ಸನ್ಮಾರ್ಗ ವಾರ್ತೆ
ಲೋಕಸಭಾ ಚುನಾವಣೆಗೆ ಒಂದು ವರ್ಷ ಇರುವಂತೆಯೇ ರಾಷ್ಟ್ರೀಯ ಮುಸ್ಲಿಂ ಮಂಚ್ (MRM) ರಾಷ್ಟ್ರ ವ್ಯಾಪಿ ಪ್ರಚಾರಕ್ಕೆ ಇಳಿದಿದೆ. ಇದು ಆರ್ ಎಸ್ ಎಸ್ ಪ್ರಾಯೋಚಿತ ಸಂಘಟನೆಯಾಗಿದ್ದು, ಏಕರಾಷ್ಟ್ರ ಏಕ ಧ್ವಜ, ಏಕ ರಾಷ್ಟ್ರೀಯ ಗೀತೆ ಎಂಬ ಧ್ಯೇಯ ವಾಕ್ಯದೊಂದಿಗೆ ರಾಷ್ಟ್ರ ವ್ಯಾಪಿ ಪ್ರಚಾರವನ್ನು ನಡೆಸಲಿದ್ದೇವೆ ಎಂದು ಎಂಆರ್ ಎಂ ವಕ್ತಾರ ಶಾಹಿದ್ ಸಈದ್ ಹೇಳಿದ್ದಾರೆ. ಮುಖ್ಯವಾಗಿ ಮುಸ್ಲಿಮರ ನಡುವೆ ಈ ಪ್ರಚಾರ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಅಭಿಯಾನದಲ್ಲಿ ನಿಜವಾದ ಮುಸ್ಲಿಂ ಒಳ್ಳೆಯ ಪೌರನಾಗಿರುತ್ತಾನೆ ಎಂಬ ಸಂದೇಶವನ್ನು ಮುಸ್ಲಿಮರ ನಡುವೆ ಹರಡಲಾಗುವುದು ಎಂದು ತಿಳಿಸಲಾಗಿದೆ. ಜೂನ್ 8 ರಿಂದ ಜೂನ್ 11 ರವರೆಗೆ ಭೋಪಾಲ್ನಲ್ಲಿ ಎಂಆರ್ ಎಂ ಸ್ವಯಂಸೇವಕರು ಮತ್ತು ಕಾರ್ಯಕರ್ತರಿಗಾಗಿ ಮೂರು ದಿನಗಳ ತರಬೇತಿ ಶಿಬಿರವನ್ನು ಏರ್ಪಡಿಸಲಾಗುವುದು. ಆರ್ ಎಸ್ ಎಸ್ ಕಾರ್ಯಕಾರಿ ಸಮಿತಿಯ ಸದಸ್ಯ ಮತ್ತು ಎಂ ಆರ್ ಎಂ ಮುಖ್ಯಸ್ಥರಾದ ಇಂದ್ರೇಶ್ ಕುಮಾರ್ ಈ ತರಬೇತಿ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆದಷ್ಟು ಹೆಚ್ಚು ಮತಗಳನ್ನು ಬಿಜೆಪಿಯತ್ತ ತಿರುಗಿಸುವುದು ಈ ಪ್ರಚಾರದ ಉದ್ದೇಶವಾಗಿದೆ.
2021 ರಲ್ಲಿ ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ಕೊನೆಯ ಬಾರಿ ಎಮ್ ಆರ್ ಎಂ ಸದಸ್ಯರು ಮತ್ತು ಸ್ವಯಂಸೇವಕರ ತರಬೇತಿ ಶಿಬಿರ ನಡೆದಿತ್ತು. ಇದರಲ್ಲಿ ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್, ಜಂಟಿ ಕಾರ್ಯದರ್ಶಿ ಕೃಷ್ಣ ಗೋಪಾಲ್ ಮತ್ತು ರಾಮ್ ಲಾಲ್ ಭಾಗವಹಿಸಿದ್ದರು.












