ಮಹಾರಾಷ್ಟ್ರ: ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದವರ ಅಂಗಡಿಗಳನ್ನು ಧ್ವಂಸಗೊಳಿಸಿದ ಪಾಲಿಕೆ

0
124

ಸನ್ಮಾರ್ಗ ವಾರ್ತೆ

ಎರಡು ಬಣಗಳ ನಡುವೆ ಹಿಂಸಾಚಾರ ನಡೆದ ನಂತರ ಮಹಾರಾಷ್ಟ್ರ ಥಾಣೆ ಜಿಲ್ಲೆಯ ಮಿರಾ ಬಯಂದರ್ ಮಹಾನಗರ ಪಾಲಿಕೆ ಮುಸ್ಲಿಂ ಸಮುದಾಯ ಅಧಿಕವಿರುವ ಹೈದರಿ ಚೌಕ ಪ್ರದೇಶದಲ್ಲಿ 15 ಕಟ್ಟಡಗಳನ್ನು ನೆಲಸಮಗೊಳಿಸಿದೆ.

ಗಲಭೆಗೆ ಸಂಬಂಧಿಸಿದಂತೆ ನಾಲ್ವರು ಅಪ್ರಾಪ್ತರನ್ನು ಒಳಗೊಂಡು 15 ಮಂದಿಯನ್ನು ಪೊಲೀಸರು ಬಂಧಿಸಿದ್ದರು.

ಭಾನುವಾರ ರಾತ್ರಿ ಹೈದರಿ ಚೌಕ್‌ನಲ್ಲಿ ಒಂದು ಸಮುದಾಯದ ಗುಂಪು ಘೋಷಣೆಗಳನ್ನು ಕೂಗುತ್ತ ವಾಹನಗಳಲ್ಲಿ ಮೆರವಣಿಗೆಗೆ ತೆರಳುತ್ತಿದ್ದಾಗ ಇನ್ನೊಂದು ಸಮುದಾಯದ ಗುಂಪು ಆಕ್ಷೇಪ ವ್ಯಕ್ತಪಡಿಸಿದ ನಂತರ ಗಲಭೆ ಶುರುವಾಗಿತ್ತು.

“ನಾವು ಹೈದರಿ ಚೌಕ್‌ ಪ್ರದೇಶದ ಸುಮಾರು 15 ಕಟ್ಟಡಗಳನ್ನು ನೆಲಸಮಗೊಳಿಸಿದ್ದೇವೆ. ಈ ಕಟ್ಟಡಗಳು ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಹಾಗೂ ಕಾನೂನು ಬಾಹಿರವಾಗಿ ನಿರ್ಮಿಸಲಾಗಿದ್ದ ಕಾರಣ ಈ ಕ್ರಮ ಜರುಗಿಸಿದ್ದೇವೆ” ಎಂದು ಮಿರಾ ಬಯಂದರ್ ಮಹಾನಗರ ಪಾಲಿಕೆ ಸಾಹಾಯಕ ಆಯುಕ್ತರಾದ ಮಾರುತಿ ಗಾಯಕ್‌ವಾಡ್ ತಿಳಿಸಿದ್ದಾರೆ.

ಸ್ಥಳೀಯರು ಹೇಳುವ ಪ್ರಕಾರ, ಈ ಅಂಗಡಿ ಮಾಲೀಕರು ಅಕ್ರಮ ದಾಖಲೆಗಳನ್ನು ಹೊಂದಿದ್ದರು. ಅಲ್ಲದೆ ಯಾವುದೇ ನೋಟಿಸ್ ನೀಡದೆ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಈ ಬಗ್ಗೆ ಸಹಾಯಕ ಆಯುಕ್ತ ಗಾಯಕ್‌ವಾಡ್ ಅವರನ್ನು ವಿಚಾರಿಸಿದರೆ, ಪಾಲಿಕೆ ಪ್ರದೇಶದ ಪಾದಾಚಾರಿ ಮಾರ್ಗ, ಗಟಾರಗಳಲ್ಲಿ ಕಟ್ಟಡ ನಿರ್ಮಿಸಿದ್ದರೆ ನೋಟಿಸ್ ಅಗತ್ಯವಿಲ್ಲ. ಅಲ್ಲದೆ ನಾವು ಯಾವುದೇ ಮನೆಗಳನ್ನು ಧ್ವಂಸಗೊಳಿಸಿಲ್ಲ ಎಂದು ತಿಳಿಸಿದ್ದಾರೆ.

ನೆಲಸಮಗೊಂಡ ಬಹುತೇಕ ಕಟ್ಟಡಗಳು ಮುಸ್ಲಿಮ್ ಸಮುದಾಯವರಿಗೆ ಸೇರಿದ್ದಾಗಿದ್ದು, ಇವುಗಳಲ್ಲಿ ಕೆಲವು ಅಂಗಡಿಗಳಲ್ಲಿ ಹಿಂದೂ ಸಮುದಾಯದವರು ಬಾಡಿಗೆಗೆ ಇದ್ದರು.

ಸ್ಥಳದಲ್ಲಿ ನಿನ್ನೆಯಿಂದ(ಜ.24) ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ನಿಯೋಜಿಸಲಾಗಿದೆ. ಭದ್ರತಾ ಪಡೆಗಳು ಕೆಲವು ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿವೆ.