ಜಿ7 ಶೃಂಗದಲ್ಲಿ ಮೋದಿ-ಟ್ರಂಪ್ ಭೇಟಿ; ಕಾಶ್ಮೀರ ವಿಷಯ ಚರ್ಚೆ ಸಾಧ್ಯತೆ

0
776

ಸನ್ಮಾರ್ಗ ವಾರ್ತೆ

ಬಿಯಾರಿಟ್ಸ್(ಫ್ರಾನ್ಸ್),ಆ.26: ಜಿ7 ಶೃಂಗದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರನ್ನು ಪ್ರಧಾನಿ ಮೋದಿ ಇಂದು ಭೇಟಿಯಾಗಲಿದ್ದು ಕಾಶ್ಮೀರ ವಿಷಯ ಚರ್ಚೆಯಾಗಲಿದೆ ಎನ್ನಲಾಗಿದೆ. ಕಾಶ್ಮೀರದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಟ್ರಂಪ್ ಹೇಳಿಕೆಯ ನಡುವೆಯೇ ಸಮಾಲೋಚನೆಗೆ ಹೆಚ್ಚು ಪ್ರಾಮುಖ್ಯತೆ ಬಂದಿದೆ. ಕಾಶ್ಮೀರ ಸಮಸ್ಯೆ ಭಾರತ-ಪಾಕಿಸ್ತಾನಗಳ ವಿಷಯವಾಗಿದೆ. ಯಾರದೇ ಮಧ್ಯಸ್ಥಿಕೆ ಬೇಡ ಎಂದು ಈವರೆಗೆ ಭಾರತದ ಘೋಷಿತ ನೀತಿಯಾಗಿದೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದು ಭಾರತದ ಆಂತರಿಕ ವಿಷಯ ಎಂದು ಟ್ರಂಪ್ ಹೇಳಿದ್ದರು. ಸಮಾಲೋಚನೆಯಲ್ಲಿ ಏನಾಗಬಹುದು ಎನ್ನುವ ಕುತೂಹಲವನ್ನು ನಿರೀಕ್ಷಕರು ವ್ಯಕ್ತಪಡಿಸುತ್ತಿದ್ದಾರೆ.

ಕಾಶ್ಮೀರ ವಿಷಯವನ್ನು ಪರಿಹರಿಸಲು ಮಧ್ಯಸ್ಥಿಕೆ ವಹಿಸಲು ತಯಾರು ಎಂದು ಟ್ರಂಪ್ ಕೆಲವು ಸಲ ಹೇಳಿದ್ದಾರೆ. ಮೋದಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ತನ್ನೊಡನೆ ಕೇಳಿಕೊಂಡಿದ್ದಾರೆಂದೂ ಟ್ರಂಪ್ ಹೇಳಿದ್ದರು. ಕಾಶ್ಮೀರ ವಿಷಯವಲ್ಲದೆ ಅಮೆರಿಕ ಉತ್ಪನ್ನಗಳಿಗೆ ತೆರಿಗೆ ಹೆಚ್ಚಿಸಿದ್ದೂ ಕೂಡ ಮೋದಿ-ಟ್ರಂಪ್ ಭೇಟಿಯಲ್ಲಿ ಚರ್ಚೆಯಾಗಲಿದೆ.