ಬಾಬರಿ ಮಸೀದಿ ಉರುಳಿಸಿದ ಜಾಗದಲ್ಲಿ ಮಂದಿರ ಉದ್ಘಾಟನೆ: ಮೋದಿಯದು ಅಪಾಯಕಾರಿ ಮುನ್ನುಡಿ ಎಂದ ದಕ್ಷಿಣ ಏಷ್ಯಾ ಸಂಘಟನೆ

0
171

ಸನ್ಮಾರ್ಗ ವಾರ್ತೆ

ಬಾಬರಿ ಮಸೀದಿ ನೆಲಸಮಗೊಳಿಸಿದ ಸ್ಥಳದಲ್ಲಿ ನಿರ್ಮಾಣಗೊಂಡ ಅಯೋಧ್ಯೆಯ ಶ್ರೀ ರಾಮ ಮಂದಿರದ ಉದ್ಘಾಟನೆಯಲ್ಲಿ ಭಾಗವಹಿಸಿ ಮೋದಿ “ಅಪಾಯಕಾರಿ ಮುನ್ನುಡಿ” ರಚಿಸಿದ್ದಾರೆ. ಹೀಗೆಂದು ಅಮೆರಿಕ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ 22 ದಕ್ಷಿಣ ಏಷ್ಯಾ ಮೂಲದವರ ಸಂಘಟನೆಗಳು ಜಂಟಿ ಹೇಳಿಕೆ ಬಿಡುಗಡೆಗೊಳಿಸಿವೆ.

ಅಯೋದ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ರಾಮ ಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಭಾಗವಹಿಸುವಿಕೆಯ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿವೆ. ಈ ವಿದ್ಯಮಾನವು ಭಾರತದ ಜಾತ್ಯತೀತ ಸಂವಿಧಾನವನ್ನು ಬದಲಾಯಿಸಲು ಮತ್ತು ದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಒಂದು ಪ್ರಯತ್ನವಾಗಿದೆ ಎಂಬುದು ತಮ್ಮ ಅನಿಸಿಕೆ ಎಂದು ಈ ಸಂಘಟನೆಗಳು ಹೇಳಿವೆ.

“ಪ್ರಧಾನಿ ಮೋದಿ ಮತ್ತು ಆಡಳಿತ ಪಕ್ಷದ ಇತರ ಸದಸ್ಯರು ಮತ್ತು ಆರೆಸ್ಸೆಸ್ ಪ್ರಮುಖರಿಂದ ಈ ಯೋಜಿತ ‘ಪ್ರಾಣ ಪ್ರತಿಷ್ಠಾಪನೆ”ಯು ಆರೆಸ್ಸೆಸ್ ನ ದೀರ್ಘಕಾಲಿಕ ಗುರಿಯಾದ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಹಾಗೂ ಸಂವಿಧಾನದ ಸ್ಥಾನದಲ್ಲಿ ದಲಿತ ವಿರೋಧಿ ಮತ್ತು ಪುರುಷ ಪ್ರಧಾನ ಪ್ರಾಚೀನ ಭಾರತೀಯ ಗ್ರಂಥವಾಗಿರುವ ಬ್ರಾಹ್ಮಣಿಕ ಮನುಸ್ಮೃತಿಯನ್ನು ತರುವ ನಿಟ್ಟಿನಲ್ಲಿ ಭಾರತ ಹೆಜ್ಜೆಯಿರಿಸಿದೆ ಎಂಬುದರ ಸಂಕೇತವಾಗಿದೆ,” ಎಂದು ಹೇಳಿಕೆ ತಿಳಿಸಿದೆ.

ಭಾರತದಲ್ಲಿ ಮುಸ್ಲಿಮರು, ದಲಿತರು, ಕ್ರೈಸ್ತರು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧದ ದೌರ್ಜನ್ಯಗಳನ್ನು ಧೈರ್ಯದಿಂದ ವಿರೋಧಿಸುವವರೆಲ್ಲರೊಂದಿಗೆ ತಾವು ನಿಲ್ಲುವುದಾಗಿ ಈ ಸಂಘಟನೆಗಳು ಹೇಳಿವೆ.