ಮಧುಕರ ಶೆಟ್ಟಿಗೆ ಬಿಗ್ ಸೆಲ್ಯೂಟ್

0
721

ಆಯಿಷತುಲ್ ಅಫೀಫಾ

ಕರ್ತವ್ಯಬದ್ಧ ಪೊಲೀಸ್ ಅಧಿಕಾರಿಗಳ ಸಾವು, ಕೊಲ್ಲಲ್ಪಟ್ಟರು ಎಂಬುವುದು ದೇಶಕ್ಕೆ ತುಂಬಲಾರದ ನಷ್ಟ. ಪ್ರೀತಿಪಾತ್ರರನ್ನು ಅಗಲಿದ್ದಾರೆಂಬ ಒಕ್ಕಣೆಯೊಂದಿಗೆ ಮತ್ತೊಂದು ದುಃಖ ಭರಿತ ಸುದ್ದಿಯಾಗಿ ಕೆಲಕಾಲ ಉಳಿಯುತ್ತದೆ ಮತ್ತು ಕ್ರಮೇಣ ಮರೆತುಹೋಗುತ್ತೇವೆ. ಇಂತಹ ಅಧಿಕಾರಿಗಳಿಗೆ ಅವರ ಪ್ರೀತಿಪಾತ್ರರು ಪ್ರತಿದಿನ ನೀಡುವ ಗುಡ್ ಬೈ ಕಿಸ್ ಗಳು ನಿಜವಾಗಲೂ ವಿದಾಯ ಮುತ್ತುಗಳಾಗಿ ಬದಲಾಗಬಹುದು . ಅವರು ಮತ್ತೆಂದೂ ಮರಳಿ ಮನೆಗೆ ಬಾರದಿರಬಹುದು . ಹಾಗಂತ ಸಾವು ನಿಶ್ಚಿತ, ಹುಟ್ಟು ಎಂಬ ವಾಸ್ತವದೊಂದಿಗೆ ಬೆನ್ನಿಗಂಟಿಕೊಂಡಿರುವ ಸತ್ಯ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದೆಂದರೆ ಯಾರಿಗಾದರೂ ತುಂಬಲಾರದ ನಷ್ಟವೇ , ಅಪಘಾತಗಳು ಮತ್ತು ದುರಂತಗಳು ಪ್ರತಿದಿನವು ಎಲ್ಲ ವೃತ್ತಿಯ ಜನರ ಮತ್ತು ಕುಟುಂಬದ ಮೇಲೆ ಪರಿಣಾಮ ಬೀರುತ್ತದೆಯಾದರೂ ಪೊಲೀಸ್ ಅಥವಾ ಇನ್ನಿತರ ಕಾನೂನು ಜಾರಿಗೊಳಿಸುವ ವೃತ್ತಿಯಲ್ಲಿ ತೊಡಗಿಕೊಂಡಿರುವವರ ಸ್ಥಿತಿಯು ವಿಭಿನ್ನವಾಗಿದೆ . ಕುಟುಂಬಿಕರು ಅವರನ್ನು ಗುಂಡು ನಿರೋಧಕ ವಸ್ತ್ರಗಳಲ್ಲಿ ನೋಡಿರುತ್ತಾರೆ, ಕೆಲಸದ ಅಪಾಯದ ಬಗ್ಗೆ ತಿಳಿದಿರುತ್ತದೆ. ನಮ್ಮ ಪ್ರೀತಿಪಾತ್ರರು ಮರಳಿ ಬರುತ್ತಾರೆಯೇ ಇಲ್ಲವೇ ಎಂಬುವುದು ಸಂಶಯ ಪ್ರಶ್ನೆಯಾಗಿರುವಾಗ ಪೊಲೀಸರಾಗಿ ಅಥವಾ ಅವರ ಕುಟುಂಬಿಕರಾಗಿ ಬದುಕು ಸವಾಲಿನ ವಿಷಯವೇ ಸರಿ.

ಅಪರಾಧ ಘಟಿಸಲು ಸಮಯವೆಂಬುವುದಿಲ್ಲ . ಕ್ರೈಂ ಡಸ್ ನಾಟ್ ಸ್ಲೀಪ್ ಎಂಬ ಮಾತಿದೆ. ಆದ್ದರಿಂದ ಪೊಲೀಸರು 24=7 ಲಭ್ಯವಾಗಿರಬೇಕು. ಎಲ್ಲರೂ ನಿದ್ದೆಯ ವಿಶ್ರಾಂತಿಯಲ್ಲಿರುವಾಗ ಅವರು ಕರ್ತವ್ಯ ನಿರತರಾಗಿರಬಹುದು, ಮತ್ತು ಎಲ್ಲರೂ ಎದ್ದಿರುವಾಗ ಅವರು ನಿದ್ದೆ ಮಾಡಬಹುದು . ಕರ್ತವ್ಯದ ನಿಮಿತ್ತವು ತಮ್ಮ ಮಕ್ಕಳ ಹುಟ್ಟುಹಬ್ಬ, ಶಾಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿರಬಹುದು, ಸಂಗಾತಿಯೊಡನೆ ಮದುವೆ ವಾರ್ಷಿಕೋತ್ಸವ ಆಚರಿಸಲು ತೊಡಕಾಗಬಹುದು. ಹಬ್ಬ ಹರಿದಿನಗಳಲ್ಲಿ ಕುಟುಂಬಿಕರೊಡನೆ ಭಾಗಿಯಾಗಲು, ಒಂದು ಹಾಲಿಡೇ ಸಹ ಹೋಗಲು ತೊಡಕಾಗಬಹುದು. ಇದೆಲ್ಲವು ಜೀವನವನ್ನು ಮತ್ತಷ್ಟು ಸುಮಧುರಗೊಳಿಸುವ, ಬದುಕನ್ನು ಉದ್ದೀಪನಗೊಳಿಸುವ ಸಣ್ಣ ಪುಟ್ಟ ಅಂಶಗಳು. ನಮ್ಮ ರಕ್ಷಣೆಗಾಗಿ ಪೊಲೀಸರು ಮತ್ತು ಕುಟುಂಬಿಕರು ತ್ಯಾಗ ಮಾಡುವುದು ಕೇವಲ ಅವರ ಸಮಯ ಮಾತ್ರವನ್ನಲ್ಲ ಅವರ ಕೌಟುಂಬಿಕ ಜೀವನವನ್ನು. ಅದರಿಂದ ದೊರಯುವ ಪುಟ್ಟ ಸಂತೋಷಗಳನ್ನು ಸಹ. ಹಾಗಾಗಿ ಪೊಲೀಸರು ವ್ಯಾಪಕವಾದ ಒತ್ತಡವನ್ನು ಅನುಭವಿಸುತ್ತಾರೆ. ಇದು ಆರೋಗ್ಯದ ಅಪಾಯಗಳಿಗೂ ಕಾರಣವಾಗಬಹುದೆಂದು ಹಲವಾರು ಅಧ್ಯಯನಗಳು ತಿಳಿಸಿವೆ.

ಬ್ಯುರೋ ಆಫ್ ಪೊಲೀಸ್ ರಿಸರ್ಚ್ ಆಂಡ್ ಡೆವಲಪ್ಮೆಂಟ್ ಮತ್ತು ಅಡ್ಮಿನಿಸ್ಟ್ರೇಟಿವ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾ ಪ್ರಕಟಿಸಿದ ವರದಿಯಲ್ಲಿ ಶೇ 90% ಪೊಲೀಸ್ ಅಧಿಕಾರಿಗಳು ದಿನಕ್ಕೆ 8 ಗಂಟೆಗಳ ಕಾಲ ಕೆಲಸಮಾಡುತ್ತಾರೆ. 73% ಪೊಲೀಸರಿಗೆ ತಿಂಗಳಲ್ಲಿ ವಾರಕ್ಕೆ ಒಂದು ರಜೆಯೂ ದೊರೆಯುವುದಿಲ್ಲ. ಅಪರೂಪದ ರಜಾದಿನಗಳಲ್ಲೂ ಸಹ ಅವರಿಗೆ ಕರ್ತವ್ಯಕ್ಕಾಗಿ ಕರೆಬರಬಹುದು ಎಂದಿದೆ.

ಪೊಲೀಸ್ ಎಂಬುವುದು ಕಾಕತಾಳೀಯವಾಗಿ ದೊರೆಯುವ ವೃತ್ತಿಯಲ್ಲ. ಅದರ ಹಿಂದೆ ಅಪಾರ ಭೌತಿಕ ಮತ್ತು ಭೌದ್ದಿಕ ಶ್ರಮವಿದೆ. ನಾಗರಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಧ್ಯೇಯವಿದೆ ಮತ್ತು ಅವರು ಮಾಡಬೇಕಾದ ತ್ಯಾಗಗಳ ಕುರಿತು ತಿಳಿದೇ ಪೊಲೀಸರಾಗುವತ್ತ ತಮ್ಮೆಲ್ಲ ಶ್ರಮವನ್ನು ವ್ಯಯಿಸಿರುತ್ತಾರೆ. ಪೊಲೀಸನೊಬ್ಬನ ಸಾವಿನೊಂದಿಗೆ ಎಲ್ಲವೂ ಮುಕ್ತಾಯವಾಗುತ್ತದೆ. ಆದರೆ ಸಮಾಜದ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ಕರ್ತವ್ಯನಿರತ ಅಧಿಕಾರಿಯೊಬ್ಬರ ಸಾವಿನಲ್ಲಿ ಸಂಪೂರ್ಣ ಸಮಾಜದ ಮೇಲೆ ಅವರ ಮತ್ತು ಅವರ ಮನೆಯವರ ಋಣಭಾರವಿರುತ್ತದೆ. ನಮ್ಮ ದೇಶದಲ್ಲಿ ಇಂತಹ ಪೋಲೀಸರ ಉದಾಹರಣೆ ಅಪಾರ.

ಸಾಮಾನ್ಯವಾಗಿ ನಾಗರಿಕರಲ್ಲಿ ಪೊಲೀಸರೆಂದರೆ ಅವ್ಯಕ್ತ ಭಯದೊಂದಿಗೆ, ಕಣ್ಣಲ್ಲಿ ರಕ್ತ ಇಲ್ಲದವರು, ಬೈಗುಳಗಳ ಸುರಿಮಳೆ ಗೈಯುವವರು ಧೂರ್ತರೆಂಬ ಭಾವನೆಯಿದೆ, ಆದರೆ ಖಂಡಿತವಾಗಿಯೂ ಅವರು ಹಾಗಲ್ಲ. 2014 ರ ಕಂತಿನಲ್ಲಿ ಪ್ರಸಾರವಾದ ಸತ್ಯಮೇವ ಜಯತೆ ಕಾರ್ಯಕ್ರಮದಲ್ಲಿ ಮನಶಾಸ್ತ್ರಜ್ಞರೊಬ್ಬರು ಪೋಲೀಸರ ಬಗ್ಗೆ ಮಾತನಾಡುತ್ತ ತಮ್ಮ ಕೆಲಸದ ಅವಧಿಯಲ್ಲಿ ಅಪರಾಧಿಗಳನ್ನು ಹೊಡೆದ ಪರಿಣಾಮವಾಗಿ ಅನೇಕರು ಆತಂಕ ಮತ್ತು ಖಿನ್ನತೆ ಬಲಿಯಾಗಿದ್ದರೆಂದು ಹೇಳಿದ್ದರು. ಹೈದರಾಬಾದಿನಲ್ಲಿ ಯಾರೊ ಬಿಟ್ಟುಹೋದ ತನ್ನ ಸುಪರ್ದಿಗೆ ಬಂದು ಅನಾಥ ಮಗುವಿಗೆ ಪೊಲೀಸರೊಬ್ಬರು ಹಾಲುಣಿಸುತ್ತಾರೆ. ಇತ್ತೀಚೆಗಷ್ಟೇ ನಿಧನರಾದ, ಅಪರಾಧಿಗಳಿಗೆ ಸಿಂಹಸ್ವಪ್ನವಾಗಿದ್ದ, ನೇರ ವ್ಯಕ್ತಿತ್ವದ ಧಕ್ಷ ಅಧಿಕಾರಿ ಮಧುಕರ ಶೆಟ್ಟಿಯವರ ಪಾರ್ಥಿವ ಶರೀರವನ್ನು ಅವರ ಸಹೋದ್ಯೋಗಿಯೊಬ್ಬರು ಅವರಿಷ್ಟದ ಹಾಡಿನ ಮೂಲಕ ಬಿಳ್ಕೊಟ್ಟರು. ಸುತ್ತಲೂ ನೆರೆದಿದ್ದ, ಸಾವು ಸಾಮಾನ್ಯವೆನ್ನುವ ವೃತ್ತಿಯಲ್ಲಿರುವ ಪೊಲೀಸರೆಲ್ಲರೂ ಕಣ್ಣೀರಿನಲ್ಲಿ ಮುಳುಗಿದ್ದರು. ಈ ಸನ್ನಿವೇಶವು ಎಂಥವರ ಹೃದಯವನ್ನೂ ತಟ್ಟದಿರಲಾರದು. ಇದು ಪೊಲೀಸರು ಭಾವನಾತ್ಮಕವಾಗಿ ಮಿಡಿಯಬಲ್ಲರು, ಅವರು ನಮ್ಮ ನಿಮ್ಮಂತೆಯೇ ಮನುಷ್ಯರು ಎಂಬುವುದಕ್ಕೆ ಸಾಕ್ಷಿ. ಸಾರ್ವಜನಿಕರೊಂದಿಗಿನ ಅವರ ನಡವಳಿಕೆ ಒತ್ತಡ , ಕೌಟುಂಬಿಕ ಜೀವನದ ಕೊರತೆ, ಅವಿಶ್ರಾಂತ ದುಡಿಮೆ ಮತ್ತು ಕೆಟ್ಟ ರಾಜಕೀಯ ಬೆಳವಣಿಗೆಯ ಅಭಿವ್ಯಕ್ತಿಯಾಗಿದೆ.

ಪ್ರಕೃತಿಯಲ್ಲಿ ಒಳ್ಳೆಯದು, ಕೆಟ್ಟದು ಎರಡೂ ಮಿಳಿತವಾಗಿದೆ. ಯಾವುದು ಮೇಲುಗೈ ಸಾಧಿಸುತ್ತದೆ ಎನ್ನುವುದರ ಮೇಲೆ ವ್ಯಕ್ತಿತ್ವ ತೀರ್ಮಾನವಾಗುತ್ತದೆ. ಹಾಗೆ ಪೊಲೀಸರಲ್ಲಿ ಭ್ರಷ್ಟರು, ಧಕ್ಷರು ಇದ್ದಾರೆ. ಭ್ರಷ್ಟರ ಅಬ್ಬರದಲ್ಲಿ ನೆಚ್ಚಿಕೊಂಡ ಆದರ್ಶಕ್ಕೆ ಬದ್ಧರಾಗಿ ಬಯಸಿ ಪಡೆದ ವೃತ್ತಿಯನ್ನು ನಿಷ್ಠೆಯಿಂದ ನೆರೆವೇರಿಸಿದ ದಕ್ಷ ಅಧಿಕಾರಿಗಳ ಸಾಹಸ ತ್ಯಾಗವನ್ನು ಮರೆಯಬಾರದು.

ಪೊಲೀಸ್ ಸಮವಸ್ತ್ರದಲ್ಲಿ ನನ್ನ ನೋಡಿದ ನನ್ನ ಮಗ, ನೀನು ನನ್ನ ಕಾಮಿಕ್ ಬುಕ್ ನಲ್ಲಿ ಬರುವ ಸೂಪರ್ ಹೀರೋನಂತೆ ಕಾಣಿಸ್ತಾ ಇದ್ದೀಯ ಎಂದಾಗ ನಾನು ಆಯ್ದುಕೊಂಡ ವೃತ್ತಿಯ ಬಗ್ಗೆ ತೃಪ್ತಿಯಾಯಿತು. ಜೀವನ ಸಾರ್ಥಕತೆಗೆ ಇದಕ್ಕಿಂತ ಇನ್ನೇನು ಬೇಕು. ಇದು ಪೊಲೀಸರೊಬ್ಬರ ಮನದಾಳದ ಮಾತುಗಳು. ನಮ್ಮನ್ನು ರಕ್ಷಣೆ ಮಾಡುವ ನಮ್ಮ ಪೊಲೀಸರು ನಮ್ಮ ಸೂಪರ್ ಹೀರೋಗಳೆ. ಕರ್ತವ್ಯದಲ್ಲಿ ಧಕ್ಷತೆ ಮೆರೆದ ಹೇಮಂತ್ ಕರ್ಕರೆ, ಅಶೋಕ್ ಕಾಂಟೆ, ಸುಭೋದ್ ಸಿಂಗ್, ಮಧುಕರ ಶೆಟ್ಟಿಯಂತಹ ಇನ್ನಿತರ ಅಧಿಕಾರಿಗಳ ಚಿತೆಗೆ ಬೆಂಕಿಯಿಡುವಾಗ ಅವರ ಮಕ್ಕಳಿಗೂ ಅವರಲ್ಲಿ ಒಬ್ಬ ಸೂಪರ್ ಹೀರೋನನ್ನು ಕಂಡಿರಬಹುದು. ಆದರ್ಶಕ್ಕೆ ನಿಷ್ಠರಾಗಿ ಬದುಕುತ್ತಿರುವ ಮತ್ತು ಅದಕ್ಕಾಗಿ ಬಲಿಯಾಗುತ್ತಿರುವ ನಮ್ಮ ಪೊಲೀಸರು ಮತ್ತು ಅವರ ಕುಟುಂಬಿಕರಿಗೆ ಸಲ್ಯೂಟ್ ಹೊಡೆಯಲೇ ಬೇಕು.