ಕಾಂಗ್ರೆಸ್ ಪ್ರಭಾವಿ ನಾಯಕ ಜ್ಯೋತಿರಾದಿತ್ಯ ಸಿಂಧಿಯ ಬಿಜೆಪಿಗೆ: ಅವರಿಗೆ ಹಂದಿಜ್ವರ, ಮಾತಿಗೆ ಸಿಗುತ್ತಿಲ್ಲ ಎಂದಿದ್ದ ದಿಗ್ವಿಜಯ ಸಿಂಗ್

0
797

ಸನ್ಮಾರ್ಗ ವಾರ್ತೆ

ಭೋಪಾಲ, ಮಾ. 10: ಮಧ್ಯಪ್ರದೇಶದ ಕಮಲನಾಥ್ ಸರಕಾರವನ್ನು ಯಾಮಾರಿಸಿ ಹದಿನೇಳು ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದ ಬೆನ್ನಿಗೆ ಪಾರ್ಟಿ ಅಧ್ಯಕ್ಷ ಜ್ಯೋತಿರಾದಿತ್ಯ ಸಿಂಧಿಯ ಅವರು ಬಿಜೆಪಿ ಪಾಳಯದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ ಮತ್ತು ಗೃಹ ಸಚಿವ ಅಮಿತ್ ಷಾ ಜೊತೆಗೂಡಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಸಂಜೆ ಅಧಿಕೃತವಾಗಿ ಬಿಜೆಪಿ ಸೇರುವ ಸೂಚನೆ ನೀಡಿದ್ದಾರೆ. ಈ ನಡುವೆ ಸಿಂಧಿಯಾ ಅವರನ್ನು ಕಾಂಗ್ರೆಸ್ ಪಕ್ಷ ಉಚ್ಛಾಟಿಸಿದೆ. ಕಳೆದ ದಿವಸ ಸಿಂಧಿಯ ಬೆಂಬಲಿಗರಾದ 17 ಶಾಸಕರು ವಿಶೇಷ ವಿಮಾನದಲ್ಲಿ ಬೆಂಗಳೂರಿನ ಅಜ್ಞಾತ ಸ್ಥಳಕ್ಕೆ ಬಂದಿದ್ದರು. ನಂತರ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಸಹಿತ ಸಿಂಧಿಯರನ್ನು ಭೇಟಿಯಾಗಲು ಯತ್ನಿಸಿದರೂ ಪ್ರಯೋಜನ ಆಗಿರಲಿಲ್ಲ. ಸಿಂಧ್ಯರಿಗೆ ಹಂದಿ ಜ್ವರ ಇದೆ. ಆದ್ದರಿಂದ ಅವರೊಂದಿಗೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಫೋನ್ ಮಾಡಿದಾಗ ಜ್ವರದಿಂದ ಮಾತಾಡಲು ಆಗಿಲ್ಲ ಎಂದು ತಿಳಿಸಿದ್ದಾರೆ ಎಂದು ದಿಗ್ವಿಜಯ ಸಿಂಗ್ ಹೇಳಿದ್ದರು.

ಮಧ್ಯಪ್ರದೇಶದಲ್ಲಿ ಜನಹಿತದ ವಿರುದ್ಧ ನಿಂತು ಮತದಾರರನ್ನು ಅಪಮಾನಿಸಿದವರಿಗೆ ಜನರು ಉತ್ತರ ನೀಡುವರು. ನೈತಿಕ ಪ್ರಜ್ಞೆ ಇರುವ ಕಾಂಗ್ರೆಸ್ಸಿಗರು ಯಾವ ಪರಿಸ್ಥಿತಿಯಲ್ಲಿಯೂ ಪಾರ್ಟಿಯ ಜೊತೆಗಿರುತ್ತಾರೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ರಾಜ್ಯಸಭಾ ಚುನಾವಣೆಯ ಕುರಿತು ಮುಖ್ಯಮಂತ್ರಿ ಕಮಲನಾಥ್, ಜ್ಯೋತಿರಾದಿತ್ಯ ಸಿಂಧಿಯರ ನಡುವಿನ ಭಿನ್ನಾಭಿಪ್ರಾಯ ಈ ಪರಿಸ್ಥಿತಿಗೆ ಕಾರಣವೆಂದು ಹೇಳಲಾಗುತ್ತಿದೆ.