ಸನ್ಮಾರ್ಗ ವಾರ್ತೆ
ಮಂಗಳೂರು: ಅಹಿಂಸಾ ತತ್ವದ ಜೈನ ಮುನಿ ಧಾರ್ಮಿಕ ಆಚಾರ್ಯ ಕಾಮಕುಮಾರ ನಂದಿ ಮಹಾರಾಜ ಸ್ವಾಮೀಜಿಗಳ ಬೀಬತ್ಸ ಹತ್ಯೆಯು ಇಡೀ ಮಾನವ ಕುಲಕ್ಕೆ ಕಪ್ಪು ಚುಕ್ಕೆಯಾಗಿದ್ದು ಇದು ಅಮಾನವೀಯವೂ ರಾಕ್ಷಸೀಯವೂ ಆದ ಕೃತ್ಯವಾಗಿದೆ. ಈ ಕ್ರೂರ ಕೃತ್ಯವೆಸಗಿದ ರಾಕ್ಷಸರನ್ನ ಜಾತಿ ಧರ್ಮದ ಹಂಗಿಗೆ ಒಳಪಡಿಸದೇ ಮರಣ ದಂಡನೆಯಂತಹ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಸರಕಾರವನ್ನು ಒತ್ತಾಯಿಸಿದೆ.
ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ ಇದರ ಹಿಂದಿರುವ ಎಲ್ಲಾ ಷಡ್ಯಂತ್ರವನ್ನು ಬಯಲಿಗೆಳೆದು ನ್ಯಾಯಯುತವಾದ ತನಿಖೆ ನಡೆಸಿ ಜನರ ಗೊಂದಲವನ್ನು ನಿವಾರಿಸಬೇಕಾಗಿದೆ.
ಇಂತಹ ಕ್ರೂರ ಕೃತ್ಯಗಳಿಂದಾಗಿ ಇಡೀ ದೇಶದ ಮಾನ ಹರಾಜಾಗುತ್ತಿದ್ದು ಇದನ್ನು ಸ್ವಾರ್ಥ ರಾಜಕೀಯಕ್ಕೆ ಬಳಸಿಕೊಳ್ಳದೇ ಮುಂದೆ ಇಂತಹ ಕೃತ್ಯಗಳು ಮರುಕಳಿಸದಂತೆ ನೋಡಿಕೊಳ್ಳಲು ಬೇಕಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಪಕ್ಷ ಭೇದ ಮರೆತು ಒತ್ತಾಯಿಸಬೇಕಿದೆ ಎಂದು ದಾರಿಮಿ ಒಕ್ಕೂಟ ಅಭಿಪ್ರಾಯ ಪಟ್ಟಿದೆ ಎಂದು ಸಮಿತಿಯ ಅಧ್ಯಕ್ಷ ಎಸ್ ಬಿ ದಾರಿಮಿ, ಕಾರ್ಯದರ್ಶಿ ಯುಕೆ ದಾರಿಮಿ, ಕೋಶಾಧಿಕಾರಿ ಹುಸೈನ್ ದಾರಿಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












