ಅಹ್ಮದಾಬಾದ್, ಜೂ.8: ಗುಜರಾತ್ ದಂಗೆಯಲ್ಲಿ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯೆಂದು ಹೆಸರಿಲಾದ ಐಪಿಎಸ್ ಅಧಿಕಾರಿಯನ್ನು ನಿವೃತ್ತರಾಗುವ ಮುಂಚಿನ ದಿನ ಕೆಲಸದಿಂದ ವಜಾಗೊಳಿಸಲಾಗಿದೆ. ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿ ಆರ್.ಎಸ್ ಬಗೋರೆ ಮೇ 31ಕ್ಕೆ ನಿವೃತ್ತರಾಗುವವರಿದ್ದರು. ಆದರೆ ಮೇ 30ರಂದು ಅವರನ್ನು ಕೆಲಸದಿಂದ ತೆಗೆದು ಹಾಕಲು ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿತು.
ಅಹ್ಮದಾಬಾದ್ನಲ್ಲಿ ಟ್ರಾಫಿಕ್ ಪೊಲೀಸ್ನಲ್ಲಿ ಡೆಪ್ಯುಟಿ ಕಮಿಶನರ್ ಆಗಿದ್ದ ಅವರನ್ನು ಸೇವೆಯಿಂದ ತೆಗೆದು ಹಾಕಬೇಕೆಂದು ಮೇ 29ಕ್ಕೆ ಆದೇಶ ದೊರಕಿತೆಂದು ಗುಜರಾರಾತ್ ಗೃಹ ಇಲಾಖೆ ಉಪ ಕಾರ್ಯದರ್ಶಿ ಎಂ.ಆರ್. ಸೋನಿ ತಿಳಿಸಿದರು. ಇದರಂತೆ ಕ್ರಮಕೈಗೊಂಡಿರುವುದಾಗಿ ಅವರು ತಿಳಿಸಿದರು. ಇದರಿಂದಾಗಿ ಸರಕಾರಿ ನೌಕರರಿಗಿರುವ ಯಾವುದೇ ನಿವೃತ್ತಿ ಸೌಲಭ್ಯ ಬಗೊರೆಗೆ ಸಿಗುವುದಿಲ್ಲ. ರಾಜ್ಯ ಪೊಲೀಸಾಗಿದ್ದ ಬಗೋರೆಗೆ 2006ರಲ್ಲಿ ಐಪಿಎಸ್ ಲಭಿಸಿತ್ತು.
ಬಲ್ಕೀಸ್ ಬಾನು ಪ್ರಕರಣದಲ್ಲಿ ಶಿಕ್ಷಿಸಲಾದ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸಬೇಕೆಂದು ಸುಪ್ರೀಂಕೋರ್ಟು ಗುಜರಾತ್ ಸರಕಾರಕ್ಕೆ ತಿಳಿಸಿತ್ತು. ಪೊಲೀಸ್ ಅಧಿಕಾರಿಯ ನೆಲೆಯಲ್ಲಿ ಹೊಣೆ ನಿರ್ವಹಿಸಲಿಲ್ಲ. ಸಾಕ್ಷ್ಯ ನಾಶಕ್ಕೆ ಸಹಾಯ ಮಾಡಿದರು ಎಂಬ ಆರೋಪಗಳು ಬಗೋರೆ ವಿರುದ್ಧ ಇವೆ. ವಿಚಾರಣಾಧೀನ ಕೋರ್ಟು ಅವರನ್ನು ಆರೋಪ ಮುಕ್ತಗೊಳಿಸಿದರೂ ಹೈಕೋರ್ಟು ಶಿಕ್ಷಿಸಿತು. ಸುಪ್ರೀಂಕೋರ್ಟು ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.












