ಹರ್ಯಾಣದಲ್ಲಿ ಪವಾಡ: ಬಿಜೆಪಿಗೆ ದುಷ್ಯಂತ್ ಚೌತಾಲಾ ಬೆಂಬಲ ಸಾರಿದ ಬೆನ್ನಿಗೇ ತಿಹಾರ್ ಜೈಲಲ್ಲಿರುವ ಅವರ ತಂದೆಗೆ 2 ವಾರಗಳ ಬಿಡುಗಡೆ ಭಾಗ್ಯ

0
1640

ಸನ್ಮಾರ್ಗ ವಾರ್ತೆ-

ಚಂಡೀಗಢ; ಅ.26- ದುಶ್ಯಂತ್ ಚೌತಲಾ ನೇತೃತ್ವದ ಜನನಾಯಕ್ ಜನತಾ ಪಾರ್ಟಿಯು (ಜೆಜೆಪಿ) ಹರ್ಯಾಣದಲ್ಲಿ ಬಿಜೆಪಿಗೆ ಬೆಂಬಲ ಸಾರಿದ ಬಳಿಕ ತಿಹಾರ್ ಜೈಲಲ್ಲಿರುವ ಅವರ ತಂದೆ ಅಜಯ್ ಚೌತಾಲಾ ಅವರಿಗೆ ಎರಡು ವಾರಗಳ ಕಾಲ ಪೆರೋಲ್( ಬಿಡುಗಡೆ) ಸಿಕ್ಕಿದೆ. ಅದರಂತೆ ಶನಿವಾರ ಸಂಜೆ ಅಥವಾ ಭಾನುವಾರ ಬೆಳಿಗ್ಗೆ ಅವರು ಜೈಲಿನಿಂದ ಹೊರಬರಲಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

12 ವರ್ಷಗಳ ಹಿಂದೆ 3,206 ಕಿರಿಯ ಶಿಕ್ಷಕರನ್ನು ಅಕ್ರಮವಾಗಿ ನೇಮಕ ಮಾಡಿದ್ದಕ್ಕಾಗಿ ಅಜಯ್ ಮತ್ತು ಅವರ ತಂದೆ ಓಂ ಪ್ರಕಾಶ್ ಚೌತಲಾ ಅವರನ್ನು ದೆಹಲಿ ನ್ಯಾಯಾಲಯ 2013 ರ ಜನವರಿ 16 ರಂದು ಶಿಕ್ಷೆಗೊಳಪಡಿಸಿತ್ತು. ಆ ಸಂದರ್ಭದಲ್ಲಿ ಅವರು ಅಧಿಕಾರದಲ್ಲಿದ್ದರು.

ಮನೋಹರ್ ಲಾಲ್ ಖಟ್ಟರ್ ಅವರು ಶನಿವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಾ, ತಾನು ಮುಖ್ಯಮಂತ್ರಿಯಾಗಿ ಮರಳಿ ಬರುವೆ ಮತ್ತು ಜೆಜೆಪಿ ಮುಖ್ಯಸ್ಥ ದುಶ್ಯಂತ್ ಚೌತಾಲಾ ಅವರು ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಘೋಷಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಈ ಮೊದಲು 90 ಸದಸ್ಯರ ಹರಿಯಾಣ ವಿಧಾನಸಭೆಯಲ್ಲಿ 10 ಸ್ಥಾನಗಳನ್ನು ಗೆದ್ದ ದುಶ್ಯಂತ್ ಅವರ ಜೆಜೆಪಿಯೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ದುಶ್ಯಂತ್ ಚೌತಲಾ ನಡುವಿನ ಸಭೆಯಲ್ಲಿ ಈ ಒಪ್ಪಂದಕ್ಕೆ ಮೊಹರು ಹಾಕಲಾಗಿತ್ತು.