ಲೆಫ್ಟಿನೆಂಟ್ ಸಾಹೇಬರೇ, ನೀವು ಶಾಂತಿಯುತ ಲಡಾಖ್‌ನಲ್ಲಿ ಉಗ್ರವಾದದ ಬೀಜ ಬಿತ್ತಲು ಯತ್ನಿಸುತ್ತಿದ್ದೀರಿ: ಸೋನಂ ವಾಂಗ್‌ಚುಕ್

0
195

ಸನ್ಮಾರ್ಗ ವಾರ್ತೆ

ಜಮ್ಮು: ಲಡಾಖ್‌ನ ಮಂಜುಗಡ್ಡೆಗಳು, ಪರ್ವತಗಳು, ನೆಲ ಹಾಗೂ ಜನರನ್ನು ರಕ್ಷಿಸಲು ಲಡಾಖ ನ್ನು ಸಂವಿಧಾನದ ಆರನೇ ಪರಿಚ್ಛೇದದಡಿ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಮ್ಯಾಗ್ಸಸ್ಸೆ ಪ್ರಶಸ್ತಿ ವಿಜೇತ ಸೋನಂ ವಾಂಗ್‌ಚುಕ್ ನಡೆಸುತ್ತಿದ್ದ ಐದು ದಿನಗಳ ಹವಾಮಾನ ಉಪವಾಸ ಸತ್ಯಾಗ್ರಹ ಸೋಮವಾರ ಅಂತ್ಯಗೊಂಡಿದ್ದು, ಅವರು ಕೊಂಚ ವಿಚಲಿತರಾಗಿದ್ದಂತೆ ಕಂಡು ಬಂದರು.

ಒಂದು ಕಾಲದ ಪ್ರಧಾನಿ ನರೇಂದ್ರ ಮೋದಿಯ ಕಟ್ಟಾ ಬೆಂಬಲಿಗರಾಗಿದ್ದ ಎಂಜಿನಿಯರ್ ಮತ್ತು ಸಂಶೋಧಕ ಸೋನಂ ವಾಂಗ್‌ಚುಕ್, 2019 ರ ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು. ಈಗ ಹವಾಮಾನ ಹೋರಾಟಗಾರರಾಗಿ ಬದಲಾಗಿದ್ದು, ಶಾಂತಿಯುತ ನಾಡಿನಲ್ಲಿ ಲಡಾಖ್ ಆಡಳಿತವು ಉಗ್ರವಾದವನ್ನು ಬಿತ್ತುವ ಪ್ರಯತ್ನ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.

ತಮ್ಮ ಪರ್ಯಾಯ ಲಡಾಖ್‌ನ ಹಿಮಾಲಯ ಸಂಸ್ಥೆಯಲ್ಲಿ ಹವಾಮಾನ ಉಪವಾಸ ಸತ್ಯಾಗ್ರಹವನ್ನು ಪೂರ್ಣಗೊಳಿಸಿದ ವಾಂಗ್‌ಚುಕ್, ಲಡಾಖ್‌ನ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ, 2019 ರ ಹಿಂದಿನ ಜಮ್ಮು-ಕಾಶ್ಮೀರ ರಾಜ್ಯದ ಭಾಗವಾಗಿದ್ದಾಗಲೇ ಲಡಾಖ್ ಜನತೆ ಉತ್ತಮವಾಗಿದ್ದರು ಎನಿಸುತ್ತಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, “ನನಗೆ ಮುಚ್ಚಳಿಕೆಯೊಂದಕ್ಕೆ ಸಹಿ ಮಾಡಲು ಸೂಚಿಸಲಾಯಿತು. ನಾನು ಮುಚ್ಚಳಿಕೆಗೆ ಸಹಿ ಮಾಡುವಂತೆ ಮಾಡಲು ನನ್ನ ಶಾಲೆಯ ಮೂವರು ಶಿಕ್ಷಕರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಯಿತು. ಲೆಫ್ಟಿನೆಂಟ್ ಗಮರ್ನರ್ ಸಾಹೇಬರ ಸೂಚನೆ ಮೇರೆಗೆ ಈ ಎಲ್ಲ ತಂತ್ರಗಳನ್ನು ಬಳಸಿದ್ದರು. ಲೆಫ್ಟಿನೆಂಟ್ ಸಾಹೇಬರೇ, ನೀವು ಶಾಂತಿಯುತ ಲಡಾಖ್‌ನಲ್ಲಿ ಉಗ್ರವಾದದ ಬೀಜ ಬಿತ್ತಲು ಯತ್ನಿಸುತ್ತಿದ್ದೀರಿ ಎಂದು ಹೇಳಲು ಬಯಸುತ್ತೇನೆ. ಯಾವ ಬಗೆಯಲ್ಲಿ ಯುವಕರನ್ನು ನಿರುದ್ಯೋಗಿಗಳನ್ನಾಗಿಸಿ, ಅವರನ್ನು ಶೋಷಿಸಲಾಗುತ್ತಿದೆಯೊ, ಅದರಿಂದಲೇ ಇದು ಸಾಧ್ಯವಾಗಲಿದೆ. ಆದರೆ, ನೆನಪಿಡಿ, ನಾವು ಇದಾಗಲು ಬಿಡುವುದಿಲ್ಲ” ಎಂದು ತಮ್ಮ ವಿಡಿಯೊ ಹೇಳಿಕೆಯಲ್ಲಿ ಕಿಡಿ ಕಾರಿದ್ದಾರೆ.