ಮಧ್ಯಪ್ರದೇಶದಲ್ಲಿ ಕಮಲ್‍ನಾಥ್‍ರ ಕೈಗೆ ಹಿನ್ನಡೆ: ಗುಜರಾತ್, ಕರ್ನಾಟಕದಲ್ಲೂ ಇದೇ ಗತಿ

0
458

ಸನ್ಮಾರ್ಗ ವಾರ್ತೆ

ಭೋಪಾಲ,ನ.10: ಮಧ್ಯಪ್ರದೇಶ ಉಪಚುನಾವಣೆ ನಡೆದ 28 ವಿಧಾನಸಭಾ ಸ್ಥಾನಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿದ್ದು 19 ಸೀಟುಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಎಂಟು ಕಡೆ ಮಾತ್ರ ಕಾಂಗ್ರೆಸ್‍ಗೆ ಮುನ್ನಡೆ ಇದೆ. ಒಂದು ಕಡೆ ಬಿಎಸ್ಪಿ ಮುಂದಿದೆ. ಗುಜರಾತಿನಲ್ಲಿ ನಡೆದ ಎಂಟು ಸೀಟುಗಳಲ್ಲಿ ಏಳು ಕಡೆ ಬಿಜೆಪಿ ಮುನ್ನಡೆಯಲ್ಲಿದೆ. ಒಂದು ಕಡೆ ಮಾತ್ರ ಕಾಂಗ್ರೆಸ್‍ಗೆ ಮುನ್ನಡೆ ಇದೆ. ಕರ್ನಾಟಕದಲ್ಲಿ ಎರಡು ಸ್ಥಾನಗಳ ಉಪಚುನಾವಣೆಯಲ್ಲಿ ಬಿಜೆಪಿಗೆ ಮುನ್ನಡೆ ಇದೆ.

ಕಮಲ್‍ನಾಥ್ ಸರಕಾರವನ್ನು ಕೆಳಗೆ ದೂಡಿ ಹಾಕಿ ಬಿಜೆಪಿಗೆ ಬಂದ ಸಿಂಧಿಯಾರಿಗೆ ಉಪಚುನಾವಣೆ ಪ್ರತಿಷ್ಠೆಯ ವಿಚಾರವಾಗಿತ್ತು. ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ ಶಾಸಕರನ್ನು ಗೆಲ್ಲಿಸುವುದು ಸಿಂಧಿಯಾರ ಹೊಣೆಯಾಗಿತುತ. ಸಿಂಧಿಯಾ ಕುಟುಂಬದ ಪ್ರಭಾವ ಇರುವ ಗ್ವಾಲಿಯರ್ ಚಂಬಲ್ ವಲಯದಲ್ಲಿ ಉಪಚುನಾವಣೆಯಲ್ಲಿ ಹದಿನಾರು ಕಡೆ ಬಿಜೆಪಿಯೇ ಮುಂದಿದೆ. ಸಿಂಧಿಯಾರ ಹಿಂದೆ ಬಂದ ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ನೀಡಿದ ಅಸಮಾಧಾನ ಬಿಜೆಪಿಯ ಕಾರ್ಯಕರ್ತರಲ್ಲಿದ್ದರೂ ಬಿಜೆಪಿಯೇ ಗೆಲುವಿನ ನಗೆ ಬೀರುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ.

ಸಿಂಧಿಯಾ ಪಕ್ಷಾಂತರದಿಂದ ಕಾಂಗ್ರೆಸ್‍ಗೆ ನಷ್ಟವಾದ 28 ಸೀಟುಗಳಲ್ಲಿ ಗೆದ್ದರೆ ಮಾತ್ರ ಕಮಲನಾಥ್‍ರಿಗೆ ಅಧಿಕಾರಕ್ಕೆ ಮರುಪ್ರವೇಶ ಸಾಧ್ಯ. ಆದರೆ ಶಿವರಾಜ್ ಸಿಂಗ್‍ರಿಗೆ ಒಂಬತ್ತು ಸೀಟುಗಳು ಸಿಕ್ಕರೆ ಸಾಲುತ್ತದೆ. ಸಿಂಧಿಯಾರ ತಂತ್ರವನ್ನು ಸೋಲಿಸಲು ಸಾಧ್ಯವಾಗದಿದ್ದರೆ ಕಾಂಗ್ರೆಸ್ ಇಲ್ಲಿ ತಲೆಎತ್ತುವುದು ಬಹಳ ಕಷ್ಟವಾಗಿದೆ. ಉತ್ತರ ಪ್ರದೇಶದಲ್ಲಿ ಏಳು ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಉನ್ನಾವ ಅತ್ಯಾಚಾರ ಪ್ರಕರಣದ ಆರೋಪಿ ಶಾಸಕ ಕುಲ್‍ದೀಪ್ ಸಿಂಗ್ ಸೇಂಗರ್‌ರ ತೆರವಾದ ಸ್ಥಾನವೂ ಸೇರಿದೆ. ಕರ್ನಾಟಕದ ತುಮಕೂರಿನ ಸಿರಿಯ, ಬೆಂಗಳೂರಿನ ರಾಜೇಶ್ವರಿ ನಗರದ ಉಪಚುನಾವಣೆ ಕೂಡಾ ಬಿಜೆಪಿ ಪರವಾಲುತ್ತಿದೆ.

ಛತ್ತೀಸ್‍ಗಡದಲ್ಲಿ ಒಂದು ಗುಜರಾತಿನಲ್ಲಿ ಎಂಟು ಹರಿಯಾಣದಲ್ಲಿ ಒಂದು ಝಾರ್ಕಂಡಿನಲ್ಲಿ ಎರಡು, ಮಣಿಪುರದಲ್ಲಿ ಎರಡು ನಾಗಲೆಂಡಿನಲ್ಲಿ ಎರಡು ತೆಲಂಗಾಣದಲ್ಲಿ ಒಂದು ಒಡಿಸ್ಸದಲ್ಲಿ ಎರಡು ಸ್ಥಾನಗಳ ಚುನಾವಣೆಯ ಫಲಿತಾಂಶ ಮಂಗಳವಾರವೇ ಹೊರಬರಲಿದೆ.