ಸನ್ಮಾರ್ಗ ವಾರ್ತೆ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ವಿಟ್ಲ-ಅಡ್ಯನಡ್ಕ ಸಮೀಪದ ಖಾಸಗಿ ಸಭಾಂಗಣದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಶೈಕ್ಷಣಿಕ ತರಬೇತಿ ಕಾರ್ಯಕ್ರಮವನ್ನು ಹಿಂದೂ ಮುಸ್ಲಿಮ್ ಆಗಿ ವಿಂಗಡಿಸಿ ಸಮಾರಂಭದಲ್ಲಿ ದಾಂಧಲೆ ನಡೆಸಿರುವುದನ್ನು ಜಮಾಅತೆ ಇಸ್ಲಾಮೀ ಹಿಂದ್ ದಕ್ಷಿಣ ಜಿಲ್ಲಾ ಸಂಚಾಲಕ ಅಮೀನ್ ಅಹ್ಸನ್ ಖಂಡಿಸಿದ್ದಾರೆ.
ನುಸ್ರತುಲ್ ಇಸ್ಲಾಮ್ ಎಂಬ ಯುವಕರ ಸಂಘಟನೆ ಪರೀಕ್ಷೆ ಹೇಗೆ ಎದುರಿಸಬಹುದು ಎಂಬಂತಹ ತರಬೇತಿಯನ್ನು ಕಾರ್ಯಾಗಾರ ಹಮ್ಮಿಕೊಂಡಿತ್ತು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಭರವಸೆಯನ್ನು ತುಂಬುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಈ ಶೈಕ್ಷಣಿಕ ತರಬೇತಿಯಲ್ಲಿ ಭಾಗವಹಿಸಿದ್ದರು. ಸಂಘಟಕರು ವಿದ್ಯಾರ್ಥಿಗಳನ್ನು ನೇರ ಕೈಹಿಡಿದು ಕರೆತಂದುದಲ್ಲ. ಪರಿಸರದ ಸುಮಾರು ಮೂರು ಶಾಲೆಗಳಿಗೆ ಇಂತಹದ್ದೊಂದು ತರಬೇತಿ ಕಾರ್ಯಾಗಾರವಿದೆ ಅದಕ್ಕೆ ನಿಮ್ಮ ಮಕ್ಕಳನ್ನು ಕಳುಹಿಸಿ ಅಂತ ಸಂಘಟಕರು ಶಾಲಾ ಶಿಕ್ಷಕರೊಂದಿಗೆ ಕೇಳಿ ಕೊಂಡಿದ್ದರು. ಹೀಗೆ ಮಕ್ಕಳು ಶೈಕ್ಷಣಿಕ ತರಬೇತಿ ಪಡೆಯುವ ಉದ್ದೇಶದಿಂದ ಬಂದಿದ್ದರು. ಹಾಗಿರುವಾಗ ಏಕಾಏಕಿ ಸಭಾ ಭವನಕ್ಕೆ ನುಗ್ಗಿ ನಿಮಗೆ ಹಿಂದೂ ಮಕ್ಕಳನ್ನು ಸೇರಿಸುವ ಹಕ್ಕಿಲ್ಲ ಎಂದು ಸಂಘಪರಿವಾರದ ಕಾರ್ಯಕರ್ತರು ಏಕಾಏಕಿ ಗೂಂಡಾಗಿರಿ ಎಸಗಿರುವುದು ಮಕ್ಕಳನ್ನು ಸಾಕಿ ಸಲಹುವ ಪೋಷಕರಂತೆ ವರ್ತಿಸಿರುವುದು ಖಂಡನೀಯ ಎಂದರು.
ಮಕ್ಕಳಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತ ಎಂಬ ಭೇದಕ್ಕೆ ಸಂವಿಧಾನ ಅನುಮತಿಸುವುದಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಮಕ್ಕಳೆಲ್ಲರೂ ಕೇವಲ ವಿದ್ಯಾರ್ಥಿಗಳು. ದಾಂಧಲೆ ನಡೆಸುವಾಗ ಮಕ್ಕಳು ಅಸಹಾಯಕರಂತೆ ವರ್ತಿಸಿರುವುದು ವಿದ್ಯಾರ್ಥಿಗಳ ಮುಗ್ಧತೆಗೆ ಸಾಕ್ಷಿ. ಇಂತಹ ಭಯ ಹುಟ್ಟಿಸುವುದರಿಂದ ಸಿಗುವ ಲಾಭವಾದರೂ ಏನು? ಸಭಾಭವನಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿ ಹಿಂದೂ ಮಕ್ಕಳನ್ನು ಸೇರಿಸಲು ನಿಮಗೆ ಅರ್ಹತೆ ಇಲ್ಲ ಎಂದು ಹೇಳಿ ಅರ್ಹತೆಯ ಸರ್ಟಿಫಿಕೇಟ್ ಕೊಟ್ಟ ದಾಂಧಲೆಕೋರರ ವಿರುದ್ಧ ಕ್ರಮ ಜರಗಿಸಬೇಕು ಎಂದು ಅವರು ಆಗ್ರಹಿಸಿದರು.
ಸಮಾಜದಲ್ಲಿ ಒಗ್ಗಟ್ಟು ನೆಲೆಸುವಂತೆ ಮತ್ತು ಅದು ಉಳಿಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಪೊಲೀಸ್ ಇಲಾಖೆಗಿದೆ. ಸಮಾಜದಲ್ಲಿ ಅಹಿತಕಾರಿ ಘಟನೆ ನಡೆಯದಂತೆ ಅವರು ಕಟ್ಟು ನಿಟ್ಟಿನ ಬಂದೋಬಸ್ತು ಮಾಡಬೇಕು. ಸಭಾಭವನಕ್ಕೆ ನುಗ್ಗಿ ಕಾರ್ಯಕ್ರಮವನ್ನು ಕೆಡಿಸಿದ ದಾಂಧಲೆಕೋರರನ್ನು ಕೂಡಲೇ ಬಂಧಿಸಬೇಕು. ಅವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಸಂಘಟಕರ ವಿರುದ್ಧ ಕೇಸು ದಾಖಲಿಸಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ಸೂಚಿಸುತ್ತದೆ. ಇಂತಹ ಘಟನೆ ಜಿಲ್ಲೆಯಲ್ಲಿ ಪದೇ ಪದೇ ಮರುಕಳಿಸುವುದಕ್ಕೆ ಸರಕಾರವೇ ನೇರ ಹೊಣೆ. ಸಂವಿಧಾನ ಆಶಯಗಳಿಗೆ ಬದ್ಧವಾಗಿರಬೇಕಾದುದು ಸರಕಾರದ ಜವಾಬ್ದಾರಿ ಎಂದು ಕರೆಯಿತ್ತರು.












