ಎನ್ ಪಿ ಆರ್ ನೊಂದಿಗೆ ಸಹಕರಿಸಬೇಡಿ; ದೆಹಲಿಯ ಸಂತ್ರಸ್ತ ಶಿಬಿರಗಳಿಗೆ ಪ್ರಧಾನಿ ಭೇಟಿ ನೀಡಲಿ- ಸೈಯದ್ ಸಆದತುಲ್ಲಾ ಹುಸೇನಿ; ದೆಹಲಿಗೆ ಸಂಬಂಧಿಸಿ 7 ಬೇಡಿಕೆಗಳ ಪಟ್ಟಿ ಬಿಡುಗಡೆ

0
1489

ಸನ್ಮಾರ್ಗ ವಾರ್ತೆ

ನವದೆಹಲಿ, 07: ದೆಹಲಿ ಹಿಂಸಾಚಾರವು ಪೂರ್ವನಿಯೋಜಿತವಾಗಿತ್ತು ಮತ್ತು ಮುಸ್ಲಿಮರ ಬದುಕು, ವ್ಯವಹಾರಗಳು ಮತ್ತು ಆಸ್ತಿಗಳನ್ನು ಮುಖ್ಯವಾಗಿ ಗುರಿ ಇರಿಸಲಾಗಿತ್ತು ಎಂದು ಜಮಾಅತೆ ಇಸ್ಲಾಮಿ ಹಿಂದ್‌ನ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಆದತುಲ್ಲಾ ಹುಸೇನಿ ಹೇಳಿದ್ದಾರೆ.

ದಾಳಿಕೋರರು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿರುವುದು ಮಾತ್ರವಲ್ಲ, ಆವರಿಗೆ ಶಸ್ತ್ರಾಸ್ತ್ರಗಳ ತರಬೇತಿ, ಮುಸ್ಲಿಮರ ಆರಾಧನಾ ಕೇಂದ್ರಗಳು, ಮುಸ್ಲಿಮರ ಚಹರೆಗಳು ಇತ್ಯಾದಿಗಳನ್ನೂ ಸ್ಪಷ್ಟವಾಗಿ ಹೇಳಿಕೊಡಲಾಗಿದೆ ಎಂದವರು ಹೇಳಿದ್ದಾರೆ.

“50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ಅಲ್ಲದೆ, ನೂರಾರು ಮನೆಗಳು, ಅಂಗಡಿಗಳನ್ನು ಲೂಟಿ ಮಾಡಿ ಸುಟ್ಟುಹಾಕಲಾಗಿದೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಪ್ರಧಾನಿ ಕಚೇರಿಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಇವೆಲ್ಲವೂ ಸಂಭವಿಸಿದೆ. ಪ್ರಧಾನಿ ಮತ್ತು ಮುಖ್ಯಮಂತ್ರಿ ಇನ್ನೂ ಸಂತ್ರಸ್ತರನ್ನು ಭೇಟಿಯಾಗದಿರುವುದು ಬಹಳ ಆಘಾತಕಾರಿ ಮತ್ತು ನಾಚಿಕೆಗೇಡಿನ ಸಂಗತಿ ಎಂದವರು ಹೇಳಿದ್ದಾರೆ.

ಹಿಂಸಾಚಾರವನ್ನು ಶಾಹೀನ್ ಬಾಗ್ ಪ್ರತಿಭಟನೆಯೊಂದಿಗೆ ಜೋಡಿಸುವುದು ತಪ್ಪು. ಪ್ರತಿಭಟನೆಗಳನ್ನು ಹಿಂಸೆಯೊಂದಿಗೆ ಜೋಡಿಸುವುದು ಬಹಳ ಅಪಾಯಕಾರಿ ಮತ್ತು ಖಂಡನೀಯ. ಭಿನ್ನಾಭಿಪ್ರಾಯ ಮತ್ತು ಶಾಂತಿಯುತ ಪ್ರತಿಭಟನೆಗಳು ಆರೋಗ್ಯಕರ ಪ್ರಜಾಪ್ರಭುತ್ವದ ಸಂಕೇತವಾಗಿದೆ ಮತ್ತು ಅದನ್ನು ಹಿಂಸೆಯೊಂದಿಗೆ ಜೋಡಿಸುವುದು ಸರಿಯಲ್ಲ. ಪ್ರತಿಭಟನೆಗಳನ್ನು ನಿಭಾಯಿಸುವುದು ಕಾನೂನು ಜಾರಿ ಸಂಸ್ಥೆಗಳ ಕೆಲಸ. ಶಾಹೀನ್ ಬಾಗ್ ಪ್ರತಿಭಟನೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಈ ವಿಷಯ ನ್ಯಾಯಾಲಯದಲ್ಲಿದೆ. ಆದ್ದರಿಂದ ಅದರ ಕಾನೂನುಬದ್ಧತೆಯ ಬಗ್ಗೆ ನಾವು ಪ್ರತಿಕ್ರಿಯಿಸಬೇಕಿಲ್ಲ ಆದರೆ, ಪ್ರತಿಭಟನಾಕಾರರೊಂದಿಗೆ ಮಾತನಾಡುವುದು ಸರ್ಕಾರದ ಕರ್ತವ್ಯ ಎಂದು ನಾವು ಭಾವಿಸುತ್ತೇವೆ. ಆದರೆ, ಈವರೆಗೆ ಯಾವುದೇ ಸರ್ಕಾರಿ ಪ್ರತಿನಿಧಿಯನ್ನು ಅಲ್ಲಿಗೆ ಕಳುಹಿಸಲಾಗಿಲ್ಲ. ಹಿಂಸಾಚಾರದ ಮೇಲೆ ಗಮನ ಕೊಡುವಂತೆ ಮತ್ತು ಹಿಂಸಾಚಾರವನ್ನು ಪ್ರತಿಭಟನೆಯ ಜೊತೆ ಜೋಡಿಸದಂತೆ ನಾವು ಮಾಧ್ಯಮವನ್ನು ವಿನಂತಿಸುತ್ತೇವೆ ಎಂದವರು ಹೇಳಿದ್ದಾರೆ.

ಹಿಂಸಾಚಾರದ ಹಿಂದೆ ಯಾರಿದ್ದಾರೆಂಬುದನ್ನು ಕಂಡುಹಿಡಿಯುವುದು ಪೊಲೀಸರ ಕೆಲಸ. ಆದರೆ ದ್ವೇಷ ಮತ್ತು ಸಮಾಜವನ್ನು ಧ್ರುವೀಕರಿಸುವ ಸಿದ್ಧಾಂತವನ್ನು ಯಾರು ಹಬ್ಬಿಸುತ್ತಿದ್ದಾರೆಂಬುದು ಎಲ್ಲರಿಗೂ ತಿಳಿದಿದೆ. ಕೆಲವು ರಾಜಕಾರಣಿಗಳ ಪ್ರಚೋದನಕಾರಿ ಭಾಷಣಗಳು ಹಿಂಸಾಚಾರಕ್ಕೆ ನಾಂದಿ ಹಾಡಿದವು. ಆದರೆ ವಿವಿಧ ವೀಡಿಯೊಗಳು ಮತ್ತು ವರದಿಗಳಲ್ಲಿ ಕಂಡುಬರುವಂತೆ ಪೊಲೀಸರ ಪಾತ್ರವು ತುಂಬಾ ಗೊಂದಲವನ್ನುಂಟುಮಾಡಿದೆ ಎಂದವರು ಹೇಳಿದ್ದಾರೆ.

ಹಾಗೆಯೇ, ಎನ್ ಪಿ ಆರ್ ನ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಅವರು, ಇದು ಭಾರತೀಯರನ್ನು ವಿಭಜಿಸುವ ಕ್ರಮವಾಗಿದೆ, ಆದ್ದರಿಂದ ಎನ್‌ಪಿಆರ್ ನೊಂದಿಗೆ ಸಹಕರಿಸಬೇಡಿ ಎಂದು ದೇಶದ ಜನರೊಂದಿಗೆ ಕೇಳಿಕೊಳ್ಳುತ್ತೇವೆ ಎಂದೂ ಹೇಳಿದ್ದಾರೆ. ಇದೇವೇಳೆ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅವರು ಕೆಲವು ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ-

1. ಹಿಂಸಾಚಾರದ ಬಗ್ಗೆ ದೆಹಲಿ ಅಲ್ಪಸಂಖ್ಯಾತ ಆಯೋಗದ ಅಧೀನದಲ್ಲಿ ಸಮಗ್ರ ತನಿಖೆ ನಡೆಯಬೇಕು. ಈ ತನಿಖೆಯು ಒಂದು ತಿಂಗಳೊಳಗೆ ಪೂರ್ಣಗೊಳ್ಳಬೇಕಲ್ಲದೆ, ಅದರ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು ಮತ್ತು ಅದರ ಶಿಫಾರಸುಗಳನ್ನು ಕಾರ್ಯಗತಗೊಳಿಸಬೇಕು.

2. ಹಿಂಸಾಚಾರವನ್ನು ಪ್ರಚೋದಿಸಿದ ರಾಜಕಾರಣಿಗಳನ್ನು ತಕ್ಷಣ ಬಂಧಿಸಬೇಕು.

3. ಸಂತ್ರಸ್ತರ ಶಿಬಿರಗಳಿಗೆ ಪ್ರಧಾನಿ ಭೇಟಿ ನೀಡಬೇಕು ಮತ್ತು ಅವರೊಂದಿಗೆ ಸಹಾನುಭೂತಿಯ ಸಂಕೇತವಾಗಿ ಆಹಾರ ಸೇವಿಸಬೇಕು.

4. ಪರಿಹಾರ ಶಿಬಿರಗಳ ನಿರ್ವಹಣೆಗಾಗಿ ಪ್ರಧಾನ ಮಂತ್ರಿಯವರು 100 ಕೋಟಿ ರೂ.ಗಳನ್ನು ತಕ್ಷಣ ಬಿಡುಗಡೆಗೊಳಿಸಬೇಕು ಮತ್ತು ಮನೆಗಳು, ಬೆಲೆಬಾಳುವ ವಸ್ತುಗಳು, ವ್ಯಾಪಾರ ಅಥವಾ ಜೀವನೋಪಾಯದ ಮೂಲವನ್ನು ಕಳೆದುಕೊಂಡವರ ಪುನರ್ವಸತಿಗಾಗಿ 1000 ಕೋಟಿ ರೂಪಾಯಿಯನ್ನು ಮಂಜೂರು ಮಾಡಬೇಕು.

5. ಮುಗ್ಧ ನಾಗರಿಕರು, ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ತಮ್ಮದೇ ಅಧಿಕಾರಿಗಳ ವಿರುದ್ಧ ದೆಹಲಿ ಪೊಲೀಸರು ಕ್ರಮ ಕೈಗೊಳ್ಳಬೇಕು.

6. ಈ ಹಿಂಸಾಚಾರದ ಹೆಸರಲ್ಲಿ ಬಂಧನಕ್ಕೊಳಗಾದ ಮತ್ತು ಬಂಧಿಸಲ್ಪಟ್ಟ ಎಲ್ಲರ ಸಂಪೂರ್ಣ ಪಟ್ಟಿಯನ್ನು ದೆಹಲಿ ಪೊಲೀಸರು ಬಿಡುಗಡೆಗೊಳಿಸಬೇಕು.

7. ಜಾತಿ ಮತ್ತು ಧರ್ಮಗಳ ಹೊರತಾಗಿ ಮುಗ್ಧ ನಾಗರಿಕರನ್ನು ಕೊಲೆಗೈದ , ಹಲ್ಲೆ, ಹಿಂಸೆಯೆಸಗಿದ ಆರೋಪಿಗಳನ್ನು ಬಂಧಿಸಲು ದೆಹಲಿ ಪೊಲೀಸರಿಗೆ ನೂರು ದಿನಗಳ ಕಾಲಾವಕಾಶ ನೀಡಬೇಕು ಎಂಬ ಬೇಡಿಕೆಗಳನ್ನು ಅವರು ಸರಕಾರದ ಮುಂದಿಟ್ಟಿದ್ದಾರೆ.