ಹೊಸದಿಲ್ಲಿ, ಆ. 8: ಜಮ್ಮು-ಕಾಶ್ಮೀರ ವಿಭಜಿಸುವ ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಬಿಎಸ್ಪಿ ಸಂಸದ ದಾನಿಶ್ ಅಲಿಯನ್ನು ಲೋಕಸಭೆಯ ನಾಯಕ ಸ್ಥಾನದಿಂದ ಮಾಯವತಿ ಕಿತ್ತುಹಾಕಿದ್ದಾರೆ. ಕಾಶ್ಮೀರದ ವಿಧಿ 370 ರದ್ದು ಮಸೂದೆಯನ್ನು ಲೋಕಸಭೆ ಪಾಸು ಮಾಡಿದ ಬಳಿಕ ಮಾಯಾವತಿ ಈ ಕ್ರಮ ಜರಗಿಸಿದ್ದಾರೆ. ಕೇಂದ್ರ ಸರಕಾರಕ್ಕೆ ಬಹುಮತವಿಲ್ಲದ ರಾಜ್ಯಸಭೆಯಲ್ಲಿ ಅಲ್ಪಸಂಖ್ಯಾತರ ವಿರೋಧಿ ಮಸೂದೆಗೂ ಮಾಯವತಿಯ ನಿಕಟವರ್ತಿಯೂ ಬಿಎಸ್ಪಿಯ ಬ್ರಾಹ್ಮಣ ನಾಯಕರೂ ಆದ ಸತೀಶ್ ಚಂದ್ರ ಬಿಜೆಪಿಗೆ ಸಹಕರಿಸುವ ನಿಲುವು ತಳೆದಿದ್ದರು. ಯುಎಪಿಎ ಮತ್ತು ಎನ್ಐಎ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಬಿಜೆಪಿಗೆ ಪಾಸು ಮಾಡಿಕೊಳ್ಳಲು ಇದು ನೆರವಾವಾಗಿತ್ತು.
ತ್ರಿವಳಿ ತಲಾಕ್ ಮಸೂದೆ ಮತ್ತು ಜಮ್ಮು ಕಾಶ್ಮೀರ ವಿಭಜನೆ ಮಸೂದೆಗಳಲ್ಲಿ ಎನ್ಡಿಎ ಘಟಕದ ನಿತೀಶ್ ಕುಮಾರ್ ರ ಜನತಾದಳ-ಯು ಸರಕಾರದ ವಿರುದ್ಧ ನಿಂತಾಗ ಬಿಎಸ್ಪಿ ಬೆಂಬಲಕ್ಕೆ ನಿಂತಿತ್ತು. ಸಂವಿಧಾನದ 370ನೇ ವಿಧಿ ರದ್ದು ಪಡಿಸಿ ಜಮ್ಮು-ಕಾಶ್ಮೀರದ ವಿಶೇಷ ಹಕ್ಕುಗಳನ್ನು ತೆಗೆದು ಹಾಕುವ ಮಸೂದೆಯನ್ನು ಬೆಂಬಲಿಸಿ ಮತಹಾಕುವುದಾಗಿ ಸತೀಶ್ ಚಂದ್ರ ಮಿಶ್ರ ಘೋಷಿಸಿದ್ದರು.
ನಂತರ ಹಲವು ಪಕ್ಷಗಳು ಮಸೂದೆಯನ್ನು ಅಲ್ಪಸಂಖ್ಯಾತರ ವಿರೋಧಿ ಎಂದು ಹೇಳಿದಾಗ ಸತೀಶ್ ಚಂದ್ರ ಮಿಶ್ರ ಭಾರತದ ಎಲ್ಲ ರಾಜ್ಯಗಳಂತೆ ಮುಸ್ಲಿಮರಿಗೆ ಕಾಶ್ಮೀರದಲ್ಲಿ ಭೂಮಿ ಖರೀದಿಸುವ ಅವಕಾಶ ಸಿಗುತ್ತದೆ ಎನ್ನುವ ಕಾರಣದಿಂದ ಬಿಎಸ್ಪಿ ಮಸೂದೆಯನ್ನು ಬೆಂಬಲಿಸಿತು ಎಂದು ಸಮರ್ಥಿಸಿಕೊಂಡರು. ಇದೇವೇಳೆ ಲೋಕಸಭೆಯಲ್ಲಿ ಮಸೂದೆಯನ್ನು ಬೆಂಬಲಿಸಿ ಮಾತಾಡಲು ದಾನಿಶ್ ಅಲಿ ನಿರಾಕರಿಸಿದ್ದರು.












