ಪಠಾಣ್ಕೋಟ್,ಜೂ.10: ಜಮ್ಮು ಕಾಶ್ಮೀರದ ಕಥುವಾದಲ್ಲಿ ಎಂಟು ವರ್ಷ ಬಾಲಕಿಯನ್ನು ಗ್ರಾಮದ ದೇವಸ್ಥಾನದಲ್ಲಿ ಬಚ್ಚಿಟ್ಟು ಕ್ರೂರ ಸಾಮೂಹಿಕ ಅತ್ಯಾಚಾರವೆಸಗಿ ನಂತರ ಕೊಲೆ ಮಾಡಿದ ಪ್ರಕರಣದಲ್ಲಿ ಆರು ಮಂದಿಯನ್ನು ಕೋರ್ಟು ಅಪರಾಧಿಗಳು ಎಂದು ಘೋಷಿಸಿದೆ. ಕಥುವಾ ಗ್ರಾಮದ ಪ್ರಮುಖ, ದೇವಸ್ಥಾನದ ಅರ್ಚಕ ಹಾಗೂ ನಿವೃತ್ತ ಕಂದಾಯ ಅಧಿಕಾರಿ ಸಂಜಿರಾಮ್(60), ಸಂಜಿರಾಮನ ಮಗ ವಿಶಾಲ್ ಜಂಗ್ರೋತ, ದೀಪಕ್ ಖಜೂರಿಯಾ(ವಿಶೇಷ ಪೊಲೀಸ್ ಅಧಿಕಾರಿ) ಸುರೀಂದರ್ ಕುಮಾರ್(ವಿಶೇಷ ಪೊಲೀಸಧಿಕಾರಿ) ತಿಲಕ್ ರಾಜ್(ಹೆಡ್ಕಾನ್ಸ್ಟೇಬಲ್)ಗಳ ಅಪರಾಧ ಸಾಬೀತಾಗಿದೆ ಎಂದು ಕೋರ್ಟು ಹೇಳಿದೆ.
ರಾಷ್ಟ್ರವನ್ನೇ ನಿಬ್ಬೆರಗುಗೊಳಿಸುವ ರೀತಿಯಲ್ಲಿ ನಡೆದ ಅತ್ಯಾಚಾರ ಹತ್ಯೆ ಪ್ರಕರಣದಲ್ಲಿ ದೇವಸ್ಥಾನ ಅರ್ಚಕ ಮತ್ತು ಪೊಲೀಸಧಿಕಾರಿಗಳ ಸಹಿತ ಎಂಟು ಮಂದಿಯ ವಿಚಾರಣೆ ಪೂರ್ಣಗೊಂಡಿದ್ದು ಪಂಜಾಬ್ ಪಠಾಣ್ಕೋಟ್ ಕೋರ್ಟು ತೀರ್ಪು ನೀಡಿದೆ. 2018 ಜೂನ್ನಲ್ಲಿ ಪಠಾಣ್ಕೋಟ್ ವಿಶೇಷ ಕೋರ್ಟಿನಲ್ಲಿ ಪ್ರಕರಣದ ರಹಸ್ಯ ವಿಚಾರಣೆ ಆರಂಭವಾಗಿತ್ತು. ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ನಡೆಸಿ ಆರೋಪ ಪಟ್ಟಿ ಕೋರ್ಟಿಗೆ ಸಲ್ಲಿಸುವುದರೊಂದಿಗೆ ದೇಶವನ್ನೇ ಕಂಪಿಸುವ ಸಾಮೂಹಿಕ ಅತ್ಯಾಚಾರದ ಘಟನೆ ಬೆಳಕು ಕಂಡಿತ್ತು.
ಜಮ್ಮು ಕಾಶ್ಮೀರದ ಕಥುವಾ ಸಮೀಪದ ರಸಾನ ಗ್ರಾಮದಲ್ಲಿ ಎಂಟು ವರ್ಷದ ಅಲೆಮಾರಿ ಕುಟುಂಬದ ಬಾಲಕಿ 2018 ಜನೆವರಿ ಹತ್ತರಂದು ಕಾಣೆಯಾಗಿದ್ದಳು. ಕಾಡಿನಲ್ಲಿ ಮೇಯಲು ಬಿಟ್ಟ ಕುದುರೆಗಳನ್ನು ಹುಡುಕುತ್ತಾ ಅಲೆದಾಡಿದ ಬಾಲಕಿಗೆ ಸಹಾಯ ಮಾಡುತ್ತೇವೆ ಎಂದು ಹೇಳಿ ಕರೆದು ಹೋದ ಆರೋಪಿಗಳಲ್ಲಿ ಒಬ್ಬ ಹತ್ತಿರದ ಚಿಕ್ಕ ದೇವಸ್ಥಾನದಕ್ಕೆ ಕರೆದುಕೊಂಡು ಹೋಗಿ ಒಂದು ವಾರ ಕೂಡಿ ಹಾಕಿ ಅತ್ಯಾಚಾರ ಮಾಡಿದ್ದ. ಆಹಾರ ಕೊಡದೆ ಮಾದಕವಸ್ತು ಕೊಟ್ಟು ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಮರಣಾಸನ್ನಳಾಗಿದ್ದ ಬಾಲಕಿಯನ್ನು ದೇವಸ್ಥಾನದ ಹತ್ತಿರದಲ್ಲಿ ಬಚ್ಚಿಟ್ಟ ವಿವರ ತಿಳಿದು ಅಲ್ಲಿಗೆ ಬಂದ ಆರೋಪಿಗಳಲ್ಲಿ ಒಬ್ಬ ಮತ್ತೊಮ್ಮೆ ಅತ್ಯಾಚಾರ ಮಾಡಿ ತಲೆಗೆ ಹೊಡೆದು ಕೊಲೆ ಮಾಡಿದ್ದ. ಮೃತದೇಹವನ್ನು ಹತ್ತಿರದ ಕಾಡಿನಲ್ಲಿ ಎಸೆದು ಹೋಗಿದ್ದ. ಜನೆವರಿ 17ಕ್ಕೆ ಮೃತದೇಹ ಕಾಡಿನಲ್ಲಿ ಪತ್ತೆಯಾಗಿತ್ತು. ಆಗಲೆಲ್ಲ ಕಾಣೆಯಾದ ಬಾಲಕಿಯನ್ನು ಕುಟುಂಬದವರು ಹುಡುಕುತ್ತಾ ಅಲೆದಾಡುತ್ತಿದ್ದರು.
ಹಿಂದೂ ಬಹುಸಂಖ್ಯಾತ ಪ್ರದೇಶದಲ್ಲಿ ಅಲೆಮಾರಿ ಮುಸ್ಲಿಂ ಕುಟುಂಬಗಳನ್ನು ಓಡಿಸುವುದು ಅತ್ಯಾಚಾರಿಗಳ ಉದ್ದೇಶವಾಗಿತ್ತು. ಪ್ರಕರಣದ ಗಂಭೀರತೆಯನ್ನು ಮನಗಂಡ ಸುಪ್ರೀಂಕೋರ್ಟು ಪ್ರಕರಣದ ವಿಚಾರಣೆಯನ್ನು ಪಂಜಾಬ್ನ ಪಠಾಣ್ಕೋಟ್ಗೆ ವರ್ಗಾಯಿಸಿತ್ತು. ಪ್ರಕರಣ ಆರೋಪಿಗಳನ್ನು ಬೆಂಬಲಿಸಿ ಬಿಜೆಪಿ ಶಾಸಕರು ನೀಡಿದ್ದ ಬಹಿರಂಗ ಹೇಳಿಕೆಗಳನ್ನು ವಿರೋಧಿಸಿ ತೀವ್ರ ಟೀಕೆ ಹಾಗೂ ಪ್ರತಿಭಟನೆಗಳು ದೇಶಾದ್ಯಂತ ನಡೆದಿತ್ತು.












