ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಜಮ್ಮು ಕಾಶ್ಮೀರ, ಉತ್ತರಪ್ರದೇಶ, ಮಧ್ಯಪ್ರದೇಶ, ತ್ರಿಪುರಗಳಲ್ಲಿ ಕಳೆದ ವರ್ಷ ಮಾಧ್ಯಮದವರ ಮೇಲೆ ಮತ್ತು ಮಾಧ್ಯಮ ಸಂಸ್ಥೆಗಳ ಮೇಲೆ ದಾಳಿ ಹೆಚ್ಚಳವಾಗಿದೆಯೆಂದು ರೈಟ್ಸ್ ಆಂಡ್ ರಿಸ್ಕ್ ಅನಾಲಿಸಿಸ್ ಗ್ರೂಪ್‍ನ ವರದಿ ಬಹಿರಂಗಪಡಿಸಿದೆ. ಇದು ದಿಲ್ಲಿ ಮೂಲದ ಸಂಘಟನೆಯಾಗಿದೆ.
ವರದಿಯ ಪ್ರಕಾರ ದೇಶದುದ್ದಕ್ಕೂ ಕಳೆದ ವರ್ಷ 6 ಪತ್ರಕರ್ತರ ಹತ್ಯೆ ನಡೆದಿದೆ. 108 ಮಂದಿಯ ಮೇಲೆ ದಾಳಿ ನಡೆದಿದೆ. 13 ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಕರ್ತರ ಮೇಲೆ ಬೆದರಿಕೆ ಹಾಕಲಾಗಿದೆ.
ರೈಟ್ಸ್ ಆಂಡ್ ರಿಸ್ಕ್ ಅನಾಲಿಸಿಸ್ ಗ್ರೂಪ್ ಇಂಡಿಯಾ ಪ್ರೆಸ್ ಪ್ರೀಡಂ ವರದಿಯ ಪ್ರಕಾರ ಪತ್ರಕರ್ತರ ಮೇಲಿನ ಆಕ್ರಮಣಗಳು ಹೆಚ್ಚಾಗಿರುವ ರಾಜ್ಯಗಳ ಲೆಕ್ಕ ಈ ಕೆಳಗಿನಂತಿದೆ. ಜಮ್ಮು ಕಾಶ್ಮೀರ 25, ಉತ್ತರಪ್ರದೇಶ 23, ಮಧ್ಯಪ್ರದೇಶ 16, ತ್ರಿಪುರ 15, ದಿಲ್ಲಿಯಲ್ಲಿ 8, ಬಿಹಾರದಲ್ಲಿ 6, ಅಸ್ಸಾಮ್‍ನಲ್ಲಿ 5, ಹರಿಯಾಣ-ಮಹಾರಾಷ್ಟ್ರದಲ್ಲಿ ತಲಾ 4, ಗೋವಾ-ಮಣಿಪ್ಪುರ ತಲಾ 3, ಕರ್ನಾಟಕ, ತಮಿಳ್ನಾಡು, ಪ.ಬಂಗಾಳಗಳಲ್ಲಿ ತಲಾ 2, ಆಂಧ್ರ ಪ್ರದೇಶ, ಛತ್ತೀಸ್ಡ, ಕೇರಳದಲ್ಲಿ ತಲಾ 1 ದಾಳಿ ನಡೆದಿದೆ ಎಂದು ವರದಿ ತಿಳಿಸಿದೆ.
ದೇಶಲ್ಲಿ ಕಳೆದ ವರ್ಷ ಎಂಟು ಮಹಿಳಾ ಪತ್ರಕರ್ತರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ. ಜಮ್ಮು-ಕಾಶ್ಮೀರ, ತ್ರಿಪುರ ಸಹಿತ ರಾಜ್ಯಗಳಲ್ಲಿ ಪತ್ರಕರ್ತರ ಮೇಲೆ ವ್ಯಾಪಕ ದಾಳಿ ನಡೆದಿದ್ದು ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಪತನಗೊಂಡುದರ ಸೂಚನೆಯಾಗಿದೆ ಎಂದು ವರದಿಯ ತಯಾರಿಸಿದ ಸಂಸ್ಥೆಯ ನಿರ್ದೇಶಕ ಸುಹಾಸ್ ಚಕ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












