‘ನಾನೊಬ್ಬ ಧಾರ್ಮಿಕ ವ್ಯಕ್ತಿ’: ತಾನು ಸತ್ತ ನಂತರ ಸ್ವರ್ಗಕ್ಕೆ ಹೋಗುವುದಾಗಿ ತಿಳಿಸಿದ ಟ್ರಂಪ್

0
192

ಸನ್ಮಾರ್ಗ ವಾರ್ತೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಎರಡನೇ ಅವಧಿಯಲ್ಲಿ ಹಲವು ಕೊಲೆ ಯತ್ನಗಳಿಂದ ಪಾರಾಗಿರುವ ಹಿನ್ನೆಲೆಯಲ್ಲಿ, ಸಿಬಿಎಸ್‌ನ ’60 ಮಿನಿಟ್ಸ್’ (60 Minutes) ಕಾರ್ಯಕ್ರಮದ ಸಂದರ್ಶನದಲ್ಲಿ ವರದಿಗಾರ ರಾಸ್ ಡೌಥಾಟ್ ಅವರು ಸಾವು ಮತ್ತು ನಶ್ವರತೆಯ ಕುರಿತು ಪ್ರಶ್ನೆಗಳನ್ನು ಎತ್ತಿದಾಗ ಸಂದರ್ಶನವು ನಿರೀಕ್ಷಿಸದ ತಿರುವು ಪಡೆದುಕೊಂಡಿತು.

ಭಾನುವಾರದ ಸಂದರ್ಶನದ ಸಮಯದಲ್ಲಿ, 80 ವರ್ಷದ ಟ್ರಂಪ್ ಅವರಿಗೆ ಕೊಲೆ ಯತ್ನಗಳಿಂದ ಪಾರಾಗಿರುವುದು ತಮ್ಮ ಸ್ವಂತ ನಶ್ವರತೆಯನ್ನು ನೋಡುವ ರೀತಿಯನ್ನು ಬದಲಾಯಿಸಿದೆಯೇ ಎಂದು ಡೌಥಾಟ್ ಕೇಳಿದರು, ನಂತರ ನೇರ ಪ್ರಶ್ನೆಯೊಂದನ್ನು ಕೇಳಿದರು: “ನೀವು ಸತ್ತಾಗ ಏನಾಗುತ್ತದೆ ಎಂದು ನೀವು ಭಾವಿಸುತ್ತೀರಿ?”

ಅಧ್ಯಕ್ಷರು ಕ್ಷಣಕಾಲ ತಡೆದು, “ಯಸ್‌, ನನ್ನನ್ನು ಜನರು ನೆನಪಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ,” ಎಂದರು.

“ಹ್ಞಾಂ, ನಾನೊಬ್ಬ ಧಾರ್ಮಿಕ ವ್ಯಕ್ತಿ, ಆದ್ದರಿಂದ ಸಿದ್ಧಾಂತದ ಪ್ರಕಾರ, ನಾನು ಸ್ವರ್ಗಕ್ಕೆ ಹೋಗುತ್ತೇನೆ, ನಾನು ಹಾಗೆ ಭಾವಿಸುತ್ತೇನೆ. ನಾನು ನರಕಕ್ಕೆ ಹೋಗಲು ಬಯಸುವುದಿಲ್ಲ.” ಎಂದು ಹೇಳಿದರು.

ನಂತರ ಡೌಥಾಟ್ ಅವರು ಸ್ವರ್ಗವನ್ನು ಪ್ರವೇಶಿಸುವ ಸಲುವಾಗಿ ತಮ್ಮ ರಾಜಕೀಯ ವೈರಿಗಳನ್ನು ಕ್ಷಮಿಸಲು ಸಾಧ್ಯವೇ ಎಂದು ಟ್ರಂಪ್ ಅವರ ಬಳಿ ಕೇಳಿದರು.

“ನೀವು ತೀರಿಕೊಂಡಿದ್ದೀರಿ, ಮುಂದಿನ ಜೀವನವನ್ನು ಪ್ರವೇಶಿಸುತ್ತಿದ್ದೀರಿ ಮತ್ತು ಸ್ವರ್ಗವನ್ನು ಪ್ರವೇಶಿಸಲು ನೀವು ಮಾಡಬೇಕಾಗಿರುವುದು ಜೇಮ್ಸ್ ಕೊಮಿ, ನ್ಯಾನ್ಸಿ ಪೆಲೋಸಿ ಹಾಗೂ ವರ್ಷಗಳಿಂದ ನೀವು ಯಾರ ಮೇಲೆ ದ್ವೇಷ ವ್ಯಕ್ತಪಡಿಸಿದ್ದೀರೋ ಅವರ ಮೇಲೆ ಪ್ರೀತಿ ಮತ್ತು ಕ್ಷಮಾಪಣೆಯನ್ನು ಹೊಂದುವುದು ಮಾತ್ರ ಎಂದು ಭಾವಿಸೋಣ. ಇದನ್ನು ಮಾಡಲು ನಿಮಗೆ ಸಾಧ್ಯವೇ?”

ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, “ನನ್ನ ಉತ್ತರ ಇಲ್ಲ. ನಾನು ಪ್ರಾಮಾಣಿಕವಾಗಿರಲು ಬಯಸುತ್ತೇನೆ, ಇಲ್ಲ. ನನಗೆ ಬಹುಶಃ ಅದನ್ನು ಮಾಡಲು ಸಾಧ್ಯವಿಲ್ಲ, ಇಲ್ಲ, ಏಕೆಂದರೆ ನಾನು ನನ್ನ ಕೆಲವು ಶತ್ರುಗಳನ್ನು ದ್ವೇಷಿಸುತ್ತೇನೆ ಮತ್ತು ಯಾವಾಗಲೂ ದ್ವೇಷಿಸುತ್ತಲೇ ಇರುತ್ತೇನೆ.” ಎಂದು ಹೇಳಿದರು.