‘ನರಕದಂತಿರುವ ದೇಶ’; 30 ದಿನಗಳ ಭೇಟಿಯ ನಂತರ ಭಾರತದ ವಿರುದ್ಧ ಅಪಮಾನಕಾರಿ ಹೇಳಿಕೆ ನೀಡಿದ ಜಪಾನಿ ವ್ಲಾಗರ್‌, ಸಾಮಾಜಿಕ ಜಾಲತಾಣಗಳಲ್ಲಿ ತರಾಟೆ

0
217

ಸನ್ಮಾರ್ಗ ವಾರ್ತೆ

ಟೋಕಿಯೋ: 30 ದಿನಗಳ ಭೇಟಿಯ ನಂತರ ಭಾರತವನ್ನು ‘ನರಕದಂತಿರುವ ದೇಶ’ ಎಂದು ಬಣ್ಣಿಸಿದ ಜಪಾನಿ ಪ್ರವಾಸಿಯೊಬ್ಬರನ್ನು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾಗಿದೆ. ತಮ್ಮ ತಿಂಗಳ ಅವಧಿಯ ಭೇಟಿಯಲ್ಲಿ ಅವರು ವಸತಿ ಮತ್ತು ಪ್ರಯಾಣಕ್ಕಾಗಿ ಕೇವಲ ಸುಮಾರು 48,000 ರೂ.ಗಳನ್ನು ಮಾತ್ರ ವೆಚ್ಚ ಮಾಡಿದ್ದರು. ಆದಾಗ್ಯೂ, ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡ ಕ್ಸಿಲ್ (Xil), ಭಾರತದಲ್ಲಿ ತಮ್ಮ ಅನುಭವಗಳಿಂದ ಒಬ್ಬ ಪ್ರವಾಸಿಯಾಗಿ ತಮಗೆ ತೃಪ್ತಿಯಾಗಿಲ್ಲ ಎಂದು ಬರೆದುಕೊಂಡಿದ್ದಾರೆ.

ಮತ್ತೆಂದು ಭಾರತಕ್ಕೆ ಭೇಟಿ ನೀಡುವುದಿಲ್ಲ ಎಂಬ ಅಂಶವೂ ಸೇರಿದಂತೆ ಈ ಪ್ರವಾಸಿಯ ಕಾಮೆಂಟ್‌ಗಳು ತೀವ್ರ ಟೀಕೆಗೆ ಗುರಿಯಾಗಿವೆ. “ಕೊನೆಗೂ ಜಪಾನ್‌ಗೆ ಮರಳಿದ್ದೇನೆ! ಭಾರತವು ಅತ್ಯಂತ ಕೆಟ್ಟ ನರಕದಂತಿರುವ ದೇಶವಾಗಿತ್ತು! ನಾನು ಇನ್ನೆಂದು ಭಾರತಕ್ಕೆ ಹೋಗುವುದಿಲ್ಲ!” ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ತಮ್ಮ 30 ದಿನಗಳ ಪ್ರವಾಸದಲ್ಲಿ ಅವರು 5,000 ಕಿಲೋಮೀಟರ್ ಪ್ರಯಾಣಿಸಿದ್ದರು. ಅವರು 95,000 ಜಪಾನೀಸ್ ಯೆನ್ (ಸುಮಾರು 56,750 ರೂ.) ವೆಚ್ಚ ಮಾಡಿದ್ದರು. ವಿಮಾನದ ಟಿಕೆಟ್‌ಗಳಿಗಾಗಿ ಅವರು 80,000 ಜಪಾನೀಸ್ ಯೆನ್ (ಸುಮಾರು 47,800 ರೂ.) ಖರ್ಚು ಮಾಡಿದ್ದಾರೆ. ಕತ್ತರಿಸಿದ ಹಣ್ಣನ್ನು ತಿಂದ ನಂತರ ಒಮ್ಮೆ ಅನಾರೋಗ್ಯಕ್ಕೆ ಒಳಗಾಗಿದ್ದಾಗಿ, ಮೂರು ಬಾರಿ ಭಾರತೀಯರ ಮೇಲೆ ಕೋಪಗೊಂಡಿದ್ದಾಗಿ ಮತ್ತು ಮೂರು ಕಿಲೋ ತೂಕ ಕಡಿಮೆಯಾಗಿದ್ದಾಗಿ ಈ ಜಪಾನಿ ವ್ಲಾಗರ್ ವಿವರಿಸಿದ್ದಾರೆ. ತಮ್ಮ ಪ್ರವಾಸದ ಸಮಯದಲ್ಲಿ ತಮ್ಮ ಹಣದ ಹೆಚ್ಚಿನ ಭಾಗವನ್ನು ಭಾರತೀಯರಿಗಾಗಿಯೇ ಖರ್ಚು ಮಾಡಿದ್ದೇನೆ ಎಂದು ಅವರು ಹೇಳುತ್ತಾರೆ.

ಆದರೆ ಇಷ್ಟೊಂದು ಸೀಮಿತ ಬಜೆಟ್‌ನಲ್ಲಿ ಅವರು ದೇಶಾದ್ಯಂತ ಹೇಗೆ ಪ್ರಯಾಣಿಸಿದರು ಎಂದು ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಂದು ತಿಂಗಳ ಪ್ರಯಾಣಕ್ಕೆ 95,000 ಯೆನ್ (ಸುಮಾರು 56,750 ರೂ.) ಖರ್ಚು ಮಾಡುವುದು ಅತ್ಯಂತ ಸಣ್ಣ ಬಜೆಟ್ ಎಂದು ನೆಟ್ಟಿಗರು ಬೆಟ್ಟು ಮಾಡಿ ತೋರಿಸಿದ್ದಾರೆ. ಈ ಮೊತ್ತಕ್ಕೆ ಅಮೆರಿಕ, ಚೀನಾ ಮತ್ತು ಜಪಾನ್‌ನಂತಹ ದೇಶಗಳು ಸಹ ನರಕದಂತೆ ತೋರುತ್ತವೆ ಎಂದು ಬಳಕೆದಾರರೊಬ್ಬರು ಉಲ್ಲೇಖಿಸಿದ್ದಾರೆ. “30 ದಿನಗಳಿಗೆ 57,000 ರೂ.? ನನ್ನ ಫೋನ್ ವೆಚ್ಚವೂ ಇದಕ್ಕಿಂತ ಹೆಚ್ಚಾಗಿದೆ,” ಎಂಬುದು ಮತ್ತೊಬ್ಬರ ಪ್ರತಿಕ್ರಿಯೆಯಾಗಿತ್ತು. ಮುಂದಿನ ಬಾರಿ ಕಮ್ಮಿ ಹಣ ಖರ್ಚು ಮಾಡಿ ಪ್ರವಾಸವನ್ನು ಹೆಚ್ಚು ಆನಂದದಾಯಕವಾಗಿಸಿಕೊಳ್ಳಿ ಎಂದು ಕೆಲವರು ಸಲಹೆ ನೀಡಿದ್ದಾರೆ.