾರು, ಬೆಳೆ ಬಾಳುವ ನೂಲುಗಳು ಧ್ವಂಸಗೊಂಡಿದೆ ಎಂದು ತಮ್ಮ ಅಳಲನ್ನು ವಿವರಿಸಿದರು. ಝಿಯಾವುಲ್ಲಾ ಕಾಲನಿ, ಸಂಕೇಶ್ವರ ಕಾಲನಿ, ಟಿಪ್ಪು ನಗರ, ಇದೇ ಮುಂತಾದ ಅಧಿಕ ಪ್ರಮಾಣದಲ್ಲಿ ನಾಶವಾದ ಪ್ರದೇಶಗಳಿಗೆ ಎಲ್ಲಾ ಕಡೆಯಿಂದ ಪರಿಹಾರದ ಮಹಾ ಪೂರವೇ ಹರಿದು ಬಂದು ಬಲಾಡ್ಯರು ಲಾಭ ಪಡೆಯುವುದನ್ನು ಕಂಡು ಎಲ್ಲಿ ಅರ್ಹರಿದ್ದಾರೆ ಅವರ ಪ್ರದೇಶಗಳಿಗೆ ತೆರಳಿ ಸಮೀಕ್ಷೆ ನಡೆಸಿ ಪರಿಹಾರ ನಿಡಲಾಯಿತು. ಮಹಿಳಾ ತಂಡದ ಅಧಕ್ಷ್ಯೆ ನಾಗಮ್ಮನವರು ನಿರಂತರ ಸಂಪರ್ಕ ಹಾಗೂ ಮಾಹಿತಿಗಳನ್ನು ಒದಗಿಸುತ್ತಿರುವುದು ಶ್ಲಾಘನೀಯ.
ರಕ್ಷಣೆಯ ಸಂದರ್ಭದಲ್ಲಿ ಮನೆಯ ಮಾಡನ್ನು ಒಡೆದು 3 ಜನರನ್ನು ರಕ್ಷಣೆ ಮಾಡಿದಾಗ ಕೆಟ್ಟು ಹೋದ ಮಾಡನ್ನು ನಮ್ಮ ಕಾರ್ಯಕರ್ತರು ಸಂಪೂರ್ಣ ಬದಲಿಸಿ ರಿಪೇರಿ ಮಾಡಿ ಕೊಟ್ಟರು. ರಿಫಾ ಚೇಂಬರ್ ಆಫ್ ಕಾಮರ್ಸ್ ತಂಡವು ಸೆಲ್ಗೆ ಆಗಮಿಸಿ ಸುಮಾರು 50 ಗ್ಯಾಸ್ ಸ್ಟೌವ್, ಪಾತ್ರೆ ಮತ್ತು ಆಹಾರಗಳನ್ನು ತಂದು ಸೆಲ್ನಲ್ಲೆ ಸಂತ್ರಸ್ತರನ್ನು ಕರೆದು ಸಭೆ ನಡೆಸಿ ಸಾಂತ್ವಾನದ ಮಾತನ್ನಾಡಿ ವಿತರಿಸಿದರು.
ಮುಂದಿನ ಯೋಜನೆಗಳು
ಮನೆಗಳ ರಿಪೇರಿ. ಬಾಡಿಗೆ ಮನೆಗಳಲ್ಲಿ ಇರುವವರಿಗೆ ಪರಿಹಾರ, ಸಂಪೂರ್ಣ ಕೆಟ್ಟು ಹೋದ ಬಾಡಿಗೆ ಮನೆಯಲ್ಲಿ ಇದ್ದವರಿಗೆ ಪರಿಹಾರ, ವ್ಯಾಪಾರಸ್ಥರಿಗೆ ಪುನರ್ ವ್ಯವಸ್ಥೆ, ಶಾಲೆ-ಕಾಲೇಜು ಮಕ್ಕಳಿಗೆ ಸಹಾಯ, ರೇಶ್ಮೆ ಕಾರ್ಖಾನೆಯವರಿಗೆ ಪರಿಹಾರ, ತಲುಪದೆ ಇದ್ದ ಅರ್ಹರಿಗೆ ಸ್ಟವ್, ಪಾತ್ರೆ ಮನೆಯ ಎಲ್ಲಾ ವಸ್ತುಗಳನ್ನು ಒದಗಿಸುವುದು ಹೀಗೆ ಹಲವು ಯೋಜನೆಗಳಿದ್ದು. ನೆರೆಯಿಂದ ಮನೆಗಳನ್ನು ಕಳೆದುಕೊಂಡವರಿಗೆ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆಯನ್ನೂ ರೂಪಿಸಿರುವುದಾಗಿ ಹೆಚ್ಆರ್ಎಸ್ ವಿವರಿಸಿದೆ.














