ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.5: ಕರ್ತಾರ್ಪುರ ಮೂಲಕ ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್ ಸಂದರ್ಶಿಸಲು ಭಾರತದ ಯಾತ್ರಿಕರಿಗೆ ವೀಸಾ ಬೇಕಾಗಿಲ್ಲ. ಕರ್ತಾರ್ಪುರಕ್ಕೆ ಸಂಬಂಧಿಸಿ ಭಾರತ-ಪಾಕಿಸ್ತಾನ ಅಧಿಕಾರಿಗಳು ಅಮೃತಸರದ ಅಟ್ಟಾರಿಯಲ್ಲಿ ಚರ್ಚಿಸಿದ ಬಳಿಕ ಈ ಕುರಿತು ಸಹಮತ ವ್ಯಕ್ತವಾಗಿದೆ. ಒಸಿಐ ಕಾರ್ಡ್ಗಳು ಇರುವವರಿಗೆ ವಿದೇಶಿ ಪೌರತ್ವ ಇರುವ ಭಾರತದ ವಂಶೀಯರಿಗೆ ನೀಡುವ ಕಾರ್ಡ್ ಉಪಯೋಗಿಸಿ ಗುರುದ್ವಾರಕ್ಕೆ ವೀಸಾ ಇಲ್ಲದೆ ಯಾತ್ರೆ ನಡೆಸಬಹುದಾಗಿದೆ.
ಪ್ರತೀ ದಿವಸ 5000 ಮಂದಿಗೆ ಪ್ರವೇಶ ಅನುಮತಿಸಲಾಗಿದೆ. ವಿಶೇಷ ಸಂದರ್ಭದಲ್ಲಿ ಇದಕ್ಕಿಂತಲೂ ಹೆಚ್ಚು ಮಂದಿ ಸಂದರ್ಶಿಸಬಹುದು. ಗುರುದ್ವಾರಕ್ಕೆ ಬರುವವರಿಗೆ ಸೇವಾ ಶುಲ್ಕ ನೀಡಬೇಕೆನ್ನುವ ಪಾಕಿಸ್ತಾನದ ಆಗ್ರಹವನ್ನು ಭಾರತ ಒಪ್ಪಿಕೊಂಡಿಲ್ಲ. ಗುರುದ್ವಾರದ ಪರಿಸರದಲ್ಲಿ ಭಾರತ ಕಾನ್ಸುಲೇಟರ್, ಪ್ರೊಟೊಕಾಲ್ ಅಧಿಕಾರಿಗಳ ಉಪಸ್ಥಿತಿಗೆ ಅವಕಾಶ ಕೊಡಬೇಕೆನ್ನುವ ಭಾರತದ ಬೇಡಿಕೆಗೆ ಪಾಕಿಸ್ತಾನ ಒಪ್ಪಲಿಲ್ಲ.
ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ಸಮಾಧಿ ಕರ್ತಾರ್ಪುರ್ ಗುರುದ್ವಾರದಲ್ಲಿದೆ. ಇಲ್ಲಿಗೆ ಪಂಜಾಬಿನ ಗುರುದಾಸ್ಪುರ ಜಿಲ್ಲೆಯಿಂದ ತೆರಳಲು 2018ರಲ್ಲಿ ಎರಡು ದೇಶಗಳ ನಡುವೆ ಒಪ್ಪಂದ ಏರ್ಪಟ್ಟಿತ್ತು.












