ರಾಜ್ಯ ಬಿಜೆಪಿ ಸರಕಾರದಿಂದ ಅಲ್ಪಸಂಖ್ಯಾತರ ಕಲ್ಯಾಣ ನಿಧಿಗೆ ಕತ್ತರಿ: ಶೇ.44ರಷ್ಟು ಕಡಿತ

0
630

ಸನ್ಮಾರ್ಗ ವಾರ್ತೆ

ಬೆಂಗಳೂರು,ಅ.12: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಕರ್ನಾಟಕದ ಬಿಜೆಪಿ ಸರ್ಕಾರವು ಅಲ್ಪಸಂಖ್ಯಾತ ಕಲ್ಯಾಣ ಯೋಜನೆಗಳಿಗೆ ನೀಡುವ ಹಣವನ್ನು 44% ರಷ್ಟು ಕಡಿತಗೊಳಿಸಿದೆ. 2019-20ರಲ್ಲಿ 1,418.98 ಕೋಟಿ ರೂ. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಂಚಿಕೆಯಾಗಿತ್ತು. ಈ ಮೊತ್ತವನ್ನು ಈಗಿನ ವರ್ಷಕ್ಕೆ 950 ಕೋಟಿ ರೂ.ಗೆ ಕಡಿತಗೊಳಿಸಲಾಗಿದೆ.

ಅಲ್ಪಸಂಖ್ಯಾತರಿಗೆ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ, ಮದುವೆ ಸಭಾಂಗಣಗಳು/ಸಮುದಾಯ ಕೇಂದ್ರಗಳ ನಿರ್ಮಾಣ, ಕುಟುಂಬ ಕಲ್ಯಾಣ ಯೋಜನೆಗಳು, ಬಾಲಕಿಯರ ಮದುವೆಗೆ ಹಣ ಮತ್ತು ಹೀಗೆ ಹಲವು ರೀತಿಯ ಯೋಜನೆಗಳಲ್ಲಿ ಗುರುತಿಸಲಾದ ಅಲ್ಪಸಂಖ್ಯಾತರಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ ಮತ್ತು ಪಾರ್ಸಿ ಸಮುದಾಯಗಳು ಈ ಯೋಜನೆಗಳ ಫಲಾನುಭವಿಗಳಾಗಿವೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 2013ರ ಅಕ್ಟೋಬರ್‌ನಲ್ಲಿ ಬಿಡುಗಡೆಗೊಳಿಸಿದ ಶಾದಿ ಭಾಗ್ಯ ಯೋಜನೆಯಲ್ಲಿ ಅಲ್ಪಸಂಖ್ಯಾತ ಬಾಲಕಿಯರಿಗೆ 50,000 ರೂ.ಗಳ ಏಕಕಾಲದ ವಿವಾಹ ನೆರವು ನೀಡಲಾಗಿತ್ತು. ಪ್ರಾರಂಭದಿಂದಲೂ ಒಂದು ಲಕ್ಷಕ್ಕೂ ಹೆಚ್ಚು ಯುವತಿಯರು ಈ ಯೋಜನೆಯಡಿ ಲಾಭ ಪಡೆದಿದ್ದರು. ಮಾರ್ಚ್ 2020ರ ಅವಧಿಯಲ್ಲಿ ತನ್ನ ಬಜೆಟ್‌ನಲ್ಲಿ ಕರ್ನಾಟಕ ಸರ್ಕಾರ ಈ ಯೋಜನೆಯನ್ನು ರದ್ದುಗೊಳಿಸಿದೆ.

ಅಲ್ಪಸಂಖ್ಯಾತರ ಕಲ್ಯಾಣ ನಿಧಿಯಲ್ಲಿನ ಕಡಿತವನ್ನು ಕಾಂಗ್ರೆಸ್ “ಇದು ಅಲ್ಪಸಂಖ್ಯಾತರ ಬಗೆಗಿರುವ ಬಿಜೆಪಿಯ ನೈಜ ಮುಖ” ಎಂಬುದಾಗಿ ಟೀಕಿಸಿದೆ.