ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧ: ವಿರೋಧ ವ್ಯಕ್ತಪಡಿಸಿದ ಜಮಾಅತೆ ಇಸ್ಲಾಮಿ ಹಿಂದ್

0
229

ಸನ್ಮಾರ್ಗ ವಾರ್ತೆ

ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ನಿಷೇಧವನ್ನು ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೇನಿ ವಿರೋಧಿಸಿದ್ದಾರೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅದರ ಅಂಗಸಂಸ್ಥೆಗಳನ್ನು ನಿಷೇಧಿಸುವ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಜಮಾಅತೆ ಇಸ್ಲಾಮೀ ಹಿಂದ್, ಸಂಘಟನೆಗಳಿಗೆ ನಿಷೇಧ ಹೇರುವುದು ಪರಿಹಾರವಲ್ಲ. ಈ ಕ್ರಮವು ಪ್ರಜಾಸತ್ತಾತ್ಮಕ ಸಮಾಜದಲ್ಲಿ ಸಮಂಜಸವಲ್ಲ ಎಂದು ಸಾದತುಲ್ಲ ಹುಸೇನಿ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಂಘಟನೆಗಳನ್ನು ನಿಷೇಧಿಸುವ ಸಂಸ್ಕೃತಿಯು ಸಂವಿಧಾನದಿಂದ ಸಂರಕ್ಷಿಸಲ್ಪಟ್ಟ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಪ್ರಜಾಸತ್ತಾತ್ಮಕ ಮನೋಭಾವ ಮತ್ತು ಮೂಲಭೂತ ನಾಗರಿಕ ಸ್ವಾತಂತ್ರ್ಯಗಳಿಗೆ ವಿರುದ್ಧವಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ತಿಳಿಸಿದೆ.

ಜನರಿಗೆ ಸಂಘಟನೆಗಳು, ಅವರ ನೀತಿಗಳು ಮತ್ತು ವಿಚಾರಧಾರೆಗಳ ಕುರಿತು ಭಿನ್ನಾಭಿಪ್ರಾಯಗಳು ಇರಬಹುದು. ಹಲವಾರು ವಿಷಯಗಳಲ್ಲಿ ಅವರನ್ನು ವಿರೋಧಿಸುವವರಿರಬಹುದು. ಆದರೆ ಅದುವೇ ಸಂಘಟನೆಯನ್ನು ನಿಷೇಧಿಸಲು ಮತ್ತು ಅದರ ಕಾರ್ಯಕರ್ತರಿಗೆ ಕಿರುಕುಳ ನೀಡಲು ಕಾರಣವಾಗಬಾರದು ಎಂದಿರುವ ಹುಸೇನಿ, ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಪೋಲೀಸ್ ಮತ್ತು ಆಡಳಿತದ ಕರ್ತವ್ಯ. ಯಾವುದೇ ವ್ಯಕ್ತಿ ಕಾನೂನು ಉಲ್ಲಂಘಿಸಿದರೆ ಅಥವಾ ಯಾವುದಾದರೂ ಅಪರಾಧವನ್ನು ಮಾಡಿದರೆ ಕಾನೂನಿನ ನಿಬಂಧನೆಗಳ ಪ್ರಕಾರ ಕಾನೂನು ಕ್ರಮ ಜರುಗಿಸಬಹುದು ಮತ್ತು ವ್ಯವಹರಿಸಬಹುದು. ಅವರ ವಿರುದ್ಧದ ಆರೋಪಗಳ ಬಗ್ಗೆ ನ್ಯಾಯಾಲಯಗಳು ನಿರ್ಧರಿಸುತ್ತವೆ. ಅಲ್ಲಿ ತಮ್ಮ ಮುಗ್ಧತೆಯನ್ನು ಸಾಬೀತುಪಡಿಸಲು ಆ ವ್ಯಕ್ತಿಗಳಿಗೂ ಅವಕಾಶವಿರುತ್ತದೆ. ಆದಾಗ್ಯೂ, ಕ್ಷುಲ್ಲಕ ಮತ್ತು ಆಧಾರ ರಹಿತ ಸಾಕ್ಷ್ಯಗಳ ಆಧಾರದ ಮೇಲೆ ಇಡೀ ಸಂಘಟನೆಯನ್ನು ನಿಷೇಧಿಸುವುದು ನ್ಯಾಯಸಮ್ಮತವಲ್ಲ ಮತ್ತು ಪ್ರಜಾಪ್ರಭುತ್ವಪೂರ್ಣವಲ್ಲ‌ ಎಂದು ಹೇಳಿದ್ದಾರೆ.

ಇತ್ತೀಚೆಗೆ, ಕಟ್ಟರ್‌ವಾದಿ ಹಾಗೂ ಭೀತಿಯನ್ನು ಹುಟ್ಟಿಸುವ ಹಲವಾರು ಸಂಘಟನೆಗಳು ಬಹಿರಂಗವಾಗಿ ಹಿಂಸಾಚಾರಕ್ಕೆ ಕರೆ ನೀಡುವುದನ್ನು ನಾವು ನೋಡಿದ್ದೇವೆ. ಈ ಗುಂಪುಗಳು ಈಗಲೂ ನಿರ್ಭೀತಿಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಇವುಗಳ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಆದ್ದರಿಂದ, ಈ ನಿಷೇಧವು ಆಯ್ದ, ತಾರತಮ್ಯಯುತ ಮತ್ತು ಪಕ್ಷಪಾತಿ ಧೋರಣೆಯನ್ನು ತೋರ್ಪಡಿಸುತ್ತದೆ. ಇದು ಜನರು ಮತ್ತು ಸರ್ಕಾರದ ನಡುವಿನ ವಿಶ್ವಾಸದ ಕೊರತೆಯನ್ನು ಹೆಚ್ಚಿಸಿ ದೇಶಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತಿದೆ. ಸರಕಾರವು ಆದಷ್ಟು ಬೇಗ ನಿಷೇಧವನ್ನು ಹಿಂಪಡೆಯಬೇಕೆಂದು ನಾವು ಒತ್ತಾಯಿಸುವುದಾಗಿ ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರಾಧ್ಯಕ್ಷ ಸೈಯದ್ ಸಾದಾತುಲ್ಲಾ ಹುಸೇನಿ ಹೇಳಿದ್ದಾರೆ.