ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.11: ಸೇನೆಯ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದೇಶದ್ರೋಹ ಆರೋಪ ಹೊರಿಸಲಾದ ಪ್ರಕರಣದಲ್ಲಿ ಜೆಎನ್ಯು ಮಾಜಿ ವಿದ್ಯಾರ್ಥಿ ನಾಯಕಿ ಶೆಹ್ಲಾ ರಾಶಿದ್ರ ಬಂಧನವನ್ನು ಕೋರ್ಟು ತಡೆದಿದೆ. ಪ್ರಕರಣದಲ್ಲಿ ವಿವರವಾದ ತನಿಖೆ ಆಗಬೇಕಿದೆ ಎಂದು ಅಡಿಶನಲ್ ಸೆಶನ್ಸ್ ಜಡ್ಜ್ ಪವನ್ ಕುಮಾರ ಜೈನ್, ಶೆಹ್ಲಾರ ಬಂಧನವನ್ನು ತಡೆಹಿಡಿದು ಮಧ್ಯಂತರ ಆದೇಶ ಹೊರಡಿಸಿದ್ದಾರೆ. ತನಿಖೆಗೆ ಸಹಕರಿಸಬೇಕೆಂದು ಶೆಹ್ಲಾರಿಗೆ ಕೋರ್ಟು ಸೂಚಿಸಿತು.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬೆನ್ನಿಗೆ ರಾಜ್ಯದಲ್ಲಿ ಸೈನ್ಯ ಮಾನವ ಹಕ್ಕು ಉಲ್ಲಂಘನೆ ನಡೆಸುತ್ತಿದೆ ಎಂದು ಶೆಹ್ಲಾ ಟ್ವೀಟ್ ಮಾಡಿದ್ದರು. ಇದರ ನಂತರ ಸುಪ್ರೀಂಕೋರ್ಟು ವಕೀಲ ಅಲೋಕ್ ಶ್ರೀವಾಸ್ತವ ಸಲ್ಲಿಸಿದ ದೂರಿನಲ್ಲಿ ದಿಲ್ಲಿ ಸೈಬರ್ ಸೆಲ್ ಶೆಹ್ಲಾರ ವಿರುದ್ಧ ದೇಶದ್ರೋಹ ಆರೋಪ ಹೊರಿಸಿತ್ತು.
ಕಾಶ್ಮೀರದಲ್ಲಿ ಸೈನ್ಯ ನಡೆಸಿದ ದಾಳಿಗಳ ಕುರಿತಂತೆ ತಪ್ಪು ಮಾಹಿತಿ ಮೂಲಕ ದೇಶದಲ್ಲಿ ದ್ವೇಷ ಹರಡುತ್ತಿದ್ದಾರೆ ಎಂದು ಶ್ರೀವಾಸ್ತವ ದೂರಿನಲ್ಲಿ ತಿಳಿಸಿದ್ದರು. 124 ಎ(ದೇಶದ್ರೋಹ), 153 ಎ(ಎರಡು ವಿಭಾಗಗಳಲ್ಲಿ ದ್ವೇಷಕ್ಕೆ ಕಾರಣವಾಗುವುದು) 153(ಗಲಭೆಗೆ ಪ್ರೇರಣೆ), 505(ಸುಳ್ಳು ಮಾಹಿತಿ ಹರಡಿದ್ದು) 504(ಶಾಂತಿ ಕದಡಲು ಮನಪೂರ್ವಕ ಪ್ರಚೋದಿಸುವುದು, ಆಕ್ಷೇಪಿಸುವುದು) ಸೆಕ್ಷನ್ ಅಡಿಯಲ್ಲಿ ಶೆಹ್ಲಾರ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ.
ರಾತ್ರೆಯಲ್ಲಿ ಸೈನಿಕರು ಮನೆಗೆ ನುಗ್ಗಿ ಗಂಡಸರನ್ನು ಎಳೆದುಕೊಂಡು ಹೋಗುತ್ತಿದ್ದಾರೆ. ಮನೆಗಳು ನಾಶಪಡಿಸುತ್ತಾರೆ. ಪೊಲೀಸರಿಗೆ ಶಾಂತಿ ಪಾಲನೆಯಲ್ಲಿ ಯಾವುದೇ ಪಾತ್ರವಿಲ್ಲ. ಸಿಆರ್ಪಿಎಫ್ ಸಹಿತ ಅರೆ ಸೇನಾ ಪಡೆಗಳು ಎಲ್ಲವನ್ನೂ ಮಾಡುತ್ತಾರೆ ಇತ್ಯಾದಿ ವಿಷಯಗಳನ್ನು ಶೆಹ್ಲಾ ಟ್ವಿಟರ್ನಲ್ಲಿ ಬರೆದಿದ್ದರು. ಆದರೆ ಶೆಹ್ಲಾರ ಆರೋಪಗಳು ನಿರಾಧಾರ ಎಂದು ಸೇನೆ ಹೇಳಿಕೊಂಡಿದೆ.












