ಸನ್ಮಾರ್ಗ ವಾರ್ತೆ
ಕುಂದಾಪುರ: ಉಡುಪಿ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕಾಣಿಸಿಕೊಂಡಿದ್ದ ಹಿಜಾಬ್ ವಿವಾದ ಇದೀಗ ಕುಂದಾಪುರಕ್ಕೂ ವ್ಯಾಪಿಸಿದೆ. ಸರ್ಕಾರದ ಸ್ಪಷ್ಟ ಸುತ್ತೋಲೆಯ ನಡುವೆಯೂ ಹಿಜಾಬ್ ಧರಿಸಿ ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ವಿದ್ಯಾರ್ಥಿಯನಿಯರು ಬಂದಿದ್ದು, ಅವರನ್ನು ಕಾಲೇಜಿನ ಗೇಟಿನಲ್ಲಿಯೇ ತಡೆಯಲಾಗಿದೆ.
ಸರ್ಕಾರ ಹೊರಡಿಸಿದ ಸುತ್ತೋಲೆಯಲ್ಲಿ ಕುಂದಾಪುರದ ಉಲ್ಲೇಖವಿಲ್ಲ ಎಂದು ವಿದ್ಯಾರ್ಥಿನಿಯರು ಈ ಸಂದರ್ಭದಲ್ಲಿ ಪ್ರಾಂಶುಪಾಲರೊಂದಿಗೆ ವಾಗ್ವಾದ ನಡೆಸಿದ್ದಾರೆ. ಆದರೆ ಸುತ್ತೋಲೆ ಇಡೀ ರಾಜ್ಯಕ್ಕೆ ಅನ್ವಯ ಎಂದು ಪ್ರಾಂಶುಪಾಲರು ಅವರ ಮನವೊಲಿಸುವ ಯತ್ನ ಮಾಡಿದರು.
ಹಿಜಾಬ್ ಧರಿಸಿ ಕಾಲೇಜಿಗೆ ಬರುವುದಕ್ಕೆ ಪ್ರತಿಯಾಗಿ ನಿನ್ನೆ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಲ್ಯ ಧರಿಸಿ ಕಾಲೇಜಿಗೆ ಆಗಮಿಸಿದ್ದರು. ಆದರೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮನವೊಲಿಕೆಯ ನಂತರ ಹಿಂದೂ ಹುಡುಗರು ಸಮವಸ್ತ್ರ ಧರಿಸಿ ಬಂದಿದ್ದರು. ಆದರೆ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದಾರೆ.
ಸರ್ಕಾರದ ಸುತ್ತೋಲೆಯ ಪ್ರಕಾರ ಸಮವಸ್ತ್ರ ಹೊರತುಪಡಿಸಿ ಬೇರೆ ವಸ್ತ್ರ ಧರಿಸಿ ಬರಲು ಅವಕಾಶವಿಲ್ಲ ಎಂದು ವಿದ್ಯಾರ್ಥಿನಿಯರಿಗೆ ಹೇಳಿರುವ ಪ್ರಾಂಶುಪಾಲರು ಹಿಜಾಬ್ ಕಳಚಿ ಕಾಲೇಜಿಗೆ ಬರುವಂತೆ ವಿದ್ಯಾರ್ಥಿನಿಯರಿಗೆ ಸೂಚಿಸಿದ್ದಾರೆ. ಇನ್ನು ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಮಡಿಕೇರಿ ಶಾಸಕ ಕೆ.ಜಿ ಬೋಪಯ್ಯ, ಎಲ್ಲರಿಗೂ ಒಂದೇ ರೀತಿ ನಿಯಮಗಳಿವೆ, ಒಂದೇ ರೀತಿಯ ಸಮವಸ್ತ್ರ ಧರಿಸಬೇಕು ಎಂದು ಹೇಳಿದ್ದಾರೆ. ಈ ವಿವಾದ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.













