ಐಎಂಎ ಹಗರಣ: ಆತ್ಮಾವಲೋಕನದ ಅಗತ್ಯ

0
956

ಡಾ/ ಮುಹಮ್ಮದ್ ಸಾದ್ ಬೆಳಗಾಮಿ

(ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಘಟಕದ ಅಧ್ಯಕ್ಷರು)

ಇತ್ತೀಚಿಗೆ IMA ಮತ್ತು ಇತರ ponzy ಕಂಪೆನಿಗಳ ಬಗ್ಗೆ ಲಭಿಸುತ್ತಿರುವ ಮಾಹಿತಿಗಳು ತುಂಬಾ ಚಿಂತಾಜನಕವಾಗಿವೆ. ಇವುಗಳಲ್ಲಿ ಗಮನಿಸಬೇಕಾದ ಹಲವಾರು ಮಗ್ಗುಲುಗಳಿವೆ. ಪ್ರಥಮತಃ, ಅದರಲ್ಲಿ ತನ್ನ ಅಮೂಲ್ಯ ಉಳಿತಾಯ ಮತ್ತು ಬಂಡವಾಳ ಹೂಡಿ ನಿರ್ಲಕ್ಷ್ಯ ಮತ್ತು ಅಚಾತುರ್ಯದಿಂದ ಹೂಡಿಕೆಯನ್ನು ಕಳಕೊಳ್ಳಬೇಕಾದ ಸ್ಥಿಯಲ್ಲಿರುವ ಸಾವಿರಾರು ಬಡ ಮತ್ತು ಮಾಧ್ಯಮ ವರ್ಗದ ಪೀಡಿತ ಜನರಿಗೆ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ. ಈ ಬಡ ಜನರ ಕುರಿತಾಗಿ ಬರುತ್ತಿರುವ ಮಾಹಿತಿಗಳು ಅತ್ಯಂತ ಹೃದಯವಿದ್ರಾವಕ ಮತ್ತು ನೋವಿನಿಂದ ಕೂಡಿದೆ. ಅವರಿಗೆ ಶೀಘ್ರ ಪರಿಹಾರ ಮತ್ತು ಹೂಡಿದ ಬಂಡವಾಳವನ್ನು ಹಿಂತಿರುಗಿಸುವ ಕೆಲಸಗಳಾಗಬೇಕಾಗಿದೆ.

