ನನ್ನ ಪ್ರಧಾನಿಯವರೇ, ರುವಾಂಡದ ಹಸುಗಳಿಗೆ ಈ ಹೆಸರುಗಳನ್ನು ಕೊಟ್ಟಾದರೂ ಥಳಿತಕ್ಕೆ ಪ್ರತಿರೋಧ ತೋರುವಿರಾ?

0
938

ಏ. ಕೆ. ಕುಕ್ಕಿಲ

 

ನನ್ನ ಪ್ರಧಾನಿಯವರೇ,
2018 ಕ್ಕಾಗುವಾಗ 2 ಲಕ್ಷದ 30 ಸಾವಿರ ಬೀಫ್ ಉತ್ಪಾದನೆ ಮಾಡಬೇಕೆಂದು 2016 ರಲ್ಲೇ ಯೋಜನೆ ರೂಪಿಸಿದ ರುವಾಂಡಾಕ್ಕೆ ನೀವು 200 ಹಸುಗಳನ್ನು ಉಡುಗೊರೆಯಾಗಿ ನೀಡಿರುವ ಸುದ್ದಿಯನ್ನು ಓದಿ ನಾನು ಗಲಿಬಿಲಿಗೊಂಡಿದ್ದೇನೆ. ಭಾರತದಂತೆ ರುವಾಂಡವೂ ಮಾಂಸಪ್ರಿಯ ದೇಶ. ಗೋಮಾಂಸ ಅಲ್ಲಿ ನಿಷಿದ್ಧ ಅಲ್ಲ. ಬೀಫ್ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಅಲ್ಲಿನ ಬುಗುಸೆರಾ ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್ ಭೂಮಿಯನ್ನು 12 ಉದ್ಯಮಿಗಳಿಗೆ ರುವಾಂಡ ಸರಕಾರವು 2016 ರಲ್ಲಿ ಲೀಸ್ ಗೆ ನೀಡಿತ್ತು. ಮಾಂಸಕ್ಕಾಗಿ ಜಾನುವಾರು ಸಾಕಾಣಿಕೆ ಮಾಡುವುದೇ ಈ ಯೋಜನೆಯ ಉದ್ದೇಶ. ಅಲ್ಲಿನ ಅಧ್ಯಕ್ಷ ಪೌಲ್ ಕಗಾಮೆಯವರ ನೇತೃತ್ವದಲ್ಲಿ ನಡೆದ ಪಾರ್ಲಿಮೆಂಟ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. 2015 ರಲ್ಲಿ 85 ಸಾವಿರ ಟನ್ ಬೀಫ್ ಉತ್ಪಾದಿಸಿದ ರುವಾಂಡಕ್ಕೆ ಈ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸಬೇಕೆಂಬ ಉಮೇದು. ಗೋವಿನ ಹೆಸರಲ್ಲಿ ಥಳಿಸಿ ಕೊಲ್ಲುವ ಮತ್ತು ಆ ಕೊಲೆಗಳಿಗೆ ಒಂದು ಗೆರೆಯ ಸಂತಾಪವನ್ನೂ ವ್ಯಕ್ತಪಡಿಸದ ನೀವು, ಹೀಗೆ ಥಳಿಸಿ ಕೊಲ್ಲದ ಮತ್ತು ಗೋಮಾಂಸವನ್ನು ಮೆನುವಾಗಿಸಿಕೊಂಡಿರುವ ದೇಶಕ್ಕೆ 200 ಹಸುಗಳನ್ನು ಕೊಡುವಾಗ, ಗೋಹತ್ಯೆಯ ವಿರುದ್ಧ ಒಂದೇ ಒಂದು ಮಾತನ್ನೂ ಆಡಿಲ್ಲವಲ್ಲ, ಯಾಕೆ ನೀವು ಹೀಗೆ? ನಿಜಕ್ಕೂ ನಿಮ್ಮನ್ನು ನಾವು ಹೇಗೆ ಭಾವಿಸಬೇಕು? ಏನೆಂದು ಕರೆಯಬೇಕು? ನನ್ನ ಪ್ರಧಾನಿ ನನಗೇ ಅರ್ಥವಾಗದಷ್ಟು ಕಗ್ಗಂಟಾಗಿರುವುದು ಯಾಕೆ? ನಿಜಕ್ಕೂ ನೀವು ಹೀಗೆಯೋ ಅಥವಾ ನೀವು ಹೀಗೆಯೇ ಇರಬೇಕೆಂಬ ಒತ್ತಡವೊಂದರ ಪ್ರತಿನಿಧಿಯೋ ನೀವು? ಒಂದುವೇಳೆ, ಭಾರತದಲ್ಲಾಗುವ ಥಳಿತಗಳಿಗೆ ಪ್ರತಿಕ್ರಿಯಿಸುವ ಸ್ಥಿತಿಯಲ್ಲಿ ನೀವಿಲ್ಲವೆಂದಾದರೆ, ದಯವಿಟ್ಟು ನೀವು ರುವಾಂಡಾಕ್ಕೆ ಕೊಟ್ಟ ಹಸುಗಳಿಗೆ,

https://allafrica.com/stories/201610280086.html

ಅಖ್ಲಾಕ್, ಪೆಹ್ಲೂ ಖಾನ್, ಅಬೂ ಹನೀಫ, ರಿಯಾಜುದ್ದೀನ್ ಅಲಿ, ಸಮೀರುದ್ದೀನ್, ಅಲೀಮುದ್ದೀನ್ ಅನ್ಸಾರಿ, ಉಸ್ಮಾನ್ ಅನ್ಸಾರಿ, ಉಮ್ಮರ್ ಖಾನ್, ಕಾಸಿಂ… ಮತ್ತು ಇಂಥ ಇನ್ನೂ ಅನೇಕ ಹೆಸರುಗಳನ್ನು ಕೊಟ್ಟಾದರೂ ನಿಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿ. ಈ ಮೂಲಕವಾದರೂ ಈ ಹತ್ಯೆಗಳನ್ನು ಖಂಡಿಸಿ. ನಿಮಗಿದು ಸಾಧ್ಯ ಪ್ರಧಾನಿಯವರೇ. ಗುಂಪು ಹತ್ಯೆಯನ್ನು ತಡೆಯುವುದಕ್ಕಾಗಿ ಕನಿಷ್ಠ ಇಷ್ಟನ್ನಾದರೂ ಮಾಡಿ. ಥಳಿಸುವ ಮತ್ತು ಥಳಿತಕ್ಕೊಳಗಾಗುವ ಇಬ್ಬರಿಗೂ ನೀವೇ ಪ್ರಧಾನಿ. ಈ ಇಬ್ಬರೂ ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುವಂಥ ವಾತಾವರಣಕ್ಕೆ ನೀವೇಕೆ ಅವಕಾಶ ಮಾಡಿಕೊಡುತ್ತೀರಿ? ಅಥವಾ ನೀವೇ ಹೀಗೆಯೋ? 120 ಕೋಟಿ ಭಾರತೀಯರಲ್ಲಿ ಪ್ರೆತಿಯೊಬ್ಬರ ಸುಖ ದುಃಖದಲ್ಲೂ ನೀವಿರಬೇಕು. ನೀವು ಜೊತೆಗಿಲ್ಲ ಅನ್ನುವ ನಿರ್ವಾತ ಸ್ಥಿತಿಯೊಂದು ಯಾವ ಭಾರತೀಯನಲ್ಲೂ ಇರಬಾರದು. ಹಾಗಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಿಮಗಿದೆ ಎಂಬುದು ನನಗಿಂತಲೂ ಚೆನ್ನಾಗಿ ನಿಮಗೇ ಗೊತ್ತಿದೆ. ಹಾಗಿದ್ದೂ ಹೀಗೇಕೆ? ನಿಮ್ಮ ಜೊತೆ ಭಿನ್ನಾಭಿಪ್ರಾಯ ಇರುವ ಕೊಟ್ಯಾ೦ತರ ಭಾರತೀಯರಲ್ಲಿ ನಾನೂ ಒಬ್ಬ. ಆದರೆ, ನಿಮ್ಮನ್ನು ದ್ವೇಷಿಸುವವರಲ್ಲಿ ನಾನಿಲ್ಲ. ದ್ವೇಷಕ್ಕೆ ಕಣ್ಣಿಲ್ಲ. ವಿವೇಚನೆಯೂ ಇಲ್ಲ. ಆದರೆ, ಭಿನ್ನಾಭಿಪ್ರಾಯಕ್ಕೆ ಇವೆರಡೂ ಇದೆ. ನೀವು ದ್ವೇಷದ ಪರ ಇರಲಾರಿರಿ ಎಂದೇ ನಂಬುವೆ. ನನ್ನ ಪ್ರಧಾನಿ ಹಾಗೆ ಇರಬೇಕೆಂಬುದೇ ನನ್ನ ಆಸೆ. ನೀವು ಮಾತಾಡಿ ಸರ್. ಸಬ್ ಕಾ ಸಾಥ್ ಆಗಿ. ಇದು ನಿಮ್ಮಿಂದ ಖಂಡಿತ ಸಾಧ್ಯವಿದೆ.