ಮಹಾರಾಷ್ಟ್ರ: ಸರಕಾರ ರಚಿಸುವ ಬಿಜೆಪಿಯ ಹವಣಿಕೆಗೆ ತಡೆಯೊಡ್ಡಿದ ಶಿವಸೇನೆ!

0
564

ಸನ್ಮಾರ್ಗ ವಾರ್ತೆ

ಮುಂಬೈ,ನ.2: ಮಹಾರಾಷ್ಟ್ರದಲ್ಲಿ ತಮ್ಮನ್ನು ದೂರವಿಟ್ಟು ಪ್ರಮಾಣ ವಚನ ಸ್ವೀಕರಿಸುವ ಅಧಿಕಾರಕ್ಕೆ ಬರುವ ಬಿಜೆಪಿಯ ಯತ್ನವನ್ನು ಶಿವಸೇನೆ ತಡೆದಿದೆ.

ಮುಖ್ಯಮಂತ್ರಿ ಸ್ಥಾನ ಎರಡೂವರೆ ವರ್ಷ ಪರಸ್ಪರ ಹಂಚಿಕೊಳ್ಳುವ ನಿಲುವಿನಿಂದ ಶಿವಸೇನೆ ತಾತ್ಕಾಲಿಕವಾಗಿ ದೂರವಿರುವಂತೆ ಮಾಡಲು ಅದು ಯಶಸ್ವಿಯಾಗಿದೆ.

ಗುರುವಾರದ ಮೊದಲು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರಕ್ಕೆ ಬರಲು ಬಿಜೆಪಿ ಹವಣಿಸಿತ್ತು. ಇದಕ್ಕಾಗಿ ವಾಂಖೆಡೆ ಸ್ಟೇಡಿಯಂ ಬುಕ್ ಮಾಡಲಾಗಿತ್ತು. ಆದರೆ ಬಿಜೆಪಿಯ ಸ್ಪೀಕರ್ ಅಭ್ಯರ್ಥಿಯನ್ನು ಸಭೆಯಲ್ಲಿ ಸೋಲಿಸುವುದಾಗಿ ಶಿವಸೇನೆ ಮುನ್ನೆಚ್ಚರಿಕೆ ನೀಡಿತು.

ಶಿವಸೇನೆಗೆ ಸಹಕರಿಸಲು ಕಾಂಗ್ರೆಸ್, ಎನ್‍ಸಿಪಿಯೂ ಒಪ್ಪಿಕೊಂಡಿತ್ತು. ಇದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿತು ಮಾತ್ರವಲ್ಲ ಬಹುಮತ ಸಾಬೀತು ಪಡಿಸುವುದಕ್ಕೆ ಫಡ್ನವಿಸ್‍ಗೆ ಸಾಧ್ಯವಿಲ್ಲ ಎಂದು ಶಿವಸೇನೆ ಸವಾಲು ಹಾಕಿತ್ತು. ಶಿವಸೇನೆಯಿಲ್ಲದೆ ಅಧಿಕಾರಕ್ಕೆ ಬಂದು ಬಹುಮತ ಸಾಬೀತುಪಡಿಸುವುದಕ್ಕೆ ಸೂಕ್ತ ಸಮಯದಲ್ಲಿ ಶಿವಸೇನೆಯನ್ನು ಒಪ್ಪಿಸುವ ಉದ್ದೇಶ ಬಿಜೆಪಿಯದ್ದಾಗಿತ್ತು.

ಪ್ರಧಾನಿ ಮೋದಿಯಂತೆ ಫಡ್ನವಿಸ್ ಸರ್ವಾಧಿಕಾರ ಸ್ವಭಾವ ತೋರಿಸುವುದು ಶಿವಸೇನೆಯ ಉದ್ಧವ್ ಠಾಕ್ರೆಗೆ ರುಚಿಸಿಲ್ಲ ಎಂದು ಪಾರ್ಟಿಯ ಮೂಲಗಳು ತಿಳಿಸಿವೆ. 50:50 ಭರವಸೆಯನ್ನು ಸೇನೆಗೆ ನೀಡಿಲ್ಲ ಎಂದು ಫಡ್ನವಿಸ್ ಹೇಳಿದ್ದು, ಉದ್ಧವ್‍ರ ಅಸಮಾಧಾನಕ್ಕೆ ಕಾರಣವಾಗಿದೆ.

ಫಡ್ನವಿಸ್ ಸಹಿತ ರಾಜ್ಯದ ನಾಯಕರಲ್ಲಿ ಯಾವುದೇ ಚರ್ಚೆಯಿಲ್ಲ. ಅಮಿತ್ ಶಾರೊಂದಿಗೆ ಮಾತ್ರ ಚರ್ಚಿಸಬಹುದು ಎಂದು ಸೇನೆಯ ಮೂಲಗಳು ಹೇಳಿವೆ. ಉಪಮುಖ್ಯಮಂತ್ರಿ, ವಿತ್ತ, ಕಂದಾಯ ಖಾತೆ ನೀಡುವ ಭರವಸೆ ಕೊಟ್ಟರೂ ಶಿವಸೇನೆ ಬೆಂಬಲಕ್ಕೆ ಸಿದ್ಧವಾಗಿಲ್ಲ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

ಹದಿನಾರು ಸಚಿವ ಖಾತೆಗಳ ವಾಗ್ದಾನ ಮಾಡಲಾಗಿತ್ತು. ಮುಖ್ಯಮಂತ್ರಿ ಸ್ಥಾನದ ತನ್ನ ನಿಲುವಿನಲ್ಲಿ ಶಿವಸೇನೆ ಅಚಲವಾಗಿದೆ. ಇದೇ ವೇಳೇ ಕಾಂಗ್ರೆಸ್, ಎನ್‍ಸಿಪಿ ಶಿವಸೇನೆಗೆ ಬೆಂಬಲ ನೀಡುವುದೇ ಎಂಬ ಸಾಧ್ಯತೆಗಳು ಈಗಲೂ ಗರಿಕೆದರಿಕೊಂಡಿದೆ.