ಅಕ್ಟೋಬರ್ 3: ಉಡುಪಿಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಶಾಂತಿಗಾಗಿ ನಡಿಗೆ

0
167

ಸನ್ಮಾರ್ಗ ವಾರ್ತೆ

ಉಡುಪಿ: ಹಾಜಿ ಅಬ್ದುಲ್ಲಾ ಟ್ರಸ್ಟ್ ಮತ್ತು ಗಾಂಧಿ ವಿಚಾರ ವೇದಿಕೆಯ ಉಡುಪಿ ಘಟಕದ ಜಂಟಿ ಆಶ್ರಯದಲ್ಲಿ ‘ಗಾಂಧಿ ಜಯಂತಿ’ ಪ್ರಯುಕ್ತ ಅಕ್ಟೋಬರ್ 3ರಂದು ಅಪರಾಹ್ನ 2:30ಕ್ಕೆ “ಪ್ರಸಕ್ತ ಸಮಾಜದಲ್ಲಿ ಗಾಂಧೀಜಿ ಚಿಂತನೆಗಳ ಪ್ರಸ್ತುತತೆ” ಎಂಬ ಧ್ಯೇಯವಾಕ್ಯದೊಂದಿಗೆ “ಶಾಂತಿ ನಡಿಗೆ”ಯನ್ನು ಆಯೋಜಿಸಲಾಗಿದೆ.

ಈ ಶಾಂತಿ ನಡಿಗೆಯು ಹಾಜಿ ಅಬ್ದುಲ್ಲಾರ ನಿವಾಸದಿಂದ(ಈಗಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮ್ಯೂಸಿಯಂ)- ಆರಂಭಗೊಳ್ಳಲಿದ್ದು ಅಜ್ಜರಕಾಡಿನ ಗ್ರಂಥಾಲಯದವರೆಗೆ ಇರಲಿದೆ. ಮೊದಲು ಸಿರಾಜ್ ಅವರು ಹಾಜಿ ಅಬ್ದುಲ್ಲಾರವರ ಪ್ರತಿಮೆಗೆ ಹೂವಿನ ಹಾರವನ್ನು ಅರ್ಪಿಸುವುದರ ಮೂಲಕ ಈ ಶಾಂತಿ ನಡಿಗೆಗೆ ಚಾಲನೆ ನೀಡಲಿದ್ದಾರೆ.

ಅಜ್ಜರಕಾಡು ಭುಜಂಗ ಉದ್ಯಾನದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಜನರಲ್ ಮ್ಯಾನೇಜರ್ ಡಾ.ವಾಸಪ್ಪ‌ರವರ ಉಪಸ್ಥಿತಿಯಲ್ಲಿ ಇಕ್ಬಾಲ್ ಮನ್ನಾ ಅವರು ಹಾಜಿ ಅಬ್ದುಲ್ಲಾ ಸಾಹೇಬ್‌ರವರ ಬಗ್ಗೆ ಸಂಕ್ಷೀಪ್ತ ಪರಿಚಯ ನೀಡಲಿದ್ದಾರೆ.

ಇದೇ ಸಂದರ್ಭದಲ್ಲಿ ಗಾಂಧೀಜಿಯವರ ಪ್ರತಿಮೆಗೆ ಶ್ರೀ ಮುರಳೀಧರ ಉಪಾಧ್ಯ ಹಿರಿಯಡ್ಕ ಅವರು ಹೂವಿನ ಹಾರವನ್ನು ಅರ್ಪಿಸಲಿದ್ದು, ಇಲ್ಲಿ ಶ್ರೀ ಯೋಗೀಶ್ ಶೇಟ್ ಅವರು ಗಾಂಧೀಜಿ ಮತ್ತು ಹಾಜಿ ಅಬ್ದುಲ್ಲಾ ಸಾಹೇಬ್ ಅವರ ಸಂಬಂಧದ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಲಿದ್ದಾರೆ. ನಂತರ ಗ್ರಂಥಾಲಯದಲ್ಲಿ ಸಭಾ ಕಾರ್ಯಕ್ರಮವು ನಡೆಯಲಿದೆ.

ಗಾಂಧಿ ವಿಚಾರ ವೇದಿಕೆಯ ಸಂಚಾಲಕರಾದ ಡಾ. ಪಿ. ವೆಂಕಟರಾಯ ಭಂಡಾರಿಯವರು ಸಭೆಯನ್ನು ಸ್ವಾಗತಿಸಲಿದ್ದಾರೆ. ಶ್ರೀ ಮುರಳೀಧರ ಉಪಾಧ್ಯರ ಪ್ರಾಸ್ತಾವಿಕ ನುಡಿಗಳ ಬಳಿಕ ಶ್ರೀ ಅರವಿಂದ ಚೊಕ್ಕಾಡಿಯವರು ಹಾಜಿ ಅಬ್ದುಲ್ಲಾ ಅವರು ಪ್ರತಿನಿಧಿಸಿದ ಕೋಮು ಸೌಹಾರ್ದತೆಯನ್ನು ವಿಶೇಷವಾಗಿ ಪರಿಗಣನೆಯಲ್ಲಿರಿಸಿಕೊಂಡು ಗಾಂಧೀಜಿಯವರ ಪ್ರಸ್ತುತತೆಯ ಕುರಿತಾಗಿ ಮಾತನಾಡಲಿದ್ದಾರೆ.

ಜೊತೆಗೆ ಸಿರಾಜ್ ಅಹಮದ್, ಹುಸೇನ್ ಕೋಡಿಬೇಂಗ್ರೆ, ಮನ್ನಾ ಸಾಹೇಬ್,ಯೋಗಿಶ್ ಶೇಟ್ ಇವರು ಸಭೆಯನ್ನುದ್ದೇಶಿಸಿ ಮಾತುಗಳಾಡಲಿದ್ದಾರೆ. ಕೊನೆಯಲ್ಲಿ ಹುಸೇನ್ ಕೋಡಿಬೇಂಗ್ರೆ ಧನ್ಯವಾದ ಸಮರ್ಪಿಸುವರು‌. ವೇದಿಕೆಯಲ್ಲಿ ಹಾಜಿ ಅಬ್ದುಲ್ಲಾ ವಿಶ್ವಸ್ಥರು, ಅತಿಥಿ ಗಣ್ಯರು ಹಾಗೂ ಗಾಂಧೀ ವಿಚಾರ ವೇದಿಕೆ ಉಡುಪಿ ಘಟಕದ ಅಧ್ಯಕ್ಷೆ ಶ್ರೀಮತಿ ಸೌಜನ್ಯಾ ಶೆಟ್ಟಿ, ಹಿರಿಯ ಗಾಂಧಿಯನ್ ಶ್ರೀ ರಾಜಗೋಪಾಲ ಎಮ್, ಗಾಂಧಿ ವಿಚಾರ ವೇದಿಕೆ ಸುಳ್ಯ ಘಟಕದ ಅಧ್ಯಕ್ಷ ಶ್ರೀ ಲಕ್ಷ್ಮೀಶ ಗಬ್ಲಡ್ಕ, ಉಡುಪಿ ಜಿಲ್ಲಾ ಕ. ಸಾ. ಪರಿಷತ್ತು ಅಧ್ಯಕ್ಷ ಶ್ರೀ ನೀಲಾವರ ಸುರೇಂದ್ರ ಅಡಿಗ ಮುಂತಾದವರು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ‌.