ಅವಾಸ್ತವಿಕ ಮತ್ತು ಶೀಘ್ರ ಲಾಭದ ಆಸೆಯು ಸೂಕ್ತ ಪರಿಶೀಲನೆಗೊಳಪಡಿಸದೆ ಬಂಡವಾಳ ಹೂಡುವಂತೆ ಮಾಡುತ್ತದೆ ಮತ್ತು ಇದು ದೊಡ್ಡ ಮಟ್ಟದಲ್ಲಿ ವಂಚನೆಗೊಳಗಾಗಬಹುದಾದ ಸ್ಥಿತಿಯನ್ನು ಉಂಟುಮಾಡುತ್ತದೆ. ಇದು ನಮ್ಮದೇ ನ್ಯೂನತೆಯಾಗಿದೆ. ಪರಿಶ್ರಮ ಮತ್ತು ಭಾಗೀಧಾರಿಕೆಯಿಂದ ಹಣ ಗಳಿಸುವ ಬದಲು ಮನೆಯಲ್ಲಿ ಹಾಯಾಗಿ ಕುಳಿತು ಲಾಭ ಗಿಟ್ಟಿಸುವ ಪ್ರವೃತ್ತಿಯು ಅನಿಸ್ಲಾಮಿಕವಾಗಿದೆ. IMA ಯ ಕೊಡುಗೆಗಳಲ್ಲಿ (Offer) ವಂಚನೆ, ದರ್ಪ, ಇಸ್ಲಾಮೀ ಆರ್ಥಿಕ ನೀತಿ ಹಾಗೂ ಪದಗಳ ತಪ್ಪು ಬಳಕೆ; ವ್ಯಾಪಾರ, ಹಣಕಾಸು ನಿಯಮಗಳು ಮತ್ತು ಅದರ ನಿಯಮಗಳೊಂದಿಗೆ ಬದ್ಧತೆಯ ಕೊರತೆಯು ಅದರ ಆರಂಭದ ದಿನಗಳಿಂದಲೇ ಸ್ಪಷ್ಟವಾಗಿತ್ತು. ಆದರೆ, ದುರಾಸೆಯು ಜನರನ್ನು ಅಂಧರನ್ನಾಗಿಸಿತು. ಈ ವಿಷಯದಲ್ಲಿ ವಿದ್ವಾಂಸರ ಪಾತ್ರ ಬೇಡಿಕೆಗೆ ತಕ್ಕಂತೆ ಮತ್ತು ಮಾರ್ಗದರ್ಶಕ ರೀತಿಯಲ್ಲಿ ಇರಲಿಲ್ಲ. ಕೆಲವು ಉಲಮಾಗಳ ಅಜಾಗರೂಕ ನಿಲುವು ಅವರ ಘನತೆಗೆ ಚ್ಯುತಿಯುಂಟು ಮಾಡುವಂತೆ ಮಾಡಿತು. ಇಂತಹ ಉಲಮಾಗಳಿಗೂ ಇದು ಆತ್ಮಾವಲೋಕನದ ಸಂದರ್ಭವಾಗಿದೆ. ಇದನ್ನು ನೀಗಿಸಲು ಸಮುದಾಯವು ಒಗ್ಗಟ್ಟಾಗಿ ಚಿಂತಿಸಬೇಕಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಈಗಿನ ಅವಿಶ್ವಸನೀಯ ವಾತಾವರಣ ಅತ್ಯಂತ ನಷ್ಟದಾಯಕವಾದುದು. ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸುವಲ್ಲಿ ರಾಜಕಾರಣಿಗಳ ಪಾತ್ರವನ್ನು ಅರಿಯುವ ಮತ್ತು ಆ ಬಗ್ಗೆ ಜಾಗರೂಕರಾಗಿರಬೇಕಾದ ಅಗತ್ಯವಿದೆ. ವ್ಯವಹಾರಗಳಲ್ಲಿ ಪರಿಶುದ್ಧತೆ, ನ್ಯಾಯ ಮತ್ತು ಪ್ರಾಮಾಣಿಕತೆ ಮುಸ್ಲಿಮರ ವಿಶೇಷತೆಯಾಗಬೇಕಾಗಿದೆ. ಇದಕ್ಕಾಗಿ ಇಸ್ಲಾಮೀ ಶಿಕ್ಷಣಗಳನ್ನು ವ್ಯಾಪಕಗೊಳಿಸುವ ಮತ್ತು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ. ಇದುವೇ ಇಸ್ಲಾಮಿನ ಪ್ರಾಯೋಗಿಕ ಸಾಕ್ಷ್ಯ ಮತ್ತು ಸಂದೇಶ ಪ್ರಚಾರದ ಕರ್ತವ್ಯದ ಬೇಡಿಕೆಯಾಗಿದೆ. ಪ್ರವಾದಿ ಶುಹೈಬ್ ಸಮುದಾಯದ ಮೇಲೆ ಎರಗಿದ ವಿಪತ್ತು ಅವರ ಆರ್ಥಿಕ ಅವ್ಯವಹಾರಗಳ ಕ್ಷೋಭೆಗಾಗಿತ್ತೆಂಬುದನ್ನು ನೆನಪಿಡಬೇಕಾಗಿದೆ.

ಇಂಥ ponzy ಕಂಪೆನಿಗಳಿಂದ ಜಾಗೃತರಾಗಿರಲು ಮತ್ತು ತಪ್ಪಿತಸ್ಥರನ್ನು ಸೂಕ್ತ ಶಿಕ್ಷೆಗೊಳಪಡಿಸಿ, ಪೀಡಿತರಿಗೆ ನ್ಯಾಯ ಕೊಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿಯನ್ನು ಬಹಿರಂಗಪಡಿಸುವಂತೆ ಮತ್ತು ಪೀಡಿತರಿಗೆ ನೆರವಾಗುವ ದಾರಿಗಳನ್ನು ಕಂಡುಕೊಳ್ಳುವಂತೆ ಸರಕಾರವನ್ನು ಕೋರುತ್ತೇನೆ.

ಅಲ್ಲಾಹನು ನಮಗೆ ಇಸ್ಲಾಮಿ ದೂರದೃಷ್ಟಿ ಮತ್ತು ಚಾರಿತ್ರ್ಯವನ್ನು ದಯಪಾಲಿಸಲಿ. ಲೋಕದ ದುರಾಸೆಯಿಂದ ರಕ್ಷಿಸಲಿ. ಈ ಪ್ರಕರಣದ ದುಷ್ಪ್ರಭಾವದಿಂದ ರಕ್ಷಿಸಲಿ.