ಕಲ್ಲಡ್ಕ: ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಇಂಟಿಗ್ರೇಟೆಡ್ ಸಿಇಟಿ –ನೀಟ್ ತರಬೇತಿಗೆ ಚಾಲನೆ

0
501

ಸನ್ಮಾರ್ಗ ವಾರ್ತೆ

ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನಲ್ಲಿ 2026-27 ನೇ ಸಾಲಿನ ಇಂಟಿಗ್ರೇಟೆಡ್ ಸಿಇಟಿ ಮತ್ತು ನೀಟ್ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನೆರವೇರಿತು .ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿನಿಯರಿಗೆ ಸಿಇಟಿ ಮತ್ತು ನೀಟ್ ಪರೀಕ್ಷೆಗಳ ಸಿದ್ಧತೆಗೆ ಪೂರಕವಾಗುವ ಅಧ್ಯಯನ ಪುಸ್ತಕಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಸತ್ಯ ಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕಿ ಕೃಪಾ ಪಿ.ಜೆ. ಮಾತನಾಡಿ, ಪಿಯುಸಿ ಶಿಕ್ಷಣದ ನಂತರ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಿಗೆ ಲಭ್ಯವಿರುವ ವಿವಿಧ ಉನ್ನತ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು. ಸಿಇಟಿ ಮತ್ತು ನೀಟ್ ಪರೀಕ್ಷೆಗಳ ಸ್ವರೂಪ, ಪರೀಕ್ಷಾ ವಿಧಾನ, ಸಿದ್ಧತಾ ಕ್ರಮಗಳ ಕುರಿತು ವಿವರಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ನಿರಂತರ ಅಭ್ಯಾಸ, ಕಠಿಣ ಪರಿಶ್ರಮ ಮತ್ತು ಸೂಕ್ತ ಮಾರ್ಗದರ್ಶನದೊಂದಿಗೆ ತರಬೇತಿ ಪಡೆಯುವುದು ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಯಾಸಿನ್ ಬೇಗ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿನಿಯಲ್ಲಿಯೂ ವಿಭಿನ್ನ ಸಾಮರ್ಥ್ಯವಿದ್ದು, ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು ನಿರಂತರ ಪ್ರಯತ್ನ ನಡೆಸಿದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದರು. ನೀಟ್ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯದಿದ್ದರೂ ನಿರಾಶರಾಗದೆ, ಶಿಕ್ಷಣ ಕ್ಷೇತ್ರ ಸೇರಿದಂತೆ ವಿವಿಧ ವೃತ್ತಿ ಕ್ಷೇತ್ರಗಳಲ್ಲಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಕಠಿಣ ಪರಿಶ್ರಮ ಹಾಗೂ ನಿರಂತರ ಪ್ರಯತ್ನದ ಮೂಲಕ ಉತ್ತಮ ರ‍್ಯಾಂಕ್ ಗಳಿಸಿದರೆ ಸರ್ಕಾರಿ ಕೋಟಾದಡಿ ವೈದ್ಯಕೀಯ ಶಿಕ್ಷಣ ಪಡೆಯುವ ಅವಕಾಶವಿದೆ. ವಿದ್ಯಾರ್ಥಿನಿಯರು ತಮ್ಮ ಗುರಿಯನ್ನು ಸ್ಪಷ್ಟವಾಗಿ ಹೊಂದಿಕೊಂಡು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ. ಹೇಮಲತಾ ಬಿ. ಡಿ. ಉಪಸ್ಥಿತರಿದ್ದರು.

ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುಮಾರಿ ಮುನ ಫಾತಿಮಾ ಮತ್ತು ಕುಮಾರಿ ಸಾರ ಮೈಮುನ ಕಿರಾಅತ್ ಪಠಿಸಿ, ಕುಮಾರಿ ಲಿಯ ಮರಿಯಮ್ ಬಸ್ತಿಕಾರ್ ಅಥಿತಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಕುಮಾರಿ ಫಾತಿಮಾ ಫಜ್ನ ಧನ್ಯವಾದ ಸಲ್ಲಿಸಿದರು. ಕುಮಾರಿ ಫಾತಿಮಾ ಮೆಹರೀಶ್ ಕಾರ್ಯಕ್ರಮವನ್ನು ನೀರೂಪಿಸಿದರು.