ಫೋಟೋಕ್ಕಾಗಿ ಹೆಲಿಕಾಪ್ಟರ್‌ನಲ್ಲಿ ವೀಕ್ಷಣೆ ಮಾಡಿದ್ದಾರೆ ಎಂದು ಪ್ರಧಾನಿಯ ಕಾಲೆಳೆದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ

0
424

ಸನ್ಮಾರ್ಗ ವಾರ್ತೆ

ಮುಂಬೈ: ಗುಜರಾತ್ ನಲ್ಲಿ ತೌಕ್ತೇ ಚಂಡಮಾರುತದಿಂದ ಉಂಟಾದ ಹಾನಿಯನ್ನು ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರ ಕಾಲೆಳೆದಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಒಂದು ಫೋಟೋಗಾಗಿ ಹೆಲಿಕಾಪ್ಟರ್‌ನಲ್ಲಿ ವೀಕ್ಷಣೆ ಮಾಡಿದ್ದಾರೆ ಎಂದು ಬಿಜೆಪಿಗರ ಟೀಕೆಗೆ ಉತ್ತರಿಸಿದ್ದಾರೆ.

ಗುಜರಾತ್ ನಲ್ಲಿ ತೌಕ್ತೇ ಚಂಡಮಾರುತವು ಸಾಕಷ್ಟು ಹಾನಿ ಉಂಟು ಮಾಡಿತ್ತು. ವೈಮಾನಿಕ ಸಮೀಕ್ಷೆ ನಡೆಸಿದ್ದ ಪ್ರಧಾನಿಯವರು ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಈ ಮಧ್ಯೆ ಮಹಾರಾಷ್ತ್ರದಲ್ಲಿ ಕೂಡ ಚಂಡಮಾರುತದಿಂದ ಹಾನಿ ಉಂಟಾದ ಪ್ರದೇಶಗಳಿಗೆ ಉದ್ಧವ್ ಠಾಕ್ರೆ ಭೇಟಿ ನೀಡಿದ್ದನ್ನು ಮಹಾರಾಷ್ಟ್ರದ ಬಿಜೆಪಿ ಮುಖಂಡರಾದ ದೇವೇಂದ್ರ ಫಡ್ನವಿಸ್ ಹಾಗೂ ಪ್ರವೀಣ್ ದಾರೇಕರ್ ಪ್ರಶ್ನಿಸಿ, ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಉದ್ಧವ್ ಠಾಕ್ರೆ ಹೇಗೆ ಹಾನಿಯನ್ನು ಅರ್ಥಮಾಡಿಕೊಳ್ಳಬಲ್ಲರು ಎಂದು ಟೀಕಿಸಿದ್ದರು.

ಬಿಜೆಪಿಗರ ಟೀಕೆಗೆ ಉತ್ತರವಾಗಿ ಪ್ರಧಾನಿಯವರು ವೈಮಾನಿಕ ಸಮೀಕ್ಷೆ ನಡೆಸಿದ್ದನ್ನು ಉಲ್ಲೇಖಿಸಿದ ಮಹಾ ಸಿಎಂ ಉದ್ಧವ್ ಠಾಕ್ರೆ, ನನ್ನ ಪ್ರವಾಸವು ನಾಲ್ಕು ಗಂಟೆಗಳ ಕಾಲ ನೆಲದಲ್ಲೇ ನಡೆದಿದೆ. ಕನಿಷ್ಠ ನಾನು ಪರಿಸ್ಥಿತಿಯ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತಿದ್ದೇನೆ ಮತ್ತು ಪ್ರಧಾನಿಯವರಂತೆ ಫೋಟೋ ಸೆಷನ್‌ಗಾಗಿ ಹೆಲಿಕಾಪ್ಟರ್‌ನಲ್ಲಿ ಅಲ್ಲ ಎಂದು ಕುಟುಕಿದ್ದಾರೆ.

ಚಂಡಮಾರುತದ ನಂತರದ ವಾಸ್ತವ ಪರಿಸ್ಥಿತಿ ತಿಳಿಯಲು ಉದ್ಧವ್ ಠಾಕ್ರೆ ಶುಕ್ರವಾರ ಕೊಂಕಣದ ರತ್ನಾಗಿರಿ ಮತ್ತು ಸಿಂಧುದುರ್ಗ್ ಜಿಲ್ಲೆಗಳಿಗೆ ಭೇಟಿ ನೀಡಿ, ಬೆಳೆ ನಷ್ಟದ ಮೌಲ್ಯಮಾಪನವನ್ನು ಎರಡು ದಿನಗಳಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.