ರಾಜ್ಯದಲ್ಲಿ ಅನಿಶ್ಚಿತತೆ; ಸ್ಪೀಕರ್ ತೀರ್ಮಾನ ಇಂದು, ಡಿಕೆಶಿ ಜಾಡು ತಪ್ಪಿಸಲು ಶಾಸಕರು ಗೋವಾಕ್ಕೆ?

0
518

ಬೆಂಗಳೂರು, ಜು. 9: ಕರ್ನಾಟಕದಲ್ಲಿ ಭಿನ್ನಮತೀಯ ಶಾಸಕರು ರಾಜೀನಾಮೆ ನೀಡಿದ್ದು ಈ ಕುರಿತು ಇಂದು ಸ್ಪೀಕರ್ ತನ್ನ ತೀರ್ಮಾನವನ್ನು ತಿಳಿಸಲಿದ್ದಾರೆ. ಹದಿಮೂರು ಶಾಸಕರ ರಾಜೀನಾಮೆಯಲ್ಲಿ ಸ್ಪೀಕರ್ ಕೆ. ಆರ್. ರಮೇಶ್‍ಕುಮಾರ್ ತೀರ್ಮಾನ ತಳೆಯಲಿದ್ದು ಸ್ಪೀಕರ್ ಕಚೇರಿ ಮುಂದೆ ಶಾಸಕರು ನೆರೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂದು ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು ಹಲವು ಶಾಸಕರು ಅಲ್ಲಿಗೆ ತೆರಳುತ್ತಿದ್ದಾರೆ. ಇಲ್ಲಿಗೆ ಎಷ್ಟು ಶಾಸಕರ ಗೈರು ಹಾಜರಾಗುತ್ತಾರೆ ಎನ್ನುವ ಆಧಾರದಲ್ಲಿ ಎಷ್ಟು ಶಾಸಕರು ದೋಸ್ತಿ ಸರಕಾರದ ವಿರುದ್ಧ ಬಂಡಾಯ ಹೂಡಿದ್ದಾರೆ ಎಂಬುದು ಸ್ಪಷ್ಟವಾಗಲಿದೆ. ಇದೇವೇಳೆ ಭಿನ್ನಮತೀಯ ಶಾಸಕರಾದ ಕಾಂಗ್ರೆಸ್‍ನ ಹಿರಿಯ ಮುಖಂಡ ರಾಮಲಿಂಗಾ ರೆಡ್ಡಿ ಕಾಂಗ್ರೆಸ್‍ನಲ್ಲಿ ಮುಂದುವರಿಯುವ ಸುಳಿವು ಕೂಡ ಪತ್ರಕರ್ತರ ಮುಂದೆ ಬಿಚ್ಚಿಟ್ಟಿದ್ದಾರೆ. ಇದು ಎಷ್ಟು ನಿಜವೆನ್ನುವುದು ಮಧ್ಯಾಹ್ನ ಮೂರು ಗಂಟೆಗೆ ಸ್ಪಷ್ಟವಾಗಲಿದ್ದು ಅತೃಪ್ತ ಶಾಸಕರು ಮೂರು ಗಂಟೆಗೆ ಸ್ಪೀರ್ ರನ್ನು ಭೇಟಿಯಾಗುವ ಕಾರ್ಯಕ್ರಮ ಇದೆ ಎಂದು ತಿಳಿದು ಬಂದಿದೆ.

ಪಕ್ಷೇತರ ಶಾಸಕರಾದ ಎಚ್.ನಾಗೇಶ್ ಮತ್ತು ಆರ್. ಶಂಕರ್ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಇವರನ್ನು ಸೇರಿಸಿದರೆ ಬಿಜೆಪಿ ಸದಸ್ಯ ಬಲ 107 ಆಗಲಿದೆ. ಕಾಂಗ್ರೆಸ್ ನ ಶಾಸಕ ಬಲ 104ಕ್ಕೆ ಇಳಿದಿದೆ.

ಇದೇ ವೇಳೆ ಬಂಡುಕೋರ ಜೆಡಿಎಸ್ ನಾಯಕ ಹೆಚ್. ವಿಶ್ವನಾಥ್ ಮಹಿಳೆಯೊಂದಿಗಿರುವ ಅಶ್ಲೀಲ ಆಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ವಿಶ್ವನಾಥ್ ಇದೊಂದು ಮಿಮಿಕ್ರಿ ಕುತಂತ್ರ ಎಂದು ನಿರಾಕರಿಸಿದ್ದು ತಾನು ಇದನ್ನು ನಿರ್ಲಕ್ಷಿಸಿದ್ದೇನೆ ಎಂದು ಹೇಳಿದ್ದಾರೆ. ಇದೇವೇಳೆ ರಾಮ ಲಿಂಗಾ ರೆಡ್ಡಿಯವರ ಮನೆಗೆ ತೆರಳಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಬಿಡಬಾರದೆಂದು ಒತ್ತಡ ಹೇರುತ್ತಿದ್ದಾರೆ ಎಂಬ ಸೂಚನೆ ಲಭಿಸಿದ್ದು ಅವರು ರಾಜೀನಾಮೆ ಹಿಂಪಡೆಯುವ ನಿರ್ಧಾರವನ್ನು ತಳೆಯಬಹುದು ಎನ್ನಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಎಲ್ಲ ಸಚಿವರು ರಾಜೀನಾಮೆ ಸಲ್ಲಿಸಿದ್ದು ಅವರ ಮುಂದಿನ ನಡೆ ಕೂಡ ಕುತೂಹಲ ಕೆರಳಿಸಿದೆ.

ಇನ್ನೊಂದೆಡೆ ರಾಮಲಿಂಗರೆಡ್ಡಿಯವರಿಗೆ ಉಪಮುಖ್ಯಮಂತ್ರಿ ಸ್ಥಾನದ ಕೊಡುಗೆ ನೀಡಲಾಗಿದೆ ಎನ್ನಲಾಗಿದೆ. ಇದೇ ವೇಳೆ, ಮುಂಬೈಯ ಹೊಟೇಲ್‍ನಲ್ಲಿದ್ದ ಅತೃಪ್ತ ಶಾಸಕರನ್ನು ಭೇಟಿಯಾಗಲು ಡಿಕೆ ಶಿವಕುಮಾರ್ ಮುಂಬೈಗೆ ತೆರಳಿದ್ದು ಗೊತ್ತಾಗಿ ಗೋವಾಕ್ಕೆ ಸ್ಥಳಾಂತರಿಸಲಾಗಿದೆ.