ಅರ್ನಬ್‍ರಿಗೆ ಜೈಲಿನಲ್ಲಿ ಜೀವ ಬೆದರಿಕೆಯಿದೆ- ಆತಂಕ ವ್ಯಕ್ತಪಡಿಸಿದ ಮಹಾರಾಷ್ಟ್ರ ರಾಜ್ಯಪಾಲರು

0
709

ಸನ್ಮಾರ್ಗ ವಾರ್ತೆ

ಮುಂಬೈ,ನ.9: ಆತ್ಮಹತ್ಯೆ ಪ್ರೇರಣೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಯ ಸುರಕ್ಷೆಯ ಕುರಿತು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿ ಆತಂಕ ವ್ಯಕ್ತಪಡಿಸಿದ್ದಾರೆ. ಜೈಲಿನಲ್ಲಿ ಅರ್ನಬ್ ಗೋಸ್ವಾಮಿಯ ಮೇಲೆ ಹಲ್ಲೆ ನಡೆಯಬಹುದು. ಮನೆಯವರಿಗೂ ಅವರನ್ನು ಭೇಟಿಯಾಗಲು ಅವಕಾಶ ನೀಡುತ್ತಿಲ್ಲ ಎಂದು ರಾಜ್ಯಪಾಲರು ಹೇಳಿದರು.

ಇದೇ ವಿಷಯದಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‍ಮುಖ್‍ರನ್ನು ರಾಜ್ಯಪಾಲರು ಭೇಟಿಯಾಗಿದ್ದಾರೆ. ಅರ್ನಬ್ ಗೋಸ್ವಾಮಿಯ ಆರೋಗ್ಯದ ವಿಷಯದಲ್ಲಿಯೂ ರಾಜ್ಯಪಾಲರು ಆತಂಕ ವ್ಯಕ್ತಪಡಿಸಿದ್ದಾರೆ. ಅರ್ನಬ್ ಸಂಬಂಧಿಕರಿಗೆ ಅವರನ್ನು ಭೇಟಿಯಾಗಲು ಅವಕಾಶ ನೀಡಬೇಕೆಂದು ಅವರು ಸೂಚನೆ ನೀಡಿದ್ದಾರೆ.

ಇದೇವೇಳೆ, ಅಲಿಬಾಗ್ ಜೈಲಿನಲ್ಲಿ ಮೊಬೈಲ್ ಫೋನ್ ಉಪಯೋಗಿಸುತ್ತಿರುವುದು ಪತ್ತೆಯಾದ ಬಳಿಕ ಅರ್ನಬ್‍ರನ್ನು ಸೆಂಟ್ರಲ್ ಜೈಲಿಗೆ ವರ್ಗಾಯಿಸಲಾಗಿತ್ತು. ನವೆಂಬರ್ 18ರವರೆಗೆ ಅರ್ನಬ್‍ರ ಜೈಲು ವಾಸ ಮುಂದುವರಿಯಲಿದೆ. ಜೈಲಿನಿಂದ ಕರೆದುಕೊಂಡು ಹೋಗುತ್ತಿದ್ದಾಗ ಅರ್ನಬ್ ತನ್ನ ಜೀವ ಅಪಾಯದಲ್ಲಿದೆ ಎಂದು ಕೂಗುತ್ತಿದ್ದರು ಮತ್ತು ರಿಪಬ್ಲಿಕ್ ಟಿವಿ ವರದಿಗಾರರ ಮುಂದೆ ಜೈಲು ಅಧಿಕಾರಿಗಳ ವಿರುದ್ಧ ಆರೋಪವನ್ನೂ ಹೊರಿಸಿದ್ದರು.

ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸ್ಮೃತಿ ಇರಾನಿ ಮುಂತಾದವರು ಅರ್ನಬ್‍ರ ಬಂಧನ ಕ್ರಮವನ್ನು ಖಂಡಿಸಿದ್ದರು. ಮಾಧ್ಯಮ ಸ್ವಾತಂತ್ರ್ಯದ ಮೇಲೆ ಹಸ್ತಕ್ಷೇಪವಿದು, ತುರ್ತು ಪರಿಸ್ಥಿತಿಗೆ ಸಮಾನ ಪರಿಸ್ಥಿತಿಯಿದೆಂದು ಹೇಳಿದ್ದರು.