ಬಿಜೆಪಿಗೆ ಹೋಗುವುದಿಲ್ಲ, ನಾನು ತೃಣಮೂಲದಲ್ಲೇ ಇದ್ದೇನೆ: ಊಹಾಪೋಹಗಳಿಗೆ ತೆರೆ ಎಳೆದ ಸಂಸದೆ ಶತಾಬ್ದಿ ರಾಯ್

0
411

ಸನ್ಮಾರ್ಗ ವಾರ್ತೆ

ಕೊಲ್ಕತಾ,ಜ.16: ಊಹಾಪೋಹಗಳಿಗೆ ತೆರೆ ಎಳೆದಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಶತಾಬ್ದಿ ರಾಯ್, ನಾನು ಬಿಜೆಪಿಗೆ ಹೋಗುವುದಿಲ್ಲ, ತೃಣಮೂಲದಲ್ಲೇ ಇರುವೆ ಎಂದು ಘೋಷಿಸಿದ್ದಾರೆ.

ಶುಕ್ರವಾರ ಸಂಜೆ ಕೊಲ್ಕತಾದಲ್ಲಿ ಅಭಿಷೇಕ್‍ ಬ್ಯಾನರ್ಜಿಯವರೊಂದಿಗೆ ಒಂದು ಗಂಟೆಯವರೆಗಿನ ಚರ್ಚೆಯ ಬಳಿಕ ಅವರು ತಾನು ಬಿಜೆಪಿಗೆ ಹೋಗುವುದಿಲ್ಲ ಎಂದು ಘೋಷಿಸಿದರು. ನಾನು ತೃಣಮೂಲದಲ್ಲಿಯೇ ಇದ್ದೇನೆ. ಪಾರ್ಟಿಯೊಂದಿಗೆ ನನಗಿದ್ದ ಸಮಸ್ಯೆಗಳನ್ನು ಅಭಿಷೇಕ್ ಮ್ಯಾನರ್ಜಿಗೆ ಮನವರಿಕೆಯಾಗಿದೆ. ಮಮತಾ ಬ್ಯಾನರ್ಜಿಗಾಗಿ ತಾನು ರಾಜಕೀಯ ಪ್ರವೇಶಿಸಿದ್ದೇನೆ. ನಾನು ಅವರ ಜೊತೆ ಇರುತ್ತೇನೆ ಎಂದು ಶತಾಬ್ದಿ ರಾಯ್ ಹೇಳಿದರು.

ಬಿರ್‍ಭೂಮಿ ಲೋಕಸಭಾ ಕ್ಷೇತ್ರದ ಸಂಸದೆಯಾಗಿರುವ ಶತಾಬ್ದಿ ರಾಯ್ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳ ಪುಟದಲ್ಲಿ ಮಾಡಿದ್ದ ಪೋಸ್ಟ್ ಮಮತಾ ಬ್ಯಾನರ್ಜಿಗೆ ತಲೆನೋವು ತರಿಸಿತ್ತು. ತಾನು ಒಂದು ತೀರ್ಮಾನ ತೆಗೆಯುವುದಾದರೆ ಅದನ್ನು ಜನವರಿ 16ಕ್ಕೆ ಎರಡು ಗಂಟೆಗೆ ತಿಳಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದರು.

ಈ ಸಲದ ಚುನಾವಣೆಯ ಮೊದಲು 50 ತೃಣಮೂಲ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದರು. ಇದರ ನಂತರ ಶತಾಬ್ದಿ ರಾಯ್ ಅವರ ಪೋಸ್ಟ್ ಅಭಿಮಾನಿಗಳ ಪುಟದಲ್ಲಿ ಕಾಣಿಸಿಕೊಂಡಿತ್ತು. ಬಿಜೆಪಿ ನಾಯಕ ಅಮಿತ್‍ ಶಾರನ್ನು ಶತಾಬ್ದಿ ರಾಯ್ ಭೇಟಿಯಾಗಲಿದ್ದಾರೆ ಎಂದು ವದಂತಿ ಹರಡಿದ್ದವು. ಈಗ ಅದಕ್ಕೆಲ್ಲ ತೆರೆ ಬಿದ್ದಿದೆ.