ಸನ್ಮಾರ್ಗ ವಾರ್ತೆ-
ನವದೆಹಲಿ, ಜ. 04: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ತಕ್ಷಣದಿಂದ ವಜಾಗೊಳಿಸಬೇಕು ಮತ್ತು ಯು ಪಿ ಪೊಲೀಸರ ಮೇಲಿನ ಆರೋಪಗಳ ಬಗ್ಗೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಜಮಾಅತೆ ಇಸ್ಲಾಮಿ ಹಿಂದ್ ಒತ್ತಾಯಿಸಿದೆ. ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಆದತುಲ್ಲಾ ಹುಸೇನಿ ಮಾಧ್ಯಮದೊಂದಿಗೆ ಮಾತಾಡಿ, “ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ವಜಾಗೊಳಿಸುವ ನಮ್ಮ ಬೇಡಿಕೆಯನ್ನು ಪುನರುಚ್ಚರಿಸುತ್ತೇವೆ, ಅವರು ತಮ್ಮ ಸಾಂವಿಧಾನಿಕ ಕಟ್ಟುಪಾಡುಗಳನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಮತ್ತು ಉತ್ತರ ಪ್ರದೇಶದಲ್ಲಿ ಭಯೋತ್ಪಾದನೆಯ ಆಳ್ವಿಕೆಯನ್ನು ನಡೆಸುತ್ತಿದ್ದಾರೆ. ಸಿಎಎ ವಿರೋಧಿ ಪ್ರತಿಭಟನೆಗಳನ್ನು ನಿಯಂತ್ರಿಸುವ ಹೆಸರಿನಲ್ಲಿ ಉತ್ತರ ಪ್ರದೇಶದ ಪೊಲೀಸರ ಕ್ರಮವನ್ನು ನಾವು ಖಂಡಿಸುತ್ತೇವೆ. ಯು ಪಿ ಮುಖ್ಯಮಂತ್ರಿಯವರು ರಾಜ್ಯದ ನಾಗರಿಕರ ವಿರುದ್ಧ “ಸೇಡು ತೀರಿಸಿಕೊಳ್ಳುವ” ಬಗ್ಗೆ ಮಾತನಾಡಿರುವುದು ಆಘಾತವನ್ನು ತಂದಿದೆ ಎಂದವರು ಹೇಳಿದ್ದಾರೆ.
ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ದೇಶವಾದ ಭಾರತವನ್ನು ಪೊಲೀಸ್ ರಾಜ್ಯವನ್ನಾಗಿ ಮಾಡಲು ನಾವು ಬಿಡುವುದಿಲ್ಲ. ಬಿಜೆಪಿ ಆಡಳಿತವಿಲ್ಲದ ರಾಜ್ಯಗಳಲ್ಲಿ ಸಿಎಎ ವಿರೋಧಿ ಪ್ರತಿಭಟನೆಯು ಶಾಂತ ರೀತಿಯಲ್ಲಿ ನಡೆದಿರುವಾಗ ಉತ್ತರ ಪ್ರದೇಶವೇಕೆ ಹಿಂಸೆಗೆ ತುತ್ತಾಗಿದೆ? ಉತ್ತರ ಪ್ರದೇಶದಲ್ಲಿ ಪೊಲೀಸರು ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ನಾವು ಭಾವಿಸುತ್ತೇವೆ. ಆದ್ದರಿಂದ, ಉನ್ನತ ಮಟ್ಟದ ನ್ಯಾಯಾಂಗ ತನಿಖೆಯ ನಂತರವೇ ಯಾರು ತಪ್ಪಿತಸ್ಥರೆಂದು ನಾವು ನಿರ್ಣಯಿಸಬಹುದು ಎಂದವರು ಹೇಳಿದ್ದಾರೆ.
ರಾಷ್ಟ್ರೀಯ ಕಾರ್ಯದರ್ಶಿ ಮಲಿಕ್ ಮೊಹತಸಿಮ್ ಖಾನ್ ಮಾತಾಡುತ್ತಾ, “ಪೊಲೀಸರು ಶಾಂತಿಯುತ ಪ್ರತಿಭಟನೆಗಳನ್ನು ನಿರ್ದಾಕ್ಷಿಣ್ಯವಾಗಿ ದಮನಿಸುತ್ತಾ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸೊಂಟದಿಂದ ಮೇಲ್ಭಾಗದಲ್ಲಿ ಗಾಯಗಳಾಗಿವೆ. ಪೊಲೀಸರು ವಿವೇಚನೆಯಿಲ್ಲದೆ ಗುಂಡು ಹಾರಿಸಿದ್ದಾರೆ ಎಂಬುದನ್ನುಇದು ತಿಳಿಸುತ್ತದೆ. ಪೊಲೀಸರು ಮನೆಗಳಿಗೆ ಅಕ್ರಮವಾಗಿ ಪ್ರವೇಶಿಸಿದರು, ನಾಗರಿಕರ ಆಸ್ತಿಪಾಸ್ತಿಗಳನ್ನು ನಾಶಪಡಿಸಿದರು. ಅಲ್ಲದೆ, ಬಂಧನದಲ್ಲಿದ್ದ ಯುವಕ ಮತ್ತು ಹಿರಿಯರನ್ನು ಹಿಂಸಿಸಿದರು. ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದುಹಾಕಿ ನಂತರ ಮನೆಗಳು, ಕಾರುಗಳು ಮತ್ತು ಇತರ ವಾಹನಗಳನ್ನು ಧ್ವಂಸ ಮಾಡಲು ಮುಂದಾಗಿರುವುದಕ್ಕೆ ವಿಡಿಯೋ ಸಾಕ್ಷ್ಯಗಳಿವೆ. ಈ ಎಲ್ಲಾ ದೌರ್ಜನ್ಯಗಳು ಮುಸ್ಲಿಂ ಸಮುದಾಯವನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಿದಂತೆ ತೋರುತ್ತದೆ ಎಂದವರು ಹೇಳಿದ್ದಾರೆ.
ಜಮಾಅತೆ ಇಸ್ಲಾಮಿ ಹಿಂದ್ ಉಪಾಧ್ಯಕ್ಷ ಮುಹಮ್ಮದ್ ಸಲೀಮ್ ಎಂಜಿನಿಯರ್ ಅವರು, : “ಸಿಎಎ- ಎನ್ಆರ್ ಸಿ ಮತ್ತು ಎನ್ಪಿಆರ್ ವಿರುದ್ಧ ದೇಶಾದ್ಯಂತದ ಪ್ರತಿಭಟನೆಗಳಿಗೆ ಭಾರತ ಸರ್ಕಾರದ ಪ್ರತಿಕ್ರಿಯೆ ತೀರಾ ನಿರಾಶಾಜನಕವಾಗಿತ್ತು ಎಂದು ಹೇಳಿದರು. ಈ ಬೃಹತ್ ಪ್ರತಿಭಟನೆಗಳನ್ನು ಅಂತರರಾಷ್ಟ್ರೀಯ ಮಾಧ್ಯಮಗಳು ಗಮನಿಸಿವೆ. ಇಂತಹ ಭಾರಿ ಆಕ್ರೋಶದ ಹೊರತಾಗಿಯೂ, ಸರ್ಕಾರದ ತಣ್ಣನೆಯ ಪ್ರತಿಕ್ರಿಯೆ ಮತ್ತು ಬಿಜೆಪಿ ಆಡಳಿತದ ರಾಜ್ಯಗಳಲ್ಲಿನ ಪ್ರತಿಭಟನಾಕಾರರ ಮೇಲಿನ ದೌರ್ಜನ್ಯವು ಸರಕಾರಗಳು ಎಡವಿರುವುದನ್ನು ಸೂಚಿಸುತ್ತದೆ. ಎನ್ಆರ್ಸಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮತ್ತು ಗೃಹ ಸಚಿವರು ಪರಸ್ಪರ ವಿರೋಧಾಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನಾಕಾರರೊಂದಿಗೆ ಮಾತನಾಡುವ ಬದಲು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವ ಬದಲು, ಈ ವರ್ಷ ಏಪ್ರಿಲ್ನಿಂದ ಎನ್ಪಿಆರ್ ಅನುಷ್ಠಾನಿಸುವುದಾಗಿ ಕೇಂದ್ರ ಸರಕಾರ ಘೋಷಿಸಿದೆ. ಜನರು ಎನ್ಪಿಆರ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ ಮತ್ತು ಇದು ಎನ್ಆರ್ಸಿಗೆ ರಹಸ್ಯವಾಗಿ ಸಹಾಯ ಮಾಡುತ್ತದೆ ಎಂದು ಭಾವಿಸಿದ್ದಾರೆ. ಆದ್ದರಿಂದ ಸಿಎಎ-ಎನ್ಆರ್ಸಿಯನ್ನು ಕೇಂದ್ರ ಸರ್ಕಾರವು ಹಿಂತೆಗೆದುಕೊಳ್ಳುವವರೆಗೆ ಎನ್ಪಿಆರ್ ಅನ್ನು ರಾಜ್ಯ ಸರ್ಕಾರಗಳು ಜಾರಿಗೊಳಿಸಬಾರದು ಎಂದು ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಸೈಯದ್ ಸದತುಲ್ಲಾ ಹುಸೇನಿ ಅವರು ಬಿಜೆಪಿರಹಿತ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಅವರು ತಿಳಿಸಿದರು.












