ಗುಡ್ಡಕುಸಿತಗಳಿಗೆ ಗಣಿಗಾರಿಕೆ ಕಾರಣ: ಪರಿಸರ ಕಾರ್ಯಕರ್ತರು

0
425

ತಿರುವನಂತಪುರಂ,ಆ. 14: ಗುಡ್ಡ ಕುಸಿತಗಳಿಗೆ ಗಣಿಗಾರಿಕೆಯೇ ಕಾರಣ ಎಂದು ಪರಿಸರ ಕಾರ್ಯಕತರು ಹೇಳಿದ್ದಾರೆ. ಕೇರಳ ಸರಕಾರ ಪರಿಸರ ಅಧ್ಯಯನ ನಡೆಸದೆ ಪಶ್ಚಿಮಘಟ್ಟದ ಬೆಟ್ಟಗಳಲ್ಲಿ ಗಣಿಗಾರಿಕೆ ಮತ್ತು ನಿರ್ಮಾಣ ಕಾಮಗಾರಿಗೆ ಅನುಮತಿ ನೀಡಿದ್ದು ಇಂತಹ ದೊಡ್ಡ ದುರಂತಗಳಿಗೆ ಕಾರಣವಾಯಿತು ಎಂದು ಪರಿಸರ ಕಾರ್ಯಕರ್ತರಾದ ಡಾ.ವಿ.ಎಸ್ ವಿಜಯನ್, ಸುಗತಕುಮಾರಿ, ಜಾನ್‍ಪೆರವಂದಾನಂ, ಸಿ.ಆರ್. ನೀಲಕಂಠನ್ ಮೊದಲಾದವರು ಹೇಳಿದ್ದಾರೆ. ಕೇರಳದ ಕಲ್ಲಿಕೋಟೆ,ವಯನಾಡ್, ಮಲಪ್ಪುರಂ ಜಿಲ್ಲೆಗಳಲ್ಲಿ ಭೂಕುಸಿತ, ಗುಡ್ಡಕುಸಿತಗಳು ಗಣಿಗಾರಿಕೆಯಿಂದಾಗಿ ಉಂಟಾಗಿವೆ ಎಂದು ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ. ಟಿ.ವಿ. ಸಜೀವ್‍‌ರವರು ಕೂಡ ತಿಳಿಸಿದ್ದಾರೆ.

2017ರ ಮಾರ್ಚ್‍ನಲ್ಲಿ ಅವರು ತಯಾರಿಸಿದ ವರದಿಯಲ್ಲಿ ರಾಜ್ಯದ ಪರಿಸರ ದುರ್ಬಲ ಪ್ರದೇಶಗಳಲ್ಲಿನ ಕ್ವಾರಿಗಳ (ಗಣಿಗಳ) ಮ್ಯಾಪ್ ತಯಾರಿಸಿದ್ದರು. ಅದರ ಪ್ರಕಾರ ಈಗ ಕುಸಿತ ಕಂಡಿರುವ ಬೆಟ್ಟಗಳ ಯಾವುದಾದರೊಂದು ಭಾಗದಲ್ಲಿ ಬಂಡೆಗಳಿವೆ. ಮೇಲ್ತುದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರನ್ನು ಕಟ್ಟಿಡುವ ಬಂಡೆಗಳು ಕೂಡ ಇದ್ದು ಇದು ಕುಸಿತಕ್ಕೆ ಕಾರಣವಾಗುತ್ತಿದೆ ಮತ್ತು ಬಂಡೆಗಳನ್ನು ಒಡೆಯಲು ಬಳಸಿದ ಸ್ಫೋಟಕಗಳಿಂದ ಇಡೀ ಬೆಟ್ಟಗಳೇ ಅದುರುತ್ತವೆ. ವಜ್ರದ ನಂತರ ಅತ್ಯಂತ ತೀವ್ರತೆರನಾದ ಶಬ್ದವು ಬಂಡೆಗಳ ಮೂಲಕ ಸಂಚರಿಸುತ್ತದೆ. ಪ್ರತಿಯೊಂದು ಸ್ಫೋಟ ನಡೆದಾಗ ಪಶ್ಚಿಮಘಟ್ಟ ಕಂಪಿಸಿ ಬಿರುಕು ಆಗುತ್ತದೆ. ಮಳೆಗಾಲದಲ್ಲಿ ಬಿರುಕುಗಳಲ್ಲಿ ಮಳೆ ನೀರು ಹರಿಯುವುದರಿಂದ ಭೂಕುಸಿತ ಆಗುತ್ತಿದೆ ಎಂದು ಪರಿಸರ ಕಾರ್ಯಕರ್ತರು ಹೇಳಿದ್ದಾರೆ.