ರಜನಿಕಾಂತ್ ಭೇಟಿ ಮಾಡಿದ ಕಮಲ್ ಹಾಸನ್: ರಾಜಕೀಯದ ಬಗ್ಗೆ ಚರ್ಚಿಸಿಲ್ಲ ಎಂದು ಹೇಳಿಕೆ

0
446
ಫೈಲ್ ಫೋಟೋ

ಸನ್ಮಾರ್ಗ ವಾರ್ತೆ

ಚೆನ್ನೈ: ತಮಿಳು ಚಲನಚಿತ್ರ ರಂಗದ ಹಿರಿಯ ನಟ ಮತ್ತು ಮಕ್ಕಲ್ ನೀಧಿ ಮಾಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಅವರು ದೀರ್ಘಕಾಲದ ಗೆಳೆಯ, ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಇಂದು ಭೇಟಿಯಾದರು. ತಾನು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ಕೆಲವು ವಾರಗಳ ಹಿಂದೆ ರಜನಿಕಾಂತ್ ಘೋಷಿಸಿದ ನಂತರ ಮೊದಲ ಬಾರಿಗೆ ಭೇಟಿ ಮಾಡಿದ್ದು, ಆರೋಗ್ಯ ವಿಚಾರಿಸಿದ್ದಾರೆ. 2021 ರ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಥವಾ ರಾಜಕೀಯದ ಬಗ್ಗೆ ಚರ್ಚಿಸಲಿಲ್ಲ ಎಂದು ಅವರ ಆಪ್ತ ಮೂಲಗಳು ಹೇಳಿಕೆ ನೀಡಿವೆ.

ಕಳೆದ ಡಿಸೆಂಬರ್ ನಲ್ಲಿ, ರಜನಿಕಾಂತ್ ತಮ್ಮ ರಾಜಕೀಯ ಪಕ್ಷವನ್ನು ಪ್ರಾರಂಭಿಸುವ ಬಗ್ಗೆ ಹೇಳಿಕೆ ನೀಡಿದ್ದರು. ಆದರೆ ಆ ಬಳಿಕದ ಬೆಳವಣಿಗೆಯಲ್ಲಿ ಆರೋಗ್ಯವನ್ನು ಉಲ್ಲೇಖಿಸಿ ಹಿಂದೆ ಸರಿದಿದ್ದರು. “ನಾನು ರಾಜಕೀಯಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ತೀವ್ರ ದುಃಖದಿಂದ ಹೇಳುತ್ತೇನೆ. ಈ ನಿರ್ಧಾರವನ್ನು ಘೋಷಿಸುವಾಗ ನಾನು ಅನುಭವಿಸಿದ ನೋವು ನನಗೆ ಮಾತ್ರ ತಿಳಿದಿದೆ” ಎಂದು ಅವರು ಆಸ್ಪತ್ರೆಯಿಂದ ಬಿಡುಗಡೆಯಾದ ಎರಡು ದಿನಗಳ ನಂತರ ಹೇಳಿದ್ದರು.

ಮತ್ತೊಂದೆಡೆ, ಕಮಲ್ ಹಾಸನ್ ಅವರು ತಮ್ಮ ಮಕ್ಕಲ್ ನೀಧಿ ಮಾಯಂ ರಾಜಕೀಯ ಪಕ್ಷವನ್ನು 2018 ರಲ್ಲಿ ಪ್ರಾರಂಭಿಸಿದರು ಮತ್ತು ಈಗಾಗಲೇ ತಮ್ಮ ಪಕ್ಷವು ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರಲ್ಲದೆ, ಚುನಾವಣಾ ಪ್ರಚಾರವನ್ನು ಕೂಡ ಆರಂಭಿಸಿದ್ದಾರೆ. ರಜನಿಕಾಂತ್ ಅವರ ಬೆಂಬಲವನ್ನು ಪಡೆಯುವುದಾಗಿ ಅವರು ಇತ್ತೀಚೆಗೆ ಘೋಷಿಸಿದ್ದರು.