ಆದಿವಾಸಿಗಳ ಕೋವಿಡ್ ಪರೀಕ್ಷೆ ನಡೆಸಲು ನದಿ ದಾಟಿ ಬಂದ ಕೇರಳದ ವೈದ್ಯರು: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ

0
876

ಸನ್ಮಾರ್ಗ ವಾರ್ತೆ

ಪಾಲಕ್ಕಾಡ್: ಕೊರೋನಾದ ಈ ಕಾಲಘಟ್ಟದಲ್ಲಿ ಫ್ರಂಟ್ ಲೈನ್ ವರ್ಕರ್ಸ್ ಆಗಿರುವ ವೈದ್ಯಕೀಯ ಸಿಬ್ಬಂದಿಗಳು ಮನಸ್ಸು ಮಾಡಿದರೆ ಏನೆಲ್ಲಾ ಸೇವೆ ಮಾಡಲು ಸಾಧ್ಯವಿದೆ ಎಂಬುದನ್ನು ಕೇರಳದ ವೈದ್ಯರು ಹಾಗೂ ಸಿಬ್ಬಂದಿಗಳ ತಂಡ ಮಾದರಿಯಾಗಿ ತೋರಿಸಿಕೊಟ್ಟಿದ್ದಾರೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿ ಪ್ರದೇಶದಿಂದ 20 ಕಿ.ಮೀ. ದೂರದಲ್ಲಿರುವ ಆದಿವಾಸಿಗಳೇ ವಾಸಿಸುತ್ತಿರುವ ಕುಗ್ರಾಮ ಮುರುಗುಲಾದಿಂದ ತುರ್ತು ಕರೆಯೊಂದು ಸ್ವೀಕರಿಸಿದ ನಂತರ ಪುತ್ತೂರ್ ಡೊಮಿಸಿಲಿಯರಿ ಕೇರ್ ಸೆಂಟರ್ (DCC) ಯ ವೈದ್ಯರು ಮತ್ತವರ ತಂಡವು ಸರಿಯಾದ ಪ್ರಯಾಣ ಸೌಕರ್ಯಗಳಿಲ್ಲದಿದ್ದರೂ ವೈದ್ಯಕೀಯ ಪರಿಕರಗಳೊಂದಿಗೆ ನದಿ ದಾಟಿ, ಗ್ರಾಮಕ್ಕೆ ತೆರಳಿ ಅಲ್ಲಿ‌ ತೀವ್ರ ಜ್ವರದಿಂದ ನರಳುತ್ತಿದ್ದ ಒಂದೇ ಕುಟುಂಬದ ಮೂವರು ಸದಸ್ಯರ ಆರೋಗ್ಯ ಪರೀಕ್ಷೆ ನಡೆಸಿದ್ದಲ್ಲದೇ, ಊರಿನಲ್ಲಿ ವಾಸಿಸುತ್ತಿದ್ದ ಎಲ್ಲಾ ಆದಿ ವಾಸಿಗಳ ಕೋವಿಡ್ ಪರೀಕ್ಷೆ ನಡೆಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸದ್ಯ ಇವರ ಸೇವೆಯನ್ನು ಗುರುತಿಸಿರುವ ಕೇರಳದ ನೂತನ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮೆಚ್ಚುಗೆ ವ್ಯಕ್ತಪಡಿಸಿ ಸಿಬ್ಬಂದಿಗಳಿಗೆ ಕರೆ ಮಾಡಿ, ಅಭಿನಂದನೆ ಸಲ್ಲಿಸಿದ್ದಾರೆ.ಬಳಿಕ ವೈದ್ಯಕೀಯ ತಂಡ ಗ್ರಾಮಕ್ಕೆ ತಲುಪಲು ಹರಸಾಹಸ ಪಟ್ಟ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದರು.

ವೈದ್ಯಕೀಯ ತಂಡದಲ್ಲಿ ಡಾ.ಸುಕನ್ಯಾ, ಆರೋಗ್ಯ ನಿರೀಕ್ಷಕ ಸುನಿಲ್ ವಾಸು, ಕಿರಿಯ ಆರೋಗ್ಯ ನಿರೀಕ್ಷಕ ಶೈಜ್ ಮತ್ತು ಚಾಲಕ ಸಜೇಶ್ ಅವರು ಇದ್ದರು‌.

ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿ ಗ್ರಾಮದಿಂದ 20 ಕಿ.ಮೀ.‌ ದೂರದಲ್ಲಿರುವ ಮುರುಗುಲಾ ಗ್ರಾಮದಲ್ಲಿ ಸುಮಾರು 100 ಮಂದಿ ಆದಿವಾಸಿಗಳು ವಾಸಿಸುತ್ತಿದ್ದಾರೆ. ಅವರಲ್ಲಿ ಇರುಲಾ, ಮುದುಗರ್ ಹಾಗೂ ಕುರುಂಬಾ ಜನಾಂಗದವರಿದ್ದಾರೆ.

ನದಿಯನ್ನು ದಾಟಿ ತಂಡವು ಗ್ರಾಮಕ್ಕೆ ತಲುಪಿದ ನಂತರ 30 ಕ್ಕೂ ಹೆಚ್ಚು ಜನರ ಕೋವಿಡ್ ಪರೀಕ್ಷೆ ನಡೆಸಿದಾಗ ಅದರಲ್ಲಿ ಏಳು ಮಂದಿಗೆ ಕೋವಿಡ್ ಪಾಸಿಟಿವ್ ಇರುವುದು ಕಂಡು ಬಂತು. ಬಳಿಕ ಅವರನ್ನು ಪುತೂರ್ ಕೋವಿಡ್ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಅಟ್ಟಪ್ಪಾಡಿ ಮೂಲದ ಬುಡಕಟ್ಟು ಕಾರ್ಯಕರ್ತ ಒಡಿಯನ್ ಲಕ್ಷ್ಮಣನ್ ಅವರು ಕೇರಳ ಸರ್ಕಾರದ ಡೊಮಿಸಿಲಿಯರಿ ಕೇರ್ ಕೇಂದ್ರಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಕೋವಿಡ್ ಪರೀಕ್ಷೆ ನಡೆಸಲು ಮತ್ತು ವ್ಯಾಕ್ಸಿನೇಷನ್ ಪಡೆಯಲು ಜನರನ್ನು ಪ್ರೋತ್ಸಾಹಿಸುತ್ತದೆ. ಕಾಲ್ನಡಿಗೆಯಲ್ಲಿ ನದಿಯನ್ನು ದಾಟಿ ಬಂದು ಸೇವೆ ನೀಡಿದ ಪುತೂರ್ ಡೊಮಿಸಿಲಿಯರಿ ಕೇರ್ ಸೆಂಟರ್‌ ನ ವೈದ್ಯಕೀಯ ಸಿಬ್ಬಂದಿಗಳ ಧೈರ್ಯವನ್ನು ನಾವು ನಿಜವಾಗಿಯೂ ಪ್ರಶಂಸಿಸುತ್ತೇವೆ ಎಂದು ಹೇಳಿದ್ದಾರೆ.