ಹತ್ರಸ್ ಪ್ರಕರಣ: ಒಂದು ಶ್ರೀಮಂತ ಕುಟುಂಬದ ಬಾಲಕಿಯಾಗಿದ್ದರೆ ಅವಳನ್ನು ಅದೇ ರೀತಿಯಲ್ಲಿ ಸಂಸ್ಕರಿಸುತ್ತಿದ್ದಿರಾ?- ಉ.ಪ್ರ ಎಡಿಜಿಗೆ ಹೈಕೋರ್ಟ್ ಪ್ರಶ್ನೆ

0
475

ಸನ್ಮಾರ್ಗ ವಾರ್ತೆ

ಲಕ್ನೊ,ಅ.13: ಹತ್ರಸ್‍ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೀಡಾಗಿ ಕೊಲೆಯಾದ ದಲಿತ ಬಾಲಕಿಯ ಮೃತದೇಹವನ್ನು ಮಧ್ಯ ರಾತ್ರೆಯಲ್ಲಿ ಸಂಸ್ಕರಿಸಿದ ಘಟನೆಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‍ರನ್ನು ಆಲಾಹಬಾದ್ ಹೈಕೋರ್ಟು ತೀವ್ರವಾಗಿ ತರಾಟೆಗೆತ್ತಿಕೊಂಡಿದೆ. ದಾರುಣವಾಗಿ ಕೊಲೆಯಾಗಿದ್ದು, ಓರ್ವ ಶ್ರೀಮಂತ ಕುಟುಂಬದ ಬಾಲಕಿಯಾಗಿದ್ದರೆ ನೀವು ಅವಳ ಮೃತದೇಹವನ್ನು ಆ ರೀತಿ ಸಂಸ್ಕರಿಸುತ್ತಿದ್ದಿರಾ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರವೀಣ್ ಕುಮಾರ್‌ರನ್ನು ಲಕ್ನೊ ಹೈಕೋರ್ಟು ಪೀಠ ಪ್ರಶ್ನಿಸಿದೆ.

ಬಾಲಕಿಯ ಮೃತದೇಹವನ್ನು ಕುಟುಂಬದ ಅನುಮತಿಯಿಲ್ಲದೆ ಸಂಸ್ಕರಿಸಲಾಯಿತು ಎಂದು ಕುಟುಂಬದ ಪರ ಹಾಜರಾದ ಅಡ್ವೊಕೇಟ್ ಸೀಮಾ ಕುಶ್ವಾಹ ಕೋರ್ಟಿಗೆ ತಿಳಿಸಿದಾಗ ಕೋರ್ಟು ಜಿಲ್ಲಾಧಿಕಾರಿಯನ್ನು ಈ ರೀತಿ ಕಟುವಾಗಿ ತರಾಟೆಗೆತ್ತಿಕೊಂಡಿದೆ.

ರಾಜ್ಯದ ಅಧಿಕಾರಿಗಳ ಹಸ್ತಕ್ಷೇಪ ಇದೆ ಎಂಬ ಆರೋಪ ಎದ್ದಿದ್ದರಿಂದ ಬಹಳ ಸಾರ್ವಜನಿಕ ಪ್ರಾಮುಖ್ಯತೆ ಇದ್ದ ಪ್ರಕರಣವಿದು. ಮೃತಳಿಗೆ ಮಾತ್ರವಲ್ಲ ಅವಳ ಕುಟುಂಬದ ಮೇಲೆಯೂ ಮಾನವ ಹಕ್ಕುಗಳು, ಮೂಲಭೂತ ಹಕ್ಕುಗಳು ಉಲ್ಲಂಘಿಸಲ್ಪಟ್ಟಿವೆ ಎಂದು ಕೋರ್ಟು ಹೇಳಿತು.

1995ರ ಸುಪ್ರೀಂಕೋರ್ಟಿನ ತೀರ್ಪನ್ನು ಉದ್ಧರಿಸಿದ ಕೋರ್ಟು, ಜೀವಿಸುವ ಹಕ್ಕನ್ನು ನೀಡಿದ ಸಂವಿಧಾನದ ಸೆಕ್ಷನ್‌ಗಳು ಪ್ರಕರಣಕ್ಕೆ ಅನ್ವಯವಾಗುತ್ತಿದೆ. ಒಂದು ಮೃತದೇಹಕ್ಕೆ ನ್ಯಾಯೋಚಿತ ಉಪಚರಣೆ ಖಚಿತ ಪಡಿಸುವುದು ಕೂಡ ಉಲ್ಲಂಘಿಸಲ್ಪಟ್ಟಿದೆ ಎಂದು ಕೋರ್ಟಿನ ಪೀಠ ಹೇಳಿತು.

ಅವಳು ಅತ್ಯಾಚಾರಕ್ಕೊಳಗಾಗಿಲ್ಲ ಎಂದು ಹೇಗೆ ಗೊತ್ತಾಗುವುದು. ತನಿಖೆ ಕೊನೆಯಾಯಿತೇ?. 2013ರ ಹೊಸ ಅತ್ಯಾಚಾರ ಕಾನೂನಿನ ಆಧಾರದಲ್ಲಿ ಪ್ರಕರಣದ ತನಿಖೆ ನಡೆಯಬೇಕೆಂದು ಪೊಲೀಸಧಿಕಾರಿ ಪ್ರಶಾಂತ್ ಕುಮಾರ್‌ಗೆ ಸೂಚನೆ ನೀಡಿದರು. ಶವಸಂಸ್ಕಾರದಲ್ಲಿ ಭಾಗಿಯಾಗಲು ಜಿಲ್ಲಾ ಮ್ಯಾಜಿಸ್ಟ್ರೇಟ್ ನಮಗೆ ಬಿಡಲಿಲ್ಲ ಎಂದು ಸಂತ್ರಸ್ತೆಯ ಕುಟುಂಬ ನಿನ್ನೆ ಸಾಕ್ಷಿ ಹೇಳಿತ್ತು. ಮೊದಲ ಹಂತದಲ್ಲಿ ಎಫ್‍ಐಆರ್‌ಅನ್ನು ಕೂಡ ದಾಖಲಿಸಿರಲಿಲ್ಲ. ಉತ್ತರ ಪ್ರದೇಶ ಪೊಲೀಸರಲ್ಲಿ ನಮಗೆ ವಿಶ್ವಾಸವಿಲ್ಲ ಎಂದು ಕುಟುಂಬ ಕೋರ್ಟಿನಲ್ಲಿ ತಿಳಿಸಿದೆ.

ಪ್ರಕರಣವನ್ನು ಉತ್ತರ ಪ್ರದೇಶದಿಂದ ಹೊರಗೆ ವರ್ಗಾಯಿಸಬೇಕೆಂದು ಕುಟುಂಬ ಮನವಿ ಮಾಡಿದೆ. ಸಿಬಿಐ ತನಿಖೆ ನಡೆಯುತ್ತಿದ್ದ ಪ್ರಕರಣದ ವಿವರಗಳನ್ನು ರಹಸ್ಯವಾಗಿರಿಸಬೇಕೆಂದು ಆಗ್ರಹಿಸಿದ್ದಾರೆ. ಪ್ರಕರಣ ವಿಚಾರಣೆ ನವೆಂಬರ್ 2ಕ್ಕೆ ಮುಂದೂಡಲಾಗಿದೆ.