ಸೌದಿಯಲ್ಲಿ ಹೊಸ ಕಾನೂನು: 3 ತಿಂಗಳಿಗೆ ಇಕಾಮ ನವೀಕರಿಸಬಹುದು

0
1591

ಸನ್ಮಾರ್ಗ ವಾರ್ತೆ

ರಿಯಾದ್: ಸೌದಿ ಅರೇಬಿಯಾದಲ್ಲಿ ವಿದೇಶದಿಂದ ಬಂದು ಕೆಲಸ ಮಾಡುವವರು ಮೂರು ತಿಂಗಳಿಗೆ ಇಕಾಮ ನವೀಕರಣ ಮಾಡುವ ಅವಕಾಶವನ್ನು ಕಲ್ಪಿಸಲಾಗಿದ್ದು, ಇಕಾಮದ ಶುಲ್ಕವನ್ನು ಒಟ್ಟಿಗೆ ಮೂರು ತಿಂಗಳಿಗೆ, ಆರು ತಿಂಗಳ ಗಡುಗಳಲ್ಲಿ ಪಾವತಿಸಬಹುದು.

ಹೊಸ ಕಾನೂನಿಗೆ ಮಂಗಳವಾರ ರಾತ್ರಿ ದೊರೆ ಸಲ್ಮಾನ್‍ರ ಅಧ್ಯಕ್ಷತೆಯ ಸಚಿವ ಸಂಪುಟ ಅಂಗೀಕಾರ ನೀಡಿದೆ..

ದೇಶದಲ್ಲಿ ಖಾಸಗಿ ಕ್ಷೇತ್ರದಲ್ಲಿ ಭರವಸೆ ತುಂಬುವ ಕ್ರಮ ಇದಾಗಿದ್ದು, ಇಕಾಮ ಶುಲ್ಕ, ತೆರಿಗೆ ದೊಡ್ಡ ಮೊತ್ತವಾಗಿದೆ. ಈಗಿರುವ ಲೆಕ್ಕದಂತೆ ಇಕಾಮ ಶುಲ್ಕ, ಲೆವಿ(ತೆರಿಗೆ) ಮೆಡಿಕಲ್ ಇನ್ಶೂರೆನ್ಸ್ ಸೇರಿ 12,000 ರಿಯಾಲ್ ವೆಚ್ಚ ಭರಿಸಬೇಕಾಗಿದೆ. ಇದರ ನಾಲ್ಕರಲ್ಲಿ ಒಂದು ಭಾಗನ್ನು ಕೊಟ್ಟು ಮೂರು ತಿಂಗಳಿಗೆ ಇಕಾಮ ನವೀಕರಣ ಮಾಡುವ ಅವಕಾಶವನ್ನು ಹೊಸ ಕಾನೂನು ನೀಡಿದ್ದು ಖಾಸಗಿ ಸಂಸ್ಥೆಗಳಿಗೆ ದೊಡ್ಡ ಭಾರವನ್ನು ಕಡಿಮೆ ಮಾಡಿದಂತೆ ಆಗಿದೆ.

ಇದು ಖಾಸಗಿ ಕ್ಷೇತ್ರದಲ್ಲಿ ಹೊಸ ಜಾಗೃತಿಗೆ ಸಹಾಯಕವಾಗಲಿದ್ದು, ಒಬ್ಬ ಕಾರ್ಮಿಕನ ಸೇವೆಯನ್ನು ಆರು ತಿಂಗಳಿಗೆ ಮಾತ್ರ ಸಾಕು ಎಂದಿದ್ದರೆ ಅಷ್ಟು ಸಮಯದ ಶುಲ್ಕವನ್ನು ಮಾತ್ರ ನೀಡಿದರೆ ಸಾಲುತ್ತದೆ. ಒಂದು ವರ್ಷದ ಹಣವನ್ನು ವ್ಯಯಿಸುವ ಅಗತ್ಯವಿಲ್ಲ.
ಆದರೆ, ಹೌಸ್ ಡ್ರೈವರ್, ಹೌಸ್‍ಮೇಡ್ ಮುಂತಾದ ಮನೆಕೆಲಸದ ವೀಸಾ ಇರುವವರು ಈ ಕಾನೂನಿನ ವ್ಯಾಪ್ತಿಗೆ ಬರುವುದಿಲ್ಲ.

ವಾಣಿಜ್ಯೋದ್ದೇಶದ ವೀಸಾಗಳು ಮಾತ್ರ ಈ ವ್ಯಾಪ್ತಿಗೆ ಒಳಪಡುತ್ತಿದೆ ಎಂದು ಸರಕಾರ ತಿಳಿಸಿದೆ. ಮನೆಕೆಲಸದ ಕಾರ್ಮಿಕರಿಗೆ ತೆರಿಗೆ ಇಲ್ಲ.