ಸನ್ಮಾರ್ಗ ವಾರ್ತೆ
ಬೆಂಗಳೂರು: 6ನೇ ತರಗತಿಯ ಸಮಾಜವಿಜ್ಞಾನ ಪಠ್ಯ ಪುಸ್ತಕದಲ್ಲಿರುವ ಹೊಸ ಧರ್ಮಗಳ ಉದಯ ಪಾಠವನ್ನು ಬೋಧನೆ ಮಾಡಬಾರದು ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸಬಾರದು ಎಂಬ ಸುತ್ತೋಲೆಯನ್ನು ಸರಕಾರ ವಾಪಸ್ ಪಡೆಯಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ.
ಆರನೇ ತರಗತಿಯ ಸಮಾಜವಿಜ್ಞಾನ ಪಠ್ಯಪುಸ್ತಕದಲ್ಲಿ ಬರುವ ಪುಟ ಸಂಖ್ಯೆ 82 ಮತ್ತು 83ರಲ್ಲಿ ಇರುವ ‘ಹೊಸ ಧರ್ಮಗಳ ಉದಯ’ ಎಂಬ ಪಾಠವನ್ನು ಶೈಕ್ಷಣಿಕ ವರ್ಷದಲ್ಲಿ ಬೋಧನೆ ಮಾಡಬಾರದು ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸಬಾರದು ಎಂಬ ವಿವಾದಾತ್ಮಕ ಸುತ್ತೋಲೆಯನ್ನು ಸರಕಾರ ವಾಪಸ್ ಪಡೆಯಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಾದ ಅಡ್ವೊಕೇಟ್ ತಾಹಿರ್ ಹುಸೇನ್ ಆಗ್ರಹಿಸಿದರು.
ನಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ರಾಜ್ಯದ ವಿದ್ಯಾರ್ಥಿಗಳಿಗೆ ಏನನ್ನು ಬೋಧನೆ ಮಾಡಿಸಲು ಹೊರಟಿದ್ದಾರೆ, ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್,ಅಂಬೇಡ್ಕರ್ರವರು ಹೇಳಿರುವಂತೆ ಇತಿಹಾಸವನ್ನು ತಿಳಿಯದವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬ ವಾಕ್ಯ ಅತ್ಯಂತ ಸ್ಪಷ್ಟವಾಗಿದೆ ಏಕೆಂದರೆ ಹೊಸ ಧರ್ಮಗಳ ಉದಯಕ್ಕೆ ಕಾರಣ ಏನು ಎಂಬುದನ್ನು ನಾವು ಅರಿತುಕೊಳ್ಳದೆ ಮುಂದೆ ಹೋಗುವುದು ಸರಿಯಲ್ಲ ಮತ್ತು ಬಿಜೆಪಿ ಸರ್ಕಾರವು ತನ್ನ ಅಜೆಂಡಾಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸುವುದು ಕೆಲವೊಂದು ಪಾಠಗಳನ್ನು ಕೈಬಿಡಲು ಸೂಚಿಸುವುದು ಸಂವಿಧಾನಾತ್ಮಕವಾಗಿ ಸರಿಯಾದ ಕ್ರಮವಲ್ಲ, ಸತ್ಯವನ್ನು ಹೇಳಲಾರದೆ ಸುಳ್ಳನ್ನು ಹೇಳುವುದರ ಮೂಲಕ ರಾಜ್ಯದ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡಲು ಹೊರಟಿದೆ.
ಸರಕಾರ, ವಿದ್ಯಾರ್ಥಿಗಳಿಂದ ಸತ್ಯವನ್ನು ಮರೆಮಾಚಲು ನಡೆಸುತ್ತಿರುವ ಯತ್ನವನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಈ ಸಂದರ್ಭದಲ್ಲಿ ಖಂಡಿಸಿದೆ. ಅಲ್ಲದೆ ಕೂಡಲೇ ಈ ಸುತ್ತೋಲೆಯನ್ನು ವಾಪಸ್ ಪಡೆಯಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಮತ್ತು ಸಂಬಂಧಿಸಿದ ಶಿಕ್ಷಣ ಸಚಿವರನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಒತ್ತಾಯಿಸಿದೆ.












