Home ಸುದ್ದಿ ಪ್ರವಾಹ ಪೀಡಿತರ ಪರಿಹಾರ ಕಾರ್ಯಗಳಲ್ಲಿ ಸಕ್ರಿಯರಾದ ಮುಸ್ಲಿಂ ಮಹಿಳೆಯರು: ಜಮಾಅತೆ ಇಸ್ಲಾಮಿಗೆ ವ್ಯಾಪಕ ಪ್ರಶಂಸೆ
ಕೇರಳ: ಸಾಮಾನ್ಯವಾಗಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂರಕ್ಷಣೆಗೆ ಆದ್ಯತೆಯನ್ನು ನೀಡಲಾಗುತ್ತದೆ. ಯಾಕೆಂದರೆ, ದುರ್ಬಲರು ಅನ್ನುವ ಹಣೆಪಟ್ಟಿಯೊಂದನ್ನು ಇವರ ಮೇಲೆ ತೂಗಿ ಬಿಡಲಾಗಿದೆ. ಆದರೆ, ಪ್ರವಾಹ ಪೀಡಿತರನ್ನು ರಕ್ಷಿಸುವ ಕಾರ್ಯದಲ್ಲಿ ಸ್ವತಃ ಮಹಿಳೆಯರೇ ತೊಡಗಿಸಿಕೊಂಡರೆ, ಆ ದೃಶ್ಯ ಹೇಗಿರಬಹುದು? ಅದರಲ್ಲೂ ಮುಸ್ಲಿಂ ಮಹಿಳೆಯರು ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿದರೆ ಅದಕ್ಕೆ ಸಿಗುವ ಪ್ರತಿಕ್ರಿಯೆಗಳು ಏನಿರಬಹುದು? ಕೇರಳದ ಕುಟ್ಟನಾಡ್ ಸದ್ಯ ಈ ಕಾರಣಕ್ಕಾಗಿ ರಾಷ್ಟ್ರದ ಕೇಂದ್ರ ಬಿಂದುವಾಗಿದೆ. ಕೇರಳ ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ತುರ್ತು ಸೇವಾ ವಿಭಾಗವಾದ ಐ ಆರ್ ಡಬ್ಲ್ಯೂ (ಐಡಿಯಲ್ ರಿಲೀಫ್ ವಿಂಗ್ )ನ ಮುಸ್ಲಿಮ್ ಮಹಿಳೆಯರು ನೆರವು ಕಾರ್ಯಗಳಲ್ಲಿ ಸಕ್ರಿಯರಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ಸಂದರ್ಭದಲ್ಲಿ ಐ ಆರ್ ಡಬ್ಲ್ಯೂವಿನ ಸಂಚಾಲಕರಾದ ಸಿಯಾಬ್ ರವರು “ ಪ್ರಕೃತಿ ವಿಕೋಪಗಳು ಸಂಭವಿಸಿದಲ್ಲೆಲ್ಲ ನಮ್ಮ ಸಂಸ್ಥೆಯು ದೇಶದಾದ್ಯಂತ ಜಾತಿ ಮತ ಧರ್ಮ ಬೇಧವಿಲ್ಲದೇ ನೆರವು ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತಿದೆ. ಮುಸ್ಲಿಮ್ ಮಹಿಳೆಯರೂ ಕೂಡ ನಮ್ಮ ಈ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಅವರಿಗೆ ಬೇಕಾದ ಪೂರಕ ತರಬೇತಿಯನ್ನು ನಮ್ಮ ಸಂಸ್ಥೆಯು ನೀಡುತ್ತದೆ” ಎಂದರು.
ಕೇರಳದ ಕುಟ್ಟನಾಡ್ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಐ ಆರ್ ಡಬ್ಲೂ ಮಹಿಳಾ ವಿಭಾಗದ ಸ್ವಯಂಸೇವಕಿಯರು ಮನೆ ಮನೆಗೆ ತೆರಳಿ ಸಾಮಗ್ರಿಗಳನ್ನು ಪ್ರವಾಹ ಪೀಡಿತರಿಗೆ ವಿತರಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಬಹುದು. ಈ ಮಹಿಳೆಯರ ಸೇವಾ ಕಾರ್ಯಗಳಿಗೆ ವ್ಯಾಪಕ ಪ್ರಶಂಸೆ ಲಭ್ಯವಾಗಿದೆ.
ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯು ದೇಶದ ಎಲ್ಲ ರಾಜ್ಯಗಳಲ್ಲಿ ಅಸ್ಥಿತ್ವವನ್ನು ಹೊಂದಿದ್ದು, ತುರ್ತು ಸೇವೆಗಳಿಗಾಗಿ ಸದಾ ಸಿದ್ಧವಾಗಿರುವ ಪುರುಷ ಮತ್ತು ಮಹಿಳಾ ತಜ್ಞ ತಂಡಗಳನ್ನು ಹೊಂದಿದೆ. ದೇಶದ ಒಳಿತಿನ ದೃಷ್ಟಿಯಿಂದ ವಿವಿಧ ಯೋಜನೆಗಳನ್ನು ರೂಪಿಸಿ ತನ್ನ ಕಾರ್ಯಕರ್ತರ ಮೂಲಕ ಜಾರಿಗೆ ತರಲು ಪ್ರಯತ್ನಿಸುತ್ತಿದೆ. ದೇಶಾದ್ಯಾ೦ತ ಸದ್ಭಾವನಾ ವೇದಿಕೆಗಳನ್ನು ರಚಿಸಿ ಹಿಂದೂ ಮುಸ್ಲಿಂ ಸಾಮರಸ್ಯಕ್ಕಾಗಿ ಪ್ರಯತ್ನಿಸುತ್ತಿದೆ